ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಕೆಗೆ ಒಲಿಯುವ ‘ಸಾತೇರಿ ದೇವಿ’

Published 24 ಸೆಪ್ಟೆಂಬರ್ 2023, 3:28 IST
Last Updated 24 ಸೆಪ್ಟೆಂಬರ್ 2023, 3:28 IST
ಅಕ್ಷರ ಗಾತ್ರ

ಕಾರವಾರ: ‘ಮಗನ ಮದುವೆ ಮಾಡಿಸಲು ಹಣಕಾಸಿನ ತೊಂದರೆ ಇತ್ತು. ಪರಿಚಯಸ್ಥರು, ಸಂಬಂಧಿಗಳಲ್ಲಿ ಸಾಲ ಕೇಳಿದರೂ ನಯಾಪೈಸೆ ಹುಟ್ಟಲಿಲ್ಲ. ಸಾತೇರಿ ದೇವಿ ದೇಗುಲದ ಬಳಿ ಬಂದು ಪ್ರಾರ್ಥಿಸಿ ಮನೆಗೆ ಹೋದರೆ ಅಂದು ಸಂಜೆಯಾಗುವುದರೊಳಗೆ ಪರಿಚಯಸ್ಥರೊಬ್ಬರು ಹಣದ ನೆರವು ಒದಗಿಸಿದರು’

ಹೀಗೆ ಸಾತೇರಿ ದೇವಿಯ ಶಕ್ತಿಯ ಬಗ್ಗೆ ತಮ್ಮ ನಂಬಿಕೆ ವಿವರಿಸಿದವರು ಹಣಕೋಣ ಗ್ರಾಮದ ಮಹಾಬಲೇಶ್ವರ ನಾಯ್ಕ. ‘ದೇವಿ ಸಹಾಯಹಸ್ತ ಚಾಚಿದರೆ ಅದರಲ್ಲಿ ಅಲ್ಪ ಭಾಗವನ್ನಾದರೂ ಮರಳಿಸಬೇಕು ಎಂಬ ಪ್ರತೀತಿ ಇದೆ. ಆರ್ಥಿಕ ಸ್ಥಿತಿ ಸುಧಾರಿಸಿದ ಕೆಲವೇ ದಿನಗಳಲ್ಲಿ ಎದುರಾದ ಜಾತ್ರೆಯಲ್ಲಿ ಕಾಣಿಕೆ ರೂಪದಲ್ಲಿ ದೇವಿಗೆ ಮರಳಿಸಿದೆ’ ಎನ್ನುತ್ತ ದೇವಿ ಶಕ್ತಿ ನೆನೆದು ಗದ್ಗದಿತರಾದರು.

ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಿ ದೇವಸ್ಥಾನದ ಮಹಿಮೆಯನ್ನು ಸುತ್ತಮುತ್ತಲಿನ ಗ್ರಾಮದ ನೂರಾರು ಭಕ್ತರು ಹೀಗೆ ಬಣ್ಣಿಸಬಲ್ಲರು. ಕಷ್ಟ ಕಾಲದಲ್ಲಿ ದೇವಿ ಕೈಹಿಡಿದು ಮುನ್ನಡೆಸುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿಯೇ ಪ್ರತಿ ವರ್ಷದಲ್ಲಿ ಏಳು ದಿನ ಬಾಗಿಲು ತೆರೆಯುವ ಅವಧಿಯಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಮುಗಿ ಬೀಳುತ್ತಾರೆ. ಇಷ್ಟಾರ್ಥ ಕರುಣಿಸಿದ ದೇವಿಗೆ ಶಕ್ತಿಯಾನುಸಾರ ಕಾಣಿಗೆ, ಆಭರಣ ಅರ್ಪಿಸಿ ಕೃತಾರ್ಥರಾಗುತ್ತಾರೆ.

‘ವರ್ಷದಲ್ಲಿ ಏಳು ದಿನ ಮಾತ್ರ ದೇವಾಲಯದ ಬಾಗಿಲು ತೆರೆಯುತ್ತದೆ. ಉಳಿದ ದಿನ ಪ್ರತಿ ಸೋಮವಾರ ದೇವಾಲಯದ ಗರ್ಭಗುಡಿಯ ಎದುರಿನ ಬಾಗಿಲ ಬಳಿ ನಿಂತು ಪೂಜೆ ಸಲ್ಲಿಸಲಾಗುತ್ತದೆ. ಆದರೆ ದೇವಿಯ ಮುಖ ದರ್ಶನ ನೋಡಲು ಭಕ್ತರಿಗೆ ಕೇವಲ ಐದು ದಿನ ಮಾತ್ರ ಅವಕಾಶವಾಗುತ್ತದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖ ಉಲ್ಲಾಸ ನಾಯ್ಕ ಹೇಳುತ್ತಾರೆ.

‘ಗಣೇಶ ಚತುರ್ಥಿ ಮುಗಿದ ಮೂರನೇ ದಿನದ ಮಧ್ಯರಾತ್ರಿ ದೇಗುಲದ ಬಾಗಿಲು ತೆರೆಯುತ್ತದೆ. ಬಳಿಕ ಕುಳಾವಿಗಳು ಪೂಜೆ ಸಲ್ಲಿಸಿ, ನಂತರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಾರಿ ಸೆ.22 ರಂದು ದೇವಾಲಯ ಬಾಗಿಲು ತೆರೆದಿದ್ದು 28ರ ವರೆಗೆ ದರ್ಶನಕ್ಕೆ ಅವಕಾಶವಿದೆ’ ಎಂದರು.

ಸಾತೇರಿ ದೇವಿ ಹಿನ್ನೆಲೆ

‘ಸಾತೇರಿ ಮತ್ತು ಚಣಕಾ ಎಂಬ ಸಹೋದರಿಯರು ನೂರಾರು ವರ್ಷಗಳ ಹಿಂದೆ ಗ್ರಾಮದಲ್ಲಿ ನೆಲೆಸಿದ್ದರು. ಅವರಲ್ಲಿ ಸಾತೇರಿ ಬಳಿ ಯಾರೇ ಕಷ್ಟ ಹೇಳಿಕೊಂಡು ಬಂದರೂ ಕೈಲಾದ ಸಹಾಯ ಸಿಗುತ್ತಿತ್ತು. ವಿಶೇಷವಾಗಿ ಮದುವೆ ಹಬ್ಬದ ಸಂದರ್ಭದಲ್ಲಿ ಮಹಿಳೆಯರು ಧರಿಸಲು ಆಭರಣ ವಿಚಾರಿಸಿದರೆ ಅವರು ಬೇಡಿಕೆ ಇಟ್ಟ ಆಭರಣ ದಿನದೊಳಗೆ ಸಿಗುತ್ತಿತ್ತು. ಕಾರ್ಯಕ್ರಮ ಮುಗಿದ ಬಳಿಕ ಆಭರಣವನ್ನು ಸಾತೇರಿಗೆ ಮರಳಿ ನೀಡಬೇಕಿತ್ತು. ಬೇಡಿದ್ದನ್ನು ನೀಡುವ ಸಾತೇರಿ ಬಗ್ಗೆ ಗ್ರಾಮದಲ್ಲಿ ಅಪಾರ ಗೌರವವಿತ್ತು’ ಎಂದು ಸಾತೇರಿ ದೇವಿಯ ಮಹಿಮೆ ಬಣ್ಣಿಸುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯ ಉಲ್ಲಾಸ ನಾಯ್ಕ. ‘ಒಮ್ಮೆ ಸಾತೇರಿ ಸ್ನಾನದಲ್ಲಿ ತೊಡಗಿದ್ದಾಗ ದುಷ್ಟನೊಬ್ಬ ಆಕೆಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾನೆ. ತಕ್ಷಣವೇ ಆಕೆ ಸಮೀಪದ ಬಾವಿಯಲ್ಲಿ ಜಿಗಿದು ಅದೃಶ್ಯಳಾಗುತ್ತಾಳೆ. ಕೆಲವು ದಿನಗಳ ಬಳಿಕ ಊರಿನ ವೃದ್ಧರೊಬ್ಬರ ಕನಸಿನಲ್ಲಿ ಕಾಣಿಸಿಕೊಂಡು ಬಾವಿಯ ಸಮೀಪವೇ ವಾಸವಿರುತ್ತೇನೆ. ತನಗೊಂದು ಗುಡಿ ಕಟ್ಟಿಸಿ ಎಂದು ಸೂಚನೆ ಕೊಡುತ್ತಾಳೆ. ಪುಟ್ಟದಾದ ಗುಡಿ ಕಟ್ಟಿ ಪೂಜೆ ಆರಂಭಗೊಳ್ಳುತ್ತದೆ. ಈಗ ಅದೇ ದೊಡ್ಡ ದೇಗುಲವಾಗಿ ರೂಪುಗೊಂಡಿದೆ’ ಎಂದು ದೇವಾಲಯದ ರಚನೆಯ ಹಿನ್ನೆಲೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT