ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಜ್ಜಿತ ಕಟ್ಟಡ ಕಲ್ಪಿಸಲು ಆಡಳಿತ ವಿಫಲ: ಶಿರಸಿ ಉಪ ಬಂಧಿಖಾನೆ ಸ್ಥಗಿತ

Published 30 ಏಪ್ರಿಲ್ 2024, 5:05 IST
Last Updated 30 ಏಪ್ರಿಲ್ 2024, 5:05 IST
ಅಕ್ಷರ ಗಾತ್ರ

ಶಿರಸಿ: ಸುಸಜ್ಜಿತವಾದ ಬದಲಿ ಕಟ್ಟಡದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಕಾರಣಕ್ಕೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿರಸಿ ಉಪ ಬಂಧಿಖಾನೆ (ಸಬ್ ಜೈಲ್) ವಾರದಿಂದ ಸ್ಥಗಿತಗೊಂಡಿದೆ. ಇದು ಪೊಲೀಸ್ ಇಲಾಖೆ ಮೇಲೆ ಒತ್ತಡ ಹೆಚ್ಚಲು ಕಾರಣವಾಗಿದೆ.

ನಗರದ ಎಸ್.ಬಿ.ಐ. ಸರ್ಕಲ್ ಬಳಿಯ ಹಳೆಯ ತಹಶೀಲ್ದಾರ್ ಕಚೇರಿ ಆವರಣದಲ್ಲಿದ್ದ ಸಬ್ ಜೈಲ್ ಕಾರ್ಯನಿರ್ವಹಿಸುತ್ತಿತ್ತು. ಕಾರಣಾಂತರದಿಂದ ದಶಕಗಳ ಹಿಂದೆ ಸ್ಥಗಿತಗೊಂಡಿತ್ತು. 2014ರಲ್ಲಿ ಹೈಕೋರ್ಟ್ ರಿಟ್ ಪಿಟಿಶನ್ ಆದೇಶದ ಮೇರೆಗೆ ಅಂದಿನ ವಕೀಲರ ಸಂಘದ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಯತ್ನದಿಂದ ಪುನರಾರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಾವಿರಾರು ಆರೋಪಿಗಳು ಇದೇ ಜೈಲಿನಲ್ಲಿ ಕಾಲ ಕಳೆದಿದ್ದರು. ಆದರೆ ಇದೀಗ ಈ ಜೈಲ್ ಇರುವ ಸ್ಥಳದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಛಯ ಕಾಮಗಾರಿ ಆರಂಭವಾಗಿದ್ದು, ಸಬ್ ಜೈಲ್ ಕಟ್ಟಡ ತೆರವುಗೊಳಿಸಲಾಗಿದೆ. 

ಸುಮಾರು 35ಕ್ಕೂ ಹೆಚ್ಚು ಆರೋಪಿಗಳನ್ನು ಇಲ್ಲಿ ವಿಚಾರಣೆಗಾಗಿ ಇಡಲಾಗುತ್ತಿತ್ತು. ಇದರಿಂದ ಶಿರಸಿ, ಸಿದ್ದಾಪುರ, ಮುಂಡಗೋಡ ಹಾಗೂ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರೋಪಿತರನ್ನು ಈ ಸಬ್ ಜೈಲಿಗೆ ವರ್ಗಾಯಿಸಲಾಗುತ್ತಿತ್ತು. ಆದರೆ ಈ ನಾಲ್ಕು ತಾಲ್ಲೂಕಿನವರು ಈಗ ದೂರದ ಕಾರವಾರ ಕೇಂದ್ರ ಕಾರಾಗೃಹಕ್ಕೆ ಹೋಗುವ ಅನಿರ್ವಾಯತೆಗೆ ಒಳಗಾಗಿದ್ದಾರೆ.

‘ಸಬ್ ಜೈಲ್ ಬಂದಾಗಿರುವುದರಿಂದ ಪೊಲೀಸರು ತೀವ್ರ ಸಂಕಷ್ಟದ ಸ್ಥಿತಿಗೆ ಬಂದಿದ್ದಾರೆ. ಪ್ರತಿ ನಿತ್ಯ ದಾಖಲಿಸಿಕೊಳ್ಳುವ ಪ್ರಕರಣದ ಆರೋಪಿಗಳನ್ನು ಕಾರವಾರ ಕೇಂದ್ರ ಕಾರಾಗೃಹಕ್ಕೆ ಕರೆದುಕೊಂಡು ಹೋಗಬೇಕಾಗಿದೆ. ಒಂದು ಆರೋಪಿಯನ್ನು ಜೈಲಿಗೆ ಕಳಿಸುವಾಗ ಮೂವರು ಪೊಲೀಸರು ಜತೆಗೆ ಹೋಗಬೇಕಾಗಿದ್ದು, ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಹೊರೆ ಅನುಭವಿಸಬೇಕಾಗಿದೆ. ಅಲ್ಲದೇ, ಜಿಲ್ಲಾ ಕೇಂದ್ರಕ್ಕೆ ಸರಿಯಾದ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ಇದು ಪೊಲೀಸರ ಸಂಕಷ್ಟಕ್ಕೆ ಕಾರಣವಾಗಿದೆ’ ಎಂಬುದು ಪೊಲೀಸ್ ಸಿಬ್ಬಂದಿ ಮಾತಾಗಿದೆ. 

‘ಬದಲಿ ವ್ಯವಸ್ಥೆಗೆ ಸಾಕಷ್ಟು ಪ್ರಯತ್ನಗಳು ನಡೆಯಿತಾದರೂ ಯಾವುದೇ ಕಟ್ಟಡಗಳು ಸಬ್ ಜೈಲ್ ವ್ಯವಸ್ಥೆಗೆ ಪೂರಕವಾಗಿರಲಿಲ್ಲ. ಹೀಗಾಗಿ ಕಾರವಾರ ಕೇಂದ್ರ ಕಾರಾಗೃಹಕ್ಕೆ ಹೋಗುವ ಪರಿಸ್ಥಿತಿಯಿದೆ’ ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. 

‘ಈ ಹಿಂದೆ ಸಬ್ ಜೈಲ್ ತೆರವುಗೊಳಿಸಬೇಕು ಎಂದು ತೀರ್ಮಾನ ಕೈಗೊಂಡಾಗ ಅದನ್ನು ಚಿಪಗಿ ಬಳಿ ಖಾಲಿ ಇರುವ ತರಬೇತಿ ಕೇಂದ್ರದ ಕಟ್ಟಡಕ್ಕೆ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಆದರೆ ಈ ಕುರಿತು ಇಲಾಖೆ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಹೆಚ್ಚಿನ ಆಸಕ್ತಿ ತೋರದ ಕಾರಣ ಇದೀಗ ಕಾರವಾರಕ್ಕೆ ಸ್ಥಳಾಂತರ ಆಗುವಂತಾಗಿದೆ’ ಎಂಬುದು ಸಾರ್ವಜನಿಕರು ತಿಳಿಸಿದರು.

ಬದಲಿ ವ್ಯವಸ್ಥೆ ಶಿರಸಿಯಲ್ಲಿ ಇದ್ದರೂ ಸಹ ಅದನ್ನು ಸರಿಯಾಗಿ ನಿರ್ವಹಿಸುವಲ್ಲಿ ಆಡಳಿತ ವರ್ಗ ವಿಫಲವಾಗಿದೆ. ಅಲ್ಲದೇ ವಿಚಾರಾಣಾಧೀನ ಖೈದಿಗಳನ್ನು ದೂರದ ಕಾರವಾರಕ್ಕೆ ಒಯ್ಯುವುದರಿಂದ ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆ ಆಗುವ ಸಾಧ್ಯತೆ ಇವೆ
ರವೀಂದ್ರ ನಾಯ್ಕ ಸಾಮಾಜಿಕ ಕಾರ್ಯಕರ್ತ
ಈಗಿರುವ ಸಬ್ ಜೈಲ್ ಕಟ್ಟಡ ತೆರವು ಮಾಡಲಾಗಿದೆ. ಆದರೆ ಬೇರೆ ಕಟ್ಟಡ ಸಿಗದ ಕಾರಣ ಕಾರವಾರ ಕೇಂದ್ರ ಕಾರಾಗ್ರಹವನ್ನೇ ಅವಲಂಬಿಸಬೇಕಿದೆ
ಮುತ್ತಪ್ಪ ಪಾಟೀಲ್ ಡಿಎಸ್‍ಪಿ ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT