ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ನಿವೃತ್ತ ಶಿಕ್ಷಕನ ಸಮಗ್ರ ಕೃಷಿ ಸಾಧನೆ

ಆಹಾರ, ವಾಣಿಜ್ಯ ಬೆಳೆಗಳೊಂದಿಗೆ ಅರಣ್ಯೋತ್ಪನ್ನ ಸಸಿ ಬೆಳೆಸುವ ಎನ್.ಟಿ.ಗುನಗಿ
Published 14 ಜೂನ್ 2024, 6:41 IST
Last Updated 14 ಜೂನ್ 2024, 6:41 IST
ಅಕ್ಷರ ಗಾತ್ರ

ಕಾರವಾರ: ಹತ್ತಾರು ಎಕರೆ ಕೃಷಿಭೂಮಿ ಬಂಜರು ಬಿದ್ದ ಗ್ರಾಮದ ಒಂದು ಭಾಗ ಮಾತ್ರ ಸದಾ ಹಸಿರು ಸಸಿ, ಸಮೃದ್ಧ ಬೆಳೆಗಳಿಂದ ನಳನಳಿಸುತ್ತದೆ. ಕೃಷಿಯಿಂದ ವಿಮುಖಗೊಳ್ಳುತ್ತಿರುವ ಜನರ ಮಧ್ಯೆ, ಭೂಮಿಗೂ ಕೃಷಿ ಕಾಯಕದ ಮೂಲಕ ಪಾಠ ಮಾಡಿ ಉತ್ತಮ ಫಸಲು ತೆಗೆಯುವ ಮೂಲಕ ತಾಲ್ಲೂಕಿನ ಸಿದ್ಧರ ಮುದಗಾದ ನಿವೃತ್ತ ಶಿಕ್ಷಕರೊಬ್ಬರು ಮಾದರಿಯಾಗಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ನಾರಾಯಣ ತಿಮ್ಮ ಗುನಗಿ (ಎನ್.ಟಿ.ಗುನಗಿ) ನಿವೃತ್ತಿ ಬಳಿಕ ಕೃಷಿಯಲ್ಲಿ ಯಶಸ್ಸು ಸಾಧಿಸುವತ್ತ ಹೆಜ್ಜೆ ಹಾಕಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ಮೂರು ಎಕರೆಯಷ್ಟು ಭೂಮಿಯಲ್ಲಿ ಅಪ್ಪಟ ಸಾವಯವ ಪದ್ಧತಿ ಅನುಸರಿಸಿ ಸಮಗ್ರ ಕೃಷಿ ಮಾಡುತ್ತಿರುವುದು ಅವರ ಸಾಧನೆ.

‘ಶಿಕ್ಷಕನಾಗಿ ಕೆಲಸ ಮಾಡುತ್ತಿರುವಾಗಲೂ ಕೃಷಿ ಕಾಯಕ ಬಿಟ್ಟಿರಲಿಲ್ಲ. ಎರಡು ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿಯಾದ ಬಳಿಕ ಸಂಪೂರ್ಣ ಅವಧಿಯನ್ನು ಕೃಷಿಗೆ ಮೀಸಲಿಟ್ಟಿದ್ದೇನೆ’ ಎನ್ನುವ ಎನ್.ಟಿ.ಗುನಗಿ ತಮ್ಮ ಮನೆ ಎದುರಿನಲ್ಲೇ ಭತ್ತ ಬಿತ್ತನೆಗೆ ರೂಪಿಸಿದ ಗದ್ದೆ ತೋರಿಸಿದರು. ಅದರ ಪಕ್ಕದಲ್ಲೇ ತಲೆ ಎತ್ತಿ ನಿಂತಿರುವ ಅಡಿಕೆ ತೋಟ ತೋರಿಸಿ ಸಂಭ್ರಮಿಸಿದರು.

‘ಆಹರ ಬೆಳೆಯಾದ ಭತ್ತ, ಶೇಂಗಾ, ಉದ್ದು, ಅಲಸಂದೆ, ಬಗೆಬಗೆಯ ತರಕಾರಿ ಬೆಳೆಯುತ್ತೇವೆ. ಜತೆಗೆ ವಾಣಿಜ್ಯ ಬೆಳೆಗಳಾದ ಅಡಿಕೆ, ತೆಂಗು, ಗೇರು ಬೆಳೆಯಲಾಗುತ್ತಿದೆ. ಸಾಂಬಾರ ಪದಾರ್ಥವಾದ ಕಾಳುಮೆಣಸು ಬೆಳೆಗೆ ಸಿದ್ಧತೆ ಮಾಡಲಾಗುತ್ತಿದೆ. ಕಿರುಅರಣ್ಯ ಬೆಳೆಯಾಗಿ ಸಾಗವಾನಿ, ಮಹಾಗನಿ ಸೇರಿದಂತೆ ಅರಣ್ಯ ಉತ್ಪನ್ನ ನೀಡುವ ಸಸಿಗಳನ್ನೂ ಬೆಳೆಸಲಾಗುತ್ತಿದೆ’ ಎಂದು ಸಮಗ್ರ ಕೃಷಿಯ ಕುರಿತು ವಿವರಿಸಿದರು.

‘ಬೇಸಿಗೆಯಲ್ಲಿ ಶೇಂಗಾ, ಉದ್ದು, ಅಲಸಂದೆ ಬೆಳೆಯಲಾಗುತ್ತದೆ. ಜತೆಗೆ ತರಕಾರಿ, ಸೊಪ್ಪು ಫಸಲು ಉತ್ತಮವಾಗಿರುತ್ತದೆ. ಅಡಿಕೆ ತೋಟ ನಿರ್ಮಿಸಿ ಕೆಲವೇ ವರ್ಷವಾಗಿದ್ದರಿಂದ ಈಗಷ್ಟೆ ಫಸಲು ಕೈಸೇರತೊಡಗಿದೆ. ತೋಟದ ಅಂಚಿನಲ್ಲೇ ಮಹಾಗನಿ ಸಿಸಗಳನ್ನೂ ಬೆಳೆಸುತ್ತಿದ್ದೇವೆ. ಕಾಳುಮೆಣಸು ಬಳ್ಳಿ ಹಬ್ಬಿಸಲು ಇದು ಆಸರೆಯಾಗಲಿದೆ. ಉಳಿದ ಖಾಲಿ ಜಾಗದಲ್ಲಿ ಗೇರು, ಹಲಸು, ಸಾಗುವಾನಿ ಸಸಿಗಳನ್ನು ನೆಡಲಾಗಿದೆ. ಇವುಗಳ ಮಧ್ಯೆ ಜೇನು ಪೆಟ್ಟಿಗೆ ಇಡಲಾಗಿದ್ದು, ಜೇನುತುಪ್ಪದ ಇಳುವರಿ ಉತ್ತಮವಾಗಿದೆ’ ಎಂದು ವಿವರಿಸಿದರು.

ತರಕಾರಿ ಬೆಳೆದ ತೋಟವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ತೋರಿಸುತ್ತಿರುವ ಕೃಷಿಕ ಎನ್.ಟಿ.ಗುನಗಿ.
ತರಕಾರಿ ಬೆಳೆದ ತೋಟವನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ತೋರಿಸುತ್ತಿರುವ ಕೃಷಿಕ ಎನ್.ಟಿ.ಗುನಗಿ.

ಕೃಷಿ ಕುಟುಂಬವಾಗಿರುವ ಕಾರಣಕ್ಕೆ ಮುಂಚಿನಿಂದಲೂ ವ್ಯವಸಾಯದಲ್ಲಿ ಆಸಕ್ತಿ ಇತ್ತು. ಹೀಗಾಗಿ ಶಿಕ್ಷಕ ವೃತ್ತಿಯ ಜತೆಗೆ ಕೃಷಿಯಲ್ಲಿ ನಿರತನಾಗಿದ್ದೆ

ಎನ್.ಟಿ.ಗುನಗಿ ಕೃಷಿಕ

ಪ್ರತಿ ಹಂತದಲ್ಲಿ ಮಾರ್ಗದರ್ಶನ

‘ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೃಷಿಯಲ್ಲಿ ಎನ್.ಟಿ.ಗುನಗಿ ಉತ್ತಮ ಪ್ರಯೋಗ ಮಾಡುತ್ತಿದ್ದಾರೆ. ಜೀವಾಮೃತ ಸೇರಿದಂತೆ ಮಣ್ಣಿನ ಫಲವತ್ತತೆ ವೃದ್ಧಿಸಬಲ್ಲ ಸಾವಯವ ಮಿಶ್ರಣ ತಯಾರಿಸಿ ತೋಟ ಗದ್ದೆಗೆ ಹಾಯಿಸಿ ಫಲವತ್ತತೆ ಹೆಚ್ಚಿಸಲು ಶ್ರಮಿಸುತ್ತಾರೆ. ಕೃಷಿಹೊಂಡ ನಿರ್ಮಿಸಿ ನೀರಾವರಿಗೂ ಏಕಾಂಗಿಯಾಗಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಹಂತದಲ್ಲಿ ಇಲಾಖೆಯ ಮಾರ್ಗದರ್ಶನ ಪಡೆಯುತ್ತಾರೆ. ಅವರಿಗೆ ಕೃಷಿ ಸಾಧಕ ಪ್ರಶಸ್ತಿಯೂ ಲಭಿಸಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸುನೀಲ ಅಂಕೋಲೇಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT