ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಕ್ಷಾಮ: ಒಣಮೀನಿಗೆ ಬರ

ಮೀನುಗಾರ ಮಹಿಳೆಯರ ದುಡಿಮೆಗೂ ಕುತ್ತು ತಂದ ಹವಾಮಾನ ವೈಪರಿತ್ಯ
Published 13 ನವೆಂಬರ್ 2023, 5:17 IST
Last Updated 13 ನವೆಂಬರ್ 2023, 5:17 IST
ಅಕ್ಷರ ಗಾತ್ರ

ಕಾರವಾರ: ಮಳೆಗಾಲ ಮುಗಿಯುತ್ತಿದ್ದಂತೆ ಚಿಗಿತುಕೊಳ್ಳುತ್ತಿದ್ದ ಮೀನುಗಾರಿಕೆ ಚಟುವಟಿಕೆಯ ಜತೆಗೆ ಒಣಮೀನು ವಹಿವಾಟಿನ ಮೂಲಕ ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳುತ್ತಿದ್ದ ಮೀನುಗಾರ ಮಹಿಳೆಯರಿಗೆ ಈ ಬಾರಿ ದಿಕ್ಕು ತೋಚದ ಸ್ಥಿತಿ ನಿರ್ಮಾಣವಾಗಿದೆ.

ಮೀನು ಒಣಗಿಸಿ ಮಾರಾಟ ಮಾಡಲು ಅಗತ್ಯ ಪ್ರಮಾಣದ ಮೀನು ಲಭಿಸದಿರುವುದು ಇದಕ್ಕೆ ಪ್ರಮುಖ ಕಾರಣ. ಒಂದೆಡೆ ಮೀನುಗಾರಿಕೆ ದೋಣಿಗಳಿಗೂ ನಿರೀಕ್ಷಿತ ಪ್ರಮಾಣದ ಮೀನು ಸಿಗದೆ ಖಾಲಿಯಾಗಿ ದಡಕ್ಕೆ ಮರಳುವ ಸ್ಥಿತಿ ಇದ್ದರೆ, ದಡದಲ್ಲಿ ಮೀನಿಗಾಗಿ ಕಾದು ಕುಳಿತ ಮಹಿಳೆಯರು ಖಾಲಿ ಬುಟ್ಟಿ ಹೊತ್ತು ಮನೆಗೆ ಮರಳುವ ದೃಶ್ಯಗಳು ಮೀನುಗಾರಿಕೆ ಬಂದರು ಪ್ರದೇಶದಲ್ಲಿ ಕಾಣಸಿಗುತ್ತಿವೆ.

ಇಲ್ಲಿನ ಬೈತಕೋಲ, ಮುದಗಾ, ಮಾಜಾಳಿ, ಕಾರವಾರದ ನಗರದ ಕೊಂಕಣ ಖಾರ್ವಿವಾಡಾ, ಸರ್ವೋದಯ ನಗರ ಭಾಗದಲ್ಲಿ ಒಣಮೀನು ತಯಾರಿಕೆ ಹೆಚ್ಚು ನಡೆಯುತ್ತದೆ. ಅದರಲ್ಲಿಯೂ ಬೈತಕೋಲ, ಕೊಂಕಣ ಖಾರ್ವಿವಾಡಾ ಸಮೀಪದಲ್ಲಿರುವ ಟ್ಯಾಗೋರ್ ಕಡಲತೀರ, ಮಾಜಾಳಿಯ ಬಾವಳ, ಗಾಬೀತವಾಡಾ ಭಾಗದಲ್ಲಿ ಕಡಲತೀರದಲ್ಲಿ ಸಾಲುಸಾಲಾಗಿ ಮೀನು ಒಣಗಿಸುವ ಚಟುವಟಿಕೆ ನಡೆಯುತ್ತವೆ. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮೀನುಗಾರರು ಮಾತ್ರ ಮೀನು ಒಣಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

‘ಅಕ್ಟೋಬರ್ ನಂತರ ಒಣಮೀನು ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ಮೊದಲೆಲ್ಲ 30ಕ್ಕೂ ಹೆಚ್ಚು ಮಂದಿ ಮಹಿಳೆಯರು ಸೇರಿ ಮೀನು ಒಣಗಿಸುವ ಕೆಲಸ ಮಾಡುತ್ತಿದ್ದೆವು. ಈ ಬಾರಿ ಸಂಖ್ಯೆ ಕಡಿಮೆಯಾಗಿದೆ. ಬಂಗುಡೆ, ಸೊಂದಾಳೆ, ತಾರ್ಲೆ, ಸೋರ (ಶಾರ್ಕ್ ಮೀನು) ಮುಂತಾದವುಗಳನ್ನು ಒಣಗಿಸಲಾಗುತ್ತಿತ್ತು. ಈಗ ಅಗತ್ಯದಷ್ಟು ಮೀನು ಸಿಗುತ್ತಿಲ್ಲ. ಮೀನುಗಾರಿಕೆ ಬಂದರಿಗೆ ತೆರಳಿ ನಾಲ್ಕರು ತಾಸು ಕಾದರೂ ಒಂದು ಬುಟ್ಟಿ ಮೀನು ಸಿಗದ ಸ್ಥಿತಿ ಉಂಟಾಗಿದೆ’ ಎನ್ನುತ್ತಾರೆ ಕೊಂಕಣ ಖಾರ್ವಿವಾಡಾದ ರಂಜನಾ ಗಂಗಾವಳಿಕರ್.

‘ಅರಬ್ಬಿ ಸಮುದ್ರದಲ್ಲಿ ಮೀನು ಕೊರತೆ ಎದುರಾಗಿದೆ. ಇದರಿಂದಾಗಿ ಆಳಸಮುದ್ರಕ್ಕೆ ತೆರಳಲು ಟ್ರಾಲರ್ ಬೋಟಿನವರು ಹಿಂದೇಟು ಹಾಕುವ ಸ್ಥಿತಿ ಇದೆ. ಕೆಲವೇ ದೋಣಿಗಳು ಮಾತ್ರ ಮೀನುಗಾರಿಕೆಗೆ ತೆರಳುತ್ತಿವೆ. ಅವುಗಳಲ್ಲಿಯೂ ಮೀನು ತುಂಬಿಕೊಂಡು ಬರುವ ದೋಣಿಗಳು ಅಪರೂಪವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲೂ ಮೀನಿಗೆ ಕೊರತೆ ಉಂಟಾಗಿದೆ. ಜತೆಗೆ ಒಣಮೀನು ತಯಾರಿಸುವ ಮಹಿಳೆಯರಿಗೂ ಮೀನು ಸಿಗುತ್ತಿಲ್ಲ’ ಎನ್ನುತ್ತಾರೆ ಬೈತಕೋಲದ ವಿನಾಯಕ ಹರಿಕಂತ್ರ.

‘ಮಳೆಯ ಕೊರತೆ, ಪದೇ ಪದೇ ಬಿರುಗಾಳಿ ಎಳುತ್ತಿರುವದರಿಂದ ಮೀನುಗಳ ಕೊರತೆ ಮತ್ತು ವಲಸೆ ಹೆಚ್ಚುತ್ತಿದೆ ಎಂದು ತಜ್ಞರು ಹೇಳುತ್ತಾರೆ. ವರ್ಷದಿಂದ ವರ್ಷಕ್ಕೆ ಮೀನು ಸಿಗುವ ಪ್ರಮಾಣ ಕುಂಠಿತವಾಗುತ್ತಿರುವುದು ಕಳವಳಕಾರಿಯಾಗಿದೆ. ನೆರೆಯ ಗೋವಾ, ಮಹಾರಾಷ್ಟ್ರಕ್ಕೂ ರಫ್ತಾಗುತ್ತಿದ್ದ ಇಲ್ಲಿನ ಒಣಮೀನುಗಳ ತಯಾರಿಕೆ ಮೇಲೆ ಇವು ಅಡ್ಡ ಪರಿಣಾಮ ಬೀರುತ್ತಿದೆ’ ಎಂದರು.

ಮೀನುಗಾರಿಕೆ ಬಂದರುಗಳಲ್ಲಿ ಮೀನಿಗಾಗಿ ಕಾಯುವ ಮಹಿಳೆಯರು ಕ್ಷೀಣಿಸುತ್ತಿರುವ ಒಣಮೀನು ತಯಾರಕರ ಸಂಖ್ಯೆ ಗೋವಾ, ಮಹಾರಾಷ್ಟ್ರಕ್ಕೆ ರಫ್ತಾಗುತ್ತಿದ್ದ ಒಣಮೀನು

ವರ್ಷದಿಂದ ವರ್ಷಕ್ಕೆ ಮೀನುಗಳ ಕೊರತೆ ಉಂಟಾಗುತ್ತಿದ್ದು ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುವವರ ಸ್ಥಿತಿ ಕಷ್ಟಕ್ಕೆ ದೂಡಲ್ಪಡುತ್ತಿದೆ.
ರಾಜು ತಾಂಡೇಲ್ ಜಿಲ್ಲಾ ಮೀನು ಮಾರಾಟ ಸಹಕಾರ ಫೆಡರೇಶನ್‍ನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT