ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಳುಮೆಣಸಿನ ತಳಿ ‘ಸಿಗಂದಿನಿ’; ಸಸ್ಯ ವೈವಿಧ್ಯ ಪುಸ್ತಕದಲ್ಲಿ ನೋಂದಣಿ

ತಳಿಯ ಅಭಿವೃದ್ಧಿ ಸೇರಿದಂತೆ ವಿವಿಧ ಹಕ್ಕು ಪಡೆದುಕೊಂಡ ರಮಾಕಾಂತ ಹೆಗಡೆ
Published : 10 ಜುಲೈ 2021, 19:30 IST
ಫಾಲೋ ಮಾಡಿ
Comments

ಸಿದ್ದಾಪುರ: ತಾಲ್ಲೂಕಿನ ಹುಣಸೆಕೊಪ್ಪದ ರೈತ ರಮಾಕಾಂತ ಹೆಗಡೆ ಅವರು ಅಭಿವೃದ್ಧಿ ಪಡಿಸಿರುವ ಸ್ಥಳೀಯ ಕಾಳುಮೆಣಸಿನ ತಳಿಯು ಕೇಂದ್ರ ಸರ್ಕಾರದ ಸಸ್ಯ ವೈವಿಧ್ಯ ಪುಸ್ತಕದಲ್ಲಿ ನೋಂದಣಿಯಾಗಿದೆ.

ಈ ತಳಿಗೆ ‘ಸಿಗಂದಿನಿ’ ಎಂದು ಹೆಸರಿಡಲಾಗಿದೆ. ಈ ಪ್ರಕ್ರಿಯೆಯಿಂದ ತಳಿಯ ಅಭಿವೃದ್ಧಿ ಮತ್ತಿತರ ಎಲ್ಲ ಹಕ್ಕುಗಳೂ ರಮಾಕಾಂತ ಹೆಗಡೆ ಅವರಿಗೆ ಪ್ರಾಪ್ತವಾಗಿದೆ. ರೈತರೊಬ್ಬರು ಅಭಿವೃದ್ಧಿಪಡಿಸಿದ ಕಾಳುಮೆಣಸು ತಳಿಯೊಂದಕ್ಕೆ ಈ ರೀತಿ ಹಕ್ಕು ಪ್ರಾಪ್ತವಾಗಿರುವುದು ರಾಜ್ಯದಲ್ಲಿಯೇ ಪ್ರಥಮ ಎಂದು ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ತಳಿಯ ಗುಣಮಟ್ಟ ಹಾಗೂ ವೈಶಿಷ್ಟ್ಯವನ್ನು ಪರಿಶೀಲಿಸಿ, ಅದನ್ನು ನೋಂದಣಿ ಮಾಡಿಸುವುದಕ್ಕೆ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಡಾ.ವೇಣುಗೋಪಾಲ, ಕೊಚ್ಚಿಯ ಕೋಕೋ ಹಾಗೂ ಗೇರು ನಿರ್ದೇಶನಾಲಯದ ಕೇಂದ್ರದ ಉಪ ನಿರ್ದೇಶಕ ಬಾಬಾ ಸಾಹೇಬ ದೇಸಾಯಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಮಹಾಬಲೇಶ್ವರ, ಎಚ್‌.ಜಿ.ಅರುಣ ಮತ್ತಿತರ ಸ್ಥಳೀಯ ತೋಟಗಾರಿಕಾ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ.

‘ನಮ್ಮ ತೋಟದಲ್ಲಿ ಹಿರಿಯರ ಕಾಲದಿಂದ ಕಾಳುಮೆಣಸಿನ ತಳಿಯೊಂದು ಇತ್ತು. ಈ ತಳಿ ಈ ಭಾಗದಲ್ಲಿ ಪ್ರಚಲಿತದಲ್ಲಿರುವ ಫಣಿಯೂರು ತಳಿಗಿಂತ ಉತ್ತಮ ಎಂದೆನಿಸಿತ್ತು. ಅದನ್ನು ತೋಟದಲ್ಲಿ ಬೆಳೆಸುತ್ತ ಬಂದೆ’ ಎಂದು ರಮಾಕಾಂತ ಹೆಗಡೆ ವಿವರಿಸಿದರು.

‘ನನ್ನ ತೋಟದಲ್ಲಿ ಇದೇ ತಳಿಯ 100 ಕಾಳುಮೆಣಸಿನ ಬಳ್ಳಿಗಳಿವೆ. ಒಂದೊಂದು ಬಳ್ಳಿಯಲ್ಲಿಯೂ ತಲಾ ನಾಲ್ಕೂವರೆ ಕೆ.ಜಿ ಕಾಳು ಮೆಣಸು ಸಿಗುತ್ತಿದೆ. ಈ ತಳಿಗೆ ಸೊರಗು ಅಥವಾ ಕೊಳೆ ರೋಗವನ್ನು ತಾಳಿಕೊಳ್ಳುವ ಗುಣ ಜಾಸ್ತಿಯಿದೆ. ಏಳು ವರ್ಷಗಳಿಂದ ನನ್ನದೇ ನರ್ಸರಿಯಲ್ಲಿ ಬೆಳೆದ ಸುಮಾರು 1 ಲಕ್ಷ ಕಾಳುಮೆಣಸಿನ ಸಸಿಗಳನ್ನು ರೈತರಿಗೆ ಮಾರಾಟ ಮಾಡಿದ್ದೇನೆ. ರಾಜ್ಯದ ವಿವಿಧೆಡೆ ಅಲ್ಲದೇ ಕೇರಳಕ್ಕೂ ರೈತರು ಈ ತಳಿಯನ್ನು ಒಯ್ದಿದ್ದಾರೆ’ ಎಂದರು.

‘ನೆರಳಿನಲ್ಲೂ ಉತ್ತಮ’:‘ಸಿಗಂದಿನಿ ಕಾಳುಮೆಣಸಿನ ತಳಿಯ ಬಳ್ಳಿಗಳು ನೆರಳು ಇರುವಂತಹ ಅಡಿಕೆ ತೋಟಗಳಲ್ಲಿಯೂ ಉತ್ತಮ ಎಂದು ಕಂಡುಬಂದಿದೆ. ಕಾಳುಗಳ ಗಾತ್ರ ಒಂದೇ ರೀತಿ ಬರುತ್ತದೆ. ಅದರಲ್ಲಿಯೂ ಬಿಳಿ ಕಾಳುಗಳ ಗುಣಮಟ್ಟ ವಿಶಿಷ್ಟವಾಗಿದೆ. ಬಳ್ಳಿಗಳು ಬೇಗನೆ ಬೆಳೆಯುವುದಲ್ಲದೇ ಸೊರಗು ರೋಗದ ಬಾಧೆ ಕಡಿಮೆ’ ಎಂಬುದು ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ ಅವರ ಅಭಿಪ್ರಾಯ.

***

ಸಿಗಂದಿನಿ ಕಾಳುಮೆಣಸು ನಾಟಿ ಮಾಡಿದ ಎರಡು ವರ್ಷಕ್ಕೆ ಫಸಲು ನೀಡುತ್ತದೆ. ಉತ್ತಮವಾಗಿ ನಿರ್ವಹಣೆಯಿದ್ದರೆ ಹೆಚ್ಚಿನ ಫಸಲು ಸಿಗುತ್ತದೆ. ನಿರ್ವಹಣೆ ಇಲ್ಲದಿದ್ದರೂ ಸಾಯುವುದಿಲ್ಲ.
– ರಮಾಕಾಂತ ಹೆಗಡೆ, ರೈತ.

***

ಸಿಗಂದಿನಿ ತಳಿ ಕಾಳುಮೆಣಸಿನ ಲೀಟರ್‌ ವೇಯ್ಟ್‌ ಹೆಚ್ಚು ಇರುವುದರಿಂದ ಇದನ್ನು ವಿದೇಶಕ್ಕೂ ರಪ್ತು ಮಾಡುವ ಅವಕಾಶವಿದೆ.
– ಮಹಾಬಲೇಶ್ವರ, ತೋಟಗಾರಿಕಾ ಅಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT