ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ| ಕನ್ನಡದೊಂದಿಗೆ ದೇವನಾಗರಿ ಲಿಪಿ: ವಿವಾದದ ಕಿಡಿ ಹೊತ್ತಿಸಿದ ನಾಮಫಲಕ

ಕನ್ನಡದೊಂದಿಗೆ ದೇವನಾಗರಿ ಲಿಪಿಯಲ್ಲಿ ಫಲಕ ಅಳವಡಿಸಿದ ಕಾರವಾರ ನಗರಸಭೆ
Last Updated 13 ಜೂನ್ 2022, 16:00 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ನಗರಸಭೆಯು ವಿವಿಧ ರಸ್ತೆಗಳಿಗೆ ಅವುಗಳ ಹೆಸರು ಸೂಚಿಸುವ ಫಲಕಗಳನ್ನು ಕೆಲವು ದಿನಗಳ ಹಿಂದೆ ಅಳವಡಿಸಿದೆ. ಅದರಲ್ಲಿ ಕನ್ನಡದೊಂದಿಗೆ ದೇವನಾಗರಿ ಲಿಪಿಯಲ್ಲೂ ಹೆಸರುಗಳನ್ನು ಬರೆದಿರುವುದು ವಿವಾದ ಉಂಟುಮಾಡಿದೆ.

ಹಲವು ಕಡೆ ನಗರದ ರಸ್ತೆಗಳನ್ನು ಗುರುತಿಸುವ ಫಲಕಗಳು ಇರಲಿಲ್ಲ. ಇದ್ದ ಫಲಕಗಳ ಬಣ್ಣ ಮಾಸಿ ಹೋಗಿತ್ತು. ಹಾಗಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ನಗರಸಭೆಯಿಂದ ಫಲಕಗಳನ್ನು ಅಳವಡಿಸಲಾಗಿದೆ. ಈ ಮೊದಲು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಫಲಕಗಳಿದ್ದವು. ಈ ಬಾರಿ ದೇವನಾಗರಿಯನ್ನು ಬಳಸಲಾಗಿದ್ದು, ಕನ್ನಡದ ‘ರಸ್ತೆ’ ಶಬ್ದದ ಜೊತೆಯಾಗಿ ‘ರಸ್ತೊ’ ಎಂದು ಬರೆಯಲಾಗಿದೆ.

ನಗರಸಭೆಯ ಈ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರವಾರ ತಾಲ್ಲೂಕು ಘಟಕದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂಥ ಫಲಕಗಳನ್ನು ತೆರವು ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರಸಭೆ ಅಧ್ಯಕ್ಷರಿಗೆ ಸೋಮವಾರ ಮನವಿ ನೀಡಿ ಒತ್ತಾಯಿಸಿದ್ದಾರೆ.

‘ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂ.ಇ.ಎಸ್) ಕಾರವಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆ, ತಾಲ್ಲೂಕುಗಳು ಮಹಾರಾಷ್ಟ್ರಕ್ಕೆ ಸೇರಿದ್ದಾಗಿ ತಗಾದೆ ತೆಗೆಯುತ್ತಲೇ ಇದೆ. ಗೋವಾದ ಕೊಂಕಣಿ ಮಂಚ್ ಕಾರವಾರವನ್ನು ಗೋವಾಕ್ಕೆ ಸೇರಿಸಬೇಕು ಎಂದು ಆಗ್ರಹಿಸುತ್ತಿದೆ. ಈ ಹಿಂದೆ ಇದೇ ವಿಚಾರಕ್ಕೆ ಸಾಕಷ್ಟು ಗಲಾಟೆಗಳಾಗಿವೆ. ಅಂಥ ಸನ್ನಿವೇಶಗಳು ಮರುಕಳಿಸಬಾರದು ಎಂಬುದು ನಮ್ಮ ಇಚ್ಛೆಯಾಗಿದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಕಾರವಾರದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿದ್ದು, ಮನೆ ಭಾಷೆ ಹಾಗೂ ವ್ಯಾವಹಾರಿಕವಾಗಿ ಕೊಂಕಣಿಯಲ್ಲಿ ಮಾತನಾಡುತ್ತಾರೆ. ಇಲ್ಲಿಯ ಎಲ್ಲ ನಾಮಫಲಕಗಳೂ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿವೆ. ಆದರೆ, ನಗರಸಭೆಯು ನಾಮಫಲಕಗಳನ್ನು ಕೊಂಕಣಿ ಮತ್ತು ಮರಾಠಿಯಲ್ಲಿ ಅರ್ಥ ಬರುವ ಹಾಗೆ ಬರೆದಿರುವುದು ಆಘಾತಕಾರಿ’ ಎಂದು ಹೇಳಿದ್ದಾರೆ.

ಪರಿಷತ್ತಿನ ಅಧ್ಯಕ್ಷ ರಾಮ ನಾಯ್ಕ, ಗೌರವ ಕಾರ್ಯದರ್ಶಿಗಳಾದ ಬಾಬು ಶೇಖ್, ಜಾರ್ಜ್ ಫರ್ನಾಂಡಿಸ್, ಪದಾಧಿಕಾರಿ ಮಾಧವ ನಾಯಕ, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತ ಇದ್ದರು.

ಈ ನಡುವೆ, ನಗರಸಭೆಯ ಕ್ರಮವನ್ನು ಕೊಂಕಣಿ ಭಾಷಿಕರು ಸ್ವಾಗತಿಸಿದ್ದಾರೆ. ಇಲ್ಲಿನ ಹಲವಾರು ಮಂದಿ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಕೌಟುಂಬಿಕ, ವ್ಯಾವಹಾರಿಕ ಸಂಪರ್ಕ ಹೊಂದಿದ್ದಾರೆ. ಅವರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.

‘ಮೂರು ದಿನದಲ್ಲಿ ತೆರವು ಮಾಡಿ’:

‘ನಗರದಲ್ಲಿ ಎಲ್ಲ ಭಾಷಿಕರೂ ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ನಗರಸಭೆಯು ಹೊಸದಾಗಿ ಫಲಕ ಬರೆದು ಸೌಹಾರ್ದ ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದು ಯಾಕೆ? ಅದನ್ನು ಮೂರು ದಿನಗಳಲ್ಲಿ ತೆರವು ಮಾಡದಿದ್ದರೆ ಕನ್ನಡ ಸಂಘಟನೆಗಳು ಒಂದಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT