ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅತಿಕ್ರಮಣಕ್ಕೆ ನಲುಗಿದ ಗೋಮಾಳ

ಅಂಡಗಿಯಲ್ಲಿ ಕಂದಾಯ, ಗೋಮಾಳ ಜಾಗ ಅತಿಕ್ರಮಣ
Published 31 ಮಾರ್ಚ್ 2024, 5:21 IST
Last Updated 31 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಅಂಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೋಮಾಳ ಮತ್ತು ಕಂದಾಯ ಇಲಾಖೆಗೆ ಸೇರಿದ ಸುಮಾರು 50 ಎಕರೆ ಜಾಗ ಅತಿಕ್ರಮಣವಾಗಿರುವ ಆರೋಪ ಕೇಳಿ ಬಂದಿದ್ದು, ಸಂಬಂಧಪಟ್ಟ ಇಲಾಖೆ ಇಂಥ ಕೃತ್ಯಕ್ಕೆ ತಕ್ಷಣ ಕಡಿವಾಣ ಹಾಕುವಂತೆ ಗ್ರಾಮಸ್ಥರ ಒತ್ತಾಯ ವ್ಯಕ್ತವಾಗಿದೆ.

‘ಜಾನುವಾರು ಮೇವಿಗಾಗಿ ಮೀಸಲಿಟ್ಟ ಗೋಮಾಳವನ್ನು ಗ್ರಾಮದ ಕೆಲವು ಪ್ರಭಾವಿಗಳು ಅತಿಕ್ರಮಿಸಿ ಸ್ವಂತ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಿ ಜಾಗವು ಕಡಿಮೆಯಾಗುತ್ತಿದೆ. ಗೋಮಾಳ, ಕಂದಾಯ, ಅರಣ್ಯ ಇಲಾಖೆಯ ಜಾಗ ಪ್ರತಿನಿತ್ಯ ಖಾಸಗಿಯವರ ಪಾಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಕಂದಾಯ ಮತ್ತು ಗೋಮಾಳ ಜಾಗದಲ್ಲಿ ಕಳೆದ ಹಲವು ದಶಕಗಳಿಂದ ಗ್ರಾಮದ ಎಮ್ಮೆ, ಆಕಳು, ಕುರಿಗಳು ಹುಲ್ಲು ಮೇಯುತ್ತ ಸಮೀಪದಲ್ಲಿರುವ ಕೆರೆಯಲ್ಲಿ ನೀರು ಕುಡಿಯುತ್ತಿದ್ದವು. ಈಗ ಗೋಮಾಳ ನುಂಗಿ ಕೆರೆಗಳನ್ನೂ ಒತ್ತುವರಿ ಮಾಡಲಾಗಿದೆ. ರಾತ್ರೋರಾತ್ರಿ ಜೆಸಿಬಿ, ಟ್ರ್ಯಾಕ್ಟರ್ ಬಳಸಿ ಅತಿಕ್ರಮಣ ಮಾಡುತ್ತಿದ್ದಾರೆ. ಕೆಲವರು ಎರಡು-ಮೂರು ವರ್ಷಗಳಿಂದ ಗೋಮಾಳ ಭೂಮಿಯನ್ನು ಸಾಗುವಳಿ ಮಾಡಿ ಜೋಳ, ರಾಗಿ ಬೆಳೆಯುತ್ತಿರುವುದಲ್ಲದೆ ಅಡಿಕೆ ತೋಟ ನಿರ್ಮಾಣದಲ್ಲೂ ತೊಡಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ಗೋಮಾಳದ ಅಂಚಿನಲ್ಲಿ ಕಂದಕ ನಿರ್ಮಾಣಕ್ಕೆ ₹ 3 ಲಕ್ಷ ಮತ್ತು ಗೋಮಾಳದ ಗಡಿ ಅಂಚಿನಲ್ಲಿ ಸಸಿ ನಾಟಿ ಮಾಡಲು ₹ 1 ಲಕ್ಷ ಮಂಜೂರಾದರೂ ಕಾಮಗಾರಿ ಮಾತ್ರ ಆರಂಭಿಸಿಲ್ಲ. ಈ ಕುರಿತು ವಿಚಾರಿಸಿದಾಗ, ಮೇಲಧಿಕಾರಿಗಳು ಸರ್ವೆ ಮಾಡಿ ಗುರುತಿಸಿಕೊಟ್ಟಲ್ಲಿ ಕಂದಕ ನಿರ್ಮಾಣ ಮಾಡುವುದಾಗಿ ಗ್ರಾಮ ಪಂಚಾಯಿತಿಯವರು ಹೇಳುತ್ತಿದ್ದಾರೆ. ಪೊಲೀಸರ ಬಂದೋಬಸ್ತನಲ್ಲಿ ಭೂಗಳ್ಳರ ಪಾಲಾದ ಸರ್ಕಾರದ ಆಸ್ತಿ ವಶಪಡಿಸಿಕೊಳ್ಳಲು ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅತಿಕ್ರಮಣವಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದೆವು. ಈ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಪರಿಶೀಲಿಸಿ ಅತಿಕ್ರಮಿತ ಪ್ರದೇಶ ಖುಲ್ಲಾಪಡಿಸಲು ಆದೇಶಿಸಿದ್ದರು. ನಂತರ ಬನವಾಸಿ ಉಪ ತಹಶೀಲ್ದಾರ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಕ್ಷಮ ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಪೂರ್ಣ ಕ್ಷೇತ್ರದ ಚಿತ್ರಣವನ್ನು ಮೇಲಧಿಕಾರಿಗಳಿಗೆ ತಿಳಿಸಿ, ಸಂಪೂರ್ಣ ಜಾಗವನ್ನು ಸರ್ವೆ ಮಾಡಿಸಿ, ಖುಲ್ಲಾಪಡಿಸಲಾಗುತ್ತದೆ ಎಂದು ಹೇಳಿದ್ದರು. ಇದಾಗಿ ವರ್ಷಗಳು ಕಳೆದರೂ ಅಧಿಕಾರಿಗಳು ಮಾತ್ರ ಈ ಕಡೆ ಮುಖ ಹಾಕಿಲ್ಲ ಎಂದು ಸ್ಥಳೀಯರಾದ ಬಸಪ್ಪ ನಾಯ್ಕ, ಕರಿಬಸಪ್ಪ ಗೌಡರ್, ಕಲ್ಲಪ್ಪ ಗೌಡ, ನಿಂಗಪ್ಪ ಶಿವಪ್ಪ ಗೌಡ ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಬರಗಾಲದಿಂದ ಜಾನುವಾರು ಸಾಕಲು ಮೇವಿಲ್ಲದೇ ಸಂಕಷ್ಟ ಎದುರಾಗಿದೆ. ಗೋಮಾಳದ ಜಾಗವೂ ಅತಿಕ್ರಮಣವಾದ್ದರಿಂದ ದನ-ಕರುಗಳಿಗೆ ಮೇಯಲು ಜಾಗವಿಲ್ಲದೇ ರೈತರು ಜಾನುವಾರುಗಳನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದಾರೆ
ಬಸಪ್ಪ ನಾಯ್ಕ ಅಂಡಗಿ ಗ್ರಾಮಸ್ಥ
ಕಂದಾಯ ಹಾಗೂ ಗೋಮಾಳದ ಜಾಗ ಅತಿಕ್ರಮಣವಾಗಿದ್ದರೆ ಅದನ್ನು ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಎಚ್.ಬಿ. ಪಿಜರಾಲ್ ತಹಶೀಲ್ದಾರ್ ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT