ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಷ್ಮೆ ಕೃಷಿ ದೂರಾಗುವ ಕಾಲ ಸನ್ನಿಹಿತ!

ಉತ್ತರ ಕನ್ನಡದಲ್ಲಿ ಗಣನೀಯ ಕುಸಿತ ಕಂಡ ರೇಷ್ಮೆ ಕ್ಷೇತ್ರ
Published 3 ಜೂನ್ 2024, 5:42 IST
Last Updated 3 ಜೂನ್ 2024, 5:42 IST
ಅಕ್ಷರ ಗಾತ್ರ

ಶಿರಸಿ: ಮಳೆರಾಯನನ್ನೇ ನಂಬಿರುವ ತಾಲ್ಲೂಕಿನ ಕೃಷಿಕರು ಅರೆಬರೆ ಮಳೆಯ ಕಾರಣಕ್ಕೆ ಕೃಷಿ ಚಟುವಟಿಕೆ ಮುಂದೂಡುತ್ತಿದ್ದರೆ, ನೀರಾವರಿಯನ್ನೇ ಆಶ್ರಯಿಸಿರುವ ರೇಷ್ಮೆ ಕೃಷಿಯತ್ತ ಬೆಳೆಗಾರರು ನಿರಾಸಕ್ತಿ ತೋರುತ್ತಿದ್ದಾರೆ. ಇದು ಉತ್ತರ ಕನ್ನಡದಲ್ಲಿ ಅಲ್ಪಸ್ವಲ್ಪ ಜೀವ ಹಿಡಿದಿಟ್ಟುಕೊಂಡಿದ್ದ ರೇಷ್ಮೆ ಕೃಷಿಗೆ ಕಂಟಕವಾಗಿ ಪರಿಣಮಿಸಿದೆ.

ಕಳೆದ ವರ್ಷ ವಾಡಿಕೆಯಷ್ಟು ಮಳೆ ಸುರಿಯದೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಬರಗಾಲ ವ್ಯಾಪಿಸಿತ್ತು. ನೀರ ಕೊರತೆಯ ಕಾರಣ ಕೃಷಿಕರಿಗೆ ರೇಷ್ಮೆ ತೋಟಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ 230 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಕೈಗೊಂಡಿದ್ದ ಕೃಷಿಕರು ಪ್ರಸಕ್ತ ವರ್ಷ ಈ ಕೃಷಿಯಿಂದ ದೂರ ಸರಿದಿದ್ದಾರೆ. ಈ ಬಾರಿ ಕೇವಲ 160 ಹೆಕ್ಟೇರ್ ಮಾತ್ರ ಈ ಕೃಷಿಗೆ ಕೃಷಿಕರು ಮೀಸಲಿಟ್ಟಿದ್ದು, ಜಿಲ್ಲೆಯ ನೆಲದಿಂದ ರೇಷ್ಮೆ ಕೃಷಿ ದೂರವಾಗುವ ಕಾಲ ಸನ್ನಿಹಿತವಾಗುತ್ತಿದೆಯೇ ಎಂಬ ಅನುಮಾನ ಕಾಡುವಂತಾಗಿದೆ.

‘ಜಿಲ್ಲೆಯ ಯಲ್ಲಾಪುರ, ಭಟ್ಕಳ ತಾಲ್ಲೂಕಿನಲ್ಲಿದ್ದ ರೇಷ್ಮೆ ಕೃಷಿಕರು ಈಗಾಗಲೇ ಕೃಷಿ ಕೈಬಿಟ್ಟಿದ್ದಾರೆ.  ಹಳಿಯಾಳ 49 ಹೆಕ್ಟೇ‌ರ್, ಮುಂಡಗೋಡ 9.5 ಹೆ, ಸಿದ್ದಾಪುರ 28 ಹೆ, ಶಿರಸಿ 11.75 ಹೆ, ಜೋಯಿಡಾ 8 ಹೆ, ಅಂಕೋಲಾ 7.3 ಹೆ, ಕಾರವಾರ 8 ಹೆ, ಹೊನ್ನಾವರ 10.8 ಹೆ ಪ್ರದೇಶದಲ್ಲಿ ರೇಷ್ಮೆ ಕೃಷಿ ನಡೆದಿದೆ. ಮಳೆ ವಿಳಂಬವಾದರೆ ಇನ್ನಷ್ಟು ಕುಸಿಯುವ ಆತಂಕವಿದೆ’ ಎಂಬುದು ರೇಷ್ಮೆ ಇಲಾಖೆ ಅಧಿಕಾರಿಗಳ ಮಾತಾಗಿದೆ. 

‘ಬಿಸಿಲಿನ ಪ್ರಖರತೆಗೆ ಹಿಪ್ಪುನೇರಳೆ ಸೊಪ್ಪು ಬಾಡಿ ಸಮಸ್ಯೆಯಾಗಿತ್ತು. ಗುಣಮಟ್ಟವಿಲ್ಲದ ಸೊಪ್ಪು ತಿನ್ನುವ ರೇಷ್ಮೆ ಹುಳುಗಳಿಗೆ ‘ಸಪ್ಪೆರೋಗ’ ಬಾಧಿಸಿತ್ತು.  ಸಾಮಾನ್ಯವಾಗಿ ರೇಷ್ಮೆ ಕೃಷಿಗೆ 25ರಿಂದ 29 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಬೇಕು. ಈ ಬೇಸಿಗೆಯಲ್ಲಿ ಉಷ್ಣಾಂಶ 37ರಿಂದ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಇದರಿಂದ ಕಂಗೆಟ್ಟ ಕೆಲ ಕೃಷಿಕರು ಇದರಿಂದ ದೂರ ಸರಿದ ಪರಿಣಾಮ ರೇಷ್ಮೆ ಕೃಷಿಯ ಹಿನ್ನಡೆಗೆ ಕಾರಣವಾಗಿದೆ’ ಎಂದು ರೇಷ್ಮೆ ಕೃಷಿಕ ದೇವರಾಜ ನಾಯ್ಕ ಮಾಹಿತಿ ನೀಡಿದರು.

‘ಬಿಸಿಲಿನ ತಾಪದಿಂದಾಗಿ ಶೇ 25ಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ. ಗೂಡಿನ ಗುಣಮಟ್ಟ ಕುಸಿತದಿಂದ ದರ ಇಳಿಕೆಯಾಗಿದೆ. ಒಂದು ವರ್ಷದ ಹಿಂದೆ ಬಿಳಿಗೂಡಿನ ದರ ಪ್ರತಿ ಕೆ.ಜಿಗೆ ₹1 ಸಾವಿರ ದಾಟಿತ್ತು. ಈಗ ₹450ರಿಂದ ₹600ಕ್ಕೆ ಇಳಿಕೆಯಾಗಿದೆ. ಇಲ್ಲಿನ ಮಾರಾಟ ಕೇಂದ್ರ, ಸಂಗ್ರಹ ಮಳಿಗೆ ಸ್ಥಗಿತವಾದ ಪರಿಣಾಮ ಬೆಳೆಗಾರರಿಗೆ ಪ್ರಮುಖ ಮಾರುಕಟ್ಟೆಯಾದ ಹಾಸನ, ಧಾರವಾಡಕ್ಕೆ ಉತ್ಪನ್ನ ಸಾಗಿಸಿದರೂ ಹಾಕಿದ ಬಂಡವಾಳ ಕೈಸೇರುತ್ತಿಲ್ಲ’ ಎನ್ನತ್ತಾರೆ ಅವರು.

‘ರೇಷ್ಮೆ ಇಲಾಖೆ ಜಿಲ್ಲಾ ಕಚೇರಿ ಶಿರಸಿಯಲ್ಲಿದೆ. ರೇಷ್ಮೆ ಕೃಷಿ ಬಗ್ಗೆ ಬೆಳೆಗಾರರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕಿದ್ದ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಇಲ್ಲಿನ ಕಚೇರಿಗೆ 66 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಒಬ್ಬ ಸಹಾಯಕ ನಿರ್ದೇಶಕ ಸೇರಿ ಮೂರು ಸ್ಥಾನಗಳು ಮಾತ್ರ ಭರ್ತಿಯಾಗಿವೆ. ಹೀಗಾಗಿ ರೇಷ್ಮೆ ಕೃಷಿ ವಿಸ್ತರಣೆ, ಮಾರ್ಗದರ್ಶನ, ಜಾಗೃತಿ ಮೂಡಿಸುವವರು ಇಲ್ಲದಂತಾಗಿದ್ದಾರೆ. ಇದು ಕೂಡ ಕೃಷಿ ಕುಂಠಿತವಾಗಲು ಕಾರಣವಾಗಿದೆ’ ಎಂಬುದು ರೇಷ್ಮೆ ಬೆಳೆಗಾರರ ಅಭಿಪ್ರಾಯ.

ರೇಷ್ಮೆ ಕೃಷಿ ಬಗ್ಗೆ ಮಾರ್ಗದರ್ಶನ ನೀಡಲು ಯಾವ ಸಿಬ್ಬಂದಿ ಅಧಿಕಾರಿಗಳಿಲ್ಲ. ಹೀಗಾಗಿ ರೈತರು ಇದರ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ -
ಲಿಂಗರಾಜ ಗೌಡ ಶಿರಸಿ ರೇಷ್ಮೆ ಬೆಳೆಗಾರ
ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಉತ್ತೇಜಿಸುವ ಕಾರ್ಯ ಮಾಡಲಾಗುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಬೆಳೆಗಾರರ ಸಂಖ್ಯೆ ಕ್ಷೀಣಿಸುತ್ತಿದೆ
ಶ್ರೀಧರ ಭಟ್ ರೇಷ್ಮೆ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT