ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಕಸಿ ಕಾಳುಮೆಣಸು ಬಳ್ಳಿಗಳಿಗೆ ಸಂಕಷ್ಟ

ತೇವಾಂಶ ಕೊರತೆಗೆ ನಲುಗಿದ ಕಾಳುಮೆಣಸು ಕೃಷಿ: ಆತಂಕದಲ್ಲಿ ಬೆಳೆಗಾರರು
Published 2 ಏಪ್ರಿಲ್ 2024, 4:19 IST
Last Updated 2 ಏಪ್ರಿಲ್ 2024, 4:19 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ನೆಲೆ ಕಂಡಿರುವ ಕಾಳುಮೆಣಸಿನ ಪ್ರಸಕ್ತ ಸಾಲಿನ ಫಲ ಬೆಳೆಗಾರರ ಕೈಸೇರಿದೆ. ಆದರೆ ನೀರಿನ ಕೊರತೆ ಹಾಗೂ ವಾತಾವರಣದಲ್ಲಿನ ತೀವ್ರ ಉಷ್ಣಾಂಶ ಕಸಿ ಕಾಳುಮೆಣಸು ಬಳ್ಳಿಗಳ ಜೀವ ತೆಗೆಯುತ್ತಿದೆ.

ತಾಲ್ಲೂಕಿನಲ್ಲಿ ಮೂರು ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಕಾಳುಮೆಣಸು ಕೃಷಿಯಿದೆ. ದಶಕದಿಂದ ಈಚೆಗೆ ಸಾಂಪ್ರದಾಯಿಕ ತಳಿಗಳ ಬಳ್ಳಿ ನಾಟಿ ವ್ಯವಸ್ಥೆಯ ಬದಲಿಗೆ ಕಸಿ ಕಾಳುಮೆಣಸಿನ ಬಳ್ಳಿ ನಾಟಿ ಜೋರಾಗಿದೆ. ಹಿಪ್ಪಲಿ ಗಿಡಗಳಿಗೆ ಕಾಳುಮೆಣಸಿನ ಬಳ್ಳಿಗಳ ಕಸಿ ಮಾಡಲಾಗುತ್ತದೆ. ಈ ಕಸಿ ತಳಿಗಳಿಗೆ ಕೊಳೆ ರೋಗ ಅಂಟುವುದು ಕಡಿಮೆ ಎಂಬುದು ಈ ತಳಿ ನಾಟಿಗೆ ಪ್ರಮುಖ ಕಾರಣವಾಗಿದೆ.

‘ಪ್ರಸಕ್ತ ಸಾಲಿನಲ್ಲಿ ನೀರಿನ ಕೊರತೆಯಿಂದ ಕಸಿ ಬಳ್ಳಿಗಳು ಸೊರಗುತ್ತಿವೆ. ಎಲೆಗಳು ತಾಮ್ರ ವರ್ಣಕ್ಕೆ ತಿರುಗಿವೆ. ಅಲ್ಲಲ್ಲಿ ಚುಕ್ಕೆರೋಗವೂ ಕಾಣಿಸಿಕೊಳ್ಳುತ್ತಿದೆ. ಮಳೆಯಾಗದಿದ್ದರೆ ಈ  ಬಳ್ಳಿಗಳನ್ನು ಉಳಿಸಿಕೊಳ್ಳುವುದು ಕಷ್ಟ’ ಎಂಬುದು  ಬೆಳೆಗಾರರ ಮಾತಾಗಿದೆ.

‘ನೀರು ಪೂರೈಸಿ ಬೆಳೆ ಉಳಿಸಲು ಸಾಧ್ಯವಿಲ್ಲದಂತೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಕೆಲವು ಕೊಳವೆ ಬಾವಿಗಳಲ್ಲಿ ಮಧ್ಯಾಹ್ನದ ನಂತರ ನೀರಿನ ಹರಿವು ಕಡಿಮೆಯಾಗುತ್ತದೆ. ಕೆಲವೊಮ್ಮೆ ವಿದ್ಯುತ್ ಅಡಚಣೆಯೂ ಕಾಡುತ್ತಿದೆ. ಇದರಿಂದಾಗಿ ನೀರಿದ್ದರೂ ಬೆಳೆಗಳಿಗೆ ಬಿಡುವುದಕ್ಕೆ ಆಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ಕಾಳುಮೆಣಸು ಕೃಷಿ ಮಾಡಲಾಗದ ಸ್ಥಿತಿ ಬರುತ್ತದೆ’ ಎಂದು ಕೊಪ್ಪದ ಕಾಳುಮೆಣಸು ಕೃಷಿಕ ಶ್ರೀಧರ ಹೆಗಡೆ ಬೇಸರ ವ್ಯಕ್ತಪಡಿಸಿದರು.

‘ಎರಡು ವರ್ಷಗಳ ಹಿಂದೆ ಸುರಿದ ಅತಿಯಾದ ಮಳೆಯು ಸೊರಗು ರೋಗ ತಂದಿತ್ತು. ಮಳೆ ಕೊರತೆಯಾದರೆ ನಿಧಾನಗತಿಯಲ್ಲಿ ಸೊರಗು ಕಾಣಿಸುತ್ತದೆ. ಇದರಿಂದ ಬಳ್ಳಿ ಒಣಗುತ್ತದೆ. ಪ್ರಸಕ್ತ ಸಾಲಿನ ತಾಪಮಾನ ಎಲ್ಲ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಕಸಿ ಕಾಳುಮೆಣಸು ಬಳ್ಳಿಗಳು ನೀರಿನ ಪ್ರಮಾಣ ಹೆಚ್ಚು ಆಶ್ರಯಿಸುವ ಕಾರಣಕ್ಕೆ ಸಮಸ್ಯೆ ಹೆಚ್ಚಿದೆ. ಏಪ್ರಿಲ್ ವೇಳೆಗೆ ಮಳೆ ಸುರಿದರೆ ಒಣಗುವ ಬಳ್ಳಿಯನ್ನು ಉಳಿಸಿಕೊಳ್ಳಬಹುದು. ಮಳೆ ವಿಳಂಬವಾದರೆ ರೈತರು ಫಸಲಿನ ಜತೆ ಬಳ್ಳಿಯ ಆಸೆ ಕೈಬಿಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ನೀರಾವರಿ ವ್ಯವಸ್ಥೆ ಇರುವಲ್ಲಿ ಸಮಸ್ಯೆ ನಿಯಂತ್ರಣದಲ್ಲಿದೆ. ಆದರೆ ನೀರಿನ ಕೊರತೆಯ ಪ್ರದೇಶದಲ್ಲಿ ಅದರಲ್ಲಿಯೂ ತಾಪಮಾನ ಏರಿಕೆ ಸಹಿಸದ ಕಸಿ ಕಾಳುಮೆಣಸಿಗೆ ಸಮಸ್ಯೆ ಆಗುತ್ತಿದೆ

-ವೆಂಕಟೇಶ ಹೆಗಡೆ ಶಿರಸಿ ಕೃಷಿಕ

ತೇವಾಂಶದ ಕೊರತೆ ತೋಟಗಾರಿಕಾ ಬೆಳೆಯಾದ ಕಾಳು ಮೆಣಸಿನ ಮೇಲೆ ಹೆಚ್ಚು ಆಗಿದೆ. ನಿರಂತರ ನೀರು ಪೂರೈಸುತ್ತಿದ್ದ ಜಲ ಮೂಲಗಳು ಬತ್ತುತ್ತಿದ್ದು ಮೆಣಸು ಬಳ್ಳಿಯ ಪರಾಗ ಸ್ಪರ್ಶವೂ ಕುಂಠಿತವಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೂವಿನ ಕೊರತೆ ಕಂಡು ಬರಲಿದೆ

-ಸತೀಶ ಹೆಗಡೆ ತೋಟಗಾರಿಕಾ ಅಧಿಕಾರಿ ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT