ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಾಯಕ್ಕೆ ಉತ್ತೇಜನ ನೀಡಿದ ಮಳೆ

ರೈತರನ್ನು ಹೊಲದತ್ತ ಆಹ್ವಾನಿಸಿದ ಮುಂಗಾರು: ಕೃಷಿ ಚಟುವಟಿಕೆ ಚುರುಕು
Last Updated 24 ಜೂನ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಮಳೆ ಆಗಾಗ ಸಿಂಚನವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ತಕ್ಕಮಟ್ಟಿಗೆ ಚುರುಕು ನೀಡಿದೆ. ಭತ್ತ, ಮೆಕ್ಕೆಜೋಳದ ಬಿತ್ತನೆ ನಡೆಯುತ್ತಿದ್ದು, ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಯಾಗುತ್ತಿದೆ.

ಜಿಲ್ಲೆಯ ಮಲೆನಾಡು ಮತ್ತು ಕರಾವಳಿಯ ಬಹುತೇಕ ತಾಲ್ಲೂಕುಗಳಲ್ಲಿ ಮಳೆಗಾಲ ಭತ್ತದಕೃಷಿ ಕೈಗೊಳ್ಳಲಾಗುತ್ತದೆ. ಈ ಬಾರಿ ಮುಂಗಾರು ಮಳೆ ವಿಳಂಬವಾಗಿದ್ದರೂ ಭೂಮಿಯನ್ನು ಉಳುಮೆ ಮಾಡಿ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಕೆಲವು ದಿನಗಳಿಂದ ಮಳೆಯಾಗುತ್ತಿರುವುದು ಬೇಸಾಯಕ್ಕೆ ಉತ್ತೇಜನ ನೀಡಿದೆ.

ಕೃಷಿ ಇಲಾಖೆಯು 2019–20ನೇ ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 74,957 ಹೆಕ್ಟೇರ್ ಬಿತ್ತನೆಯ ಗುರಿ ನಿಗದಿ ಮಾಡಿದೆ. ಈ ಪೈಕಿ ಇಲ್ಲಿಯವರೆಗೆ 22,425 ಹೆಕ್ಟೇರ್ ಮಾತ್ರ ಕೃಷಿ ಮಾಡಲಾಗಿದೆ.ಜಿಲ್ಲೆಯ ಒಟ್ಟು ಕೃಷಿ ವಿಸ್ತೀರ್ಣದ ಪೈಕಿ 59,845 ಹೆಕ್ಟೇರ್‌ಗಳಷ್ಟು ವಿವಿಧ ತಳಿಗಳ ಭತ್ತದ ಬಿತ್ತನೆಯ ಗುರಿಯಿದೆ. ಆದರೆ, ಮಳೆ ಕೈಕೊಟ್ಟಿರುವ ಕಾರಣ 6,562 ಹೆಕ್ಟೇರ್‌ಗಳಷ್ಟು ಈವರೆಗೆ ಬಿತ್ತನೆ ಮಾಡಲಾಗಿದೆ. ಮಳೆ ಚುರುಕಾದರೆ ಈ ಪ್ರಮಾಣದಲ್ಲಿ ತುಸು ಏರಿಕೆ ಕಾಣಬಹುದು ಎಂದು ಇಲಾಖೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೆಕ್ಕೆಜೋಳಕ್ಕೆ ಹೆಚ್ಚಿದ ಬೇಡಿಕೆ:ಮುಂಗಾರು ಮಳೆಯ ಅನಿಶ್ಚಿತತೆ, ಮಾರುಕಟ್ಟೆಯಲ್ಲಿ ಉತ್ತಮ ದರದ ಕಾರಣದಿಂದವರ್ಷದಿಂದ ವರ್ಷಕ್ಕೆ ಮೆಕ್ಕೆಜೋಳಕೃಷಿ ಪ್ರದೇಶ ಏರಿಕೆಯಾಗುತ್ತಿದೆ. ಮೆಕ್ಕೆಜೋಳಕ್ಕೆ ಭತ್ತದಷ್ಟು ನೀರು ಬೇಡ. ಅಲ್ಲದೇ ಭತ್ತಕ್ಕೆ ಹೋಲಿಸಿದಾಗಕಡಿಮೆ ಶ್ರಮ ಸಾಕಾಗುತ್ತದೆ. ಹಾಗಾಗಿ ಹಳಿಯಾಳ,ಮುಂಡಗೋಡ, ಜೊಯಿಡಾ ಮತ್ತು ಶಿರಸಿ ತಾಲ್ಲೂಕಿನ ಕೆಲವೆಡೆ ಮೆಕ್ಕೆಜೋಳ ಕೃಷಿಭೂಮಿ ಹೆಚ್ಚಿದೆ.

ಇಡೀ ಜಿಲ್ಲೆಯಲ್ಲಿ 6,566 ಮೆಕ್ಕೆಜೋಳ ಬಿತ್ತನೆ ಬೀಜದ ಫಲಾನುಭವಿಗಳಿದ್ದರೆ, ಹಳಿಯಾಳ ಮತ್ತು ಮುಂಡಗೋಡ ತಾಲ್ಲೂಕುಗಳಲ್ಲೇ2,400 ಮಂದಿಯಿದ್ದಾರೆ.ಈ ತಾಲ್ಲೂಕುಗಳಿಗೆ 1,880 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. ಇಡೀ ಜಿಲ್ಲೆಗೆ 1,947 ಕ್ವಿಂಟಲ್ಸಾಕಾಗುತ್ತದೆ.ಹಳಿಯಾಳ ತಾಲ್ಲೂಕಿನಲ್ಲಿ1,800ಹೆಕ್ಟೇರ್ ಕಬ್ಬಿನ ಬೆಳೆಯ ಗುರಿಯಪೈಕಿ1,025 ಹೆಕ್ಟೇರ್ ಈಗಾಗಲೇ ನಾಟಿ ಮಾಡಲಾಗಿದೆ.ಮುಂಡಗೋಡ ತಾಲ್ಲೂಕಿನಲ್ಲಿ 400 ಹೆಕ್ಟೇರ್ ಗುರಿಯಿದೆ ಎಂದು ಇಲಾಖೆ ತಿಳಿಸಿದೆ.‌

‘ಎರಡು ದಿನಗಳಿಂದ ಬಿದ್ದ ಉತ್ತಮ ಮಳೆಯಿಂದ ಭತ್ತದ ಹೊಲಗಳಲ್ಲಿ ನೀರು ನಿಂತಿದೆ. ಇದರಿಂದ ಕೃಷಿಗೆ ಅನುಕೂಲವಾಗಲಿದೆ. ನೀರು ಇಂಗಿದ ಕೂಡಲೇ ಉಳುಮೆ ಮಾಡಿ ಬಿತ್ತನೆ ಮಾಡುತ್ತೇವೆ’ ಎಂದು ಸಿದ್ದರದ ಕೃಷಿಕ ಮಂಜುನಾಥ ನಾಯ್ಕ ಹೇಳಿದರು.

‘ಬಿತ್ತನೆ ಬೀಜದ ಕೊರತೆಯಿಲ್ಲ’: ‘ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆಯಿಲ್ಲ. ಇಲಾಖೆಯ ತಾಲ್ಲೂಕು ಮತ್ತು ಹೋಬಳಿ ಮಟ್ಟದ ಕೇಂದ್ರಗಳಿಂದ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಉಳಿದಂತೆ ಜಿಲ್ಲೆಯಲ್ಲಿ ಇಲಾಖೆಯ ಯೋಜನೆಗಳ ಅನುಷ್ಠಾನ ಉತ್ತಮವಾಗಿ ನಡೆಯುತ್ತಿದೆ. ಈ ಬಾರಿ ಮುಂಗಾರು ಮಾರುತಗಳು ಬಲವಾಗುವ ಹೊತ್ತಿನಲ್ಲೇ ‘ವಾಯು’ ಚಂಡಮಾರುತ ಅಬ್ಬರಿಸಿತು. ಇದರಿಂದ ವಾಡಿಕೆಗಿಂತ ಈ ಬಾರಿ ಶೇ 45ರಷ್ಟು ಮಳೆ ಕೊರತೆಯಾಗಿದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಜಿ.ರಾಧಾಕೃಷ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT