ಶಿರಸಿ: ಇಲ್ಲಿನ ಗಣೇಶನಗರದ ಬಳಿ ಇರುವ ಬಸ್ ನಿಲ್ದಾಣವು ಇಂದು ಸಮಸ್ಯೆಗಳ ಕೂಪವಾಗಿ ಮಾರ್ಪಟ್ಟಿದೆ. ಸುಸಜ್ಜಿತ ಸಾರಿಗೆ ಸೌಲಭ್ಯದ ಕನಸು ಹೊತ್ತು ಬಂದ ಪ್ರಯಾಣಿಕರಿಗೆ ಇಲ್ಲಿನ ಅವ್ಯವಸ್ಥೆಗಳು ಶಾಪವಾಗಿ ಪರಿಣಮಿಸಿವೆ. ನಿಲ್ದಾಣದ ಮೂಲಸೌಕರ್ಯಗಳು ಒಂದೊಂದಾಗಿ ಕುಸಿಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

'ದಶಕದ ಹಿಂದೆ ನಿರ್ಮಿಸಲಾಗಿದ್ದ ಬಸ್ ನಿಲ್ದಾಣ ಪ್ರಯಾಣಿಕರಲ್ಲಿ ಆಶಾಭಾವ ಮೂಡಿಸಿತ್ತು. ಆದರೆ ದಿನ ಕಳೆದಂತೆ ಸೌಲಭ್ಯಗಳು ಇಲ್ಲಿ ಮರೀಚಿಕೆ ಆಗುತ್ತಿದೆ. ಹೊಸರಾತ್ರಿ ವೇಳೆಯಲ್ಲಿ ಹೊರ ಊರುಗಳಿಗೆ ತೆರಳುವ ಬಸ್ಗಳು ಈ ನಿಲ್ದಾಣಕ್ಕೆ ಬರುತ್ತಿಲ್ಲ ಎಂಬ ಗಂಭೀರ ದೂರು ಕೇಳಿಬರುತ್ತಿದೆ. ಇದರಿಂದಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ಅನಿವಾರ್ಯವಾಗಿ ನಗರದ ಹಳೆಯ ನಿಲ್ದಾಣಕ್ಕೋ ಅಥವಾ ಖಾಸಗಿ ವಾಹನಗಳನ್ನೋ ಅವಲಂಬಿಸಬೇಕಾದ ಸ್ಥಿತಿ ಇದೆ' ಎಂಬುದು ನಿತ್ಯ ಪ್ರಯಾಣಿಸುವ ಇಲ್ಲಿನ ಸುರೇಶ ನಾಯ್ಕ ದೂರಾಗಿದೆ.

'ನಿಲ್ದಾಣದ ಕಟ್ಟಡದ ಸುರಕ್ಷತೆಯೂ ಪ್ರಶ್ನಾರ್ಹವಾಗಿದೆ. ಕಾಂಕ್ರೀಟ್ ಚಾವಣಿಯು ಅಲ್ಲಲ್ಲಿ ಕಳಚಿ ಬೀಳುವ ಹಂತ ತಲುಪಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಭೀತಿಯಲ್ಲೇ ಪ್ರಯಾಣಿಕರು ಕಾಲ ಕಳೆಯಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆಯಂತೂ ಸಂಪೂರ್ಣ ಹದಗೆಟ್ಟಿದ್ದು, ಬಾಯಾರಿದ ಪ್ರಯಾಣಿಕರು ಹಣ ಕೊಟ್ಟು ಬಾಟಲಿ ನೀರು ಖರೀದಿಸುವುದು ಅನಿವಾರ್ಯವಾಗಿದೆ' ಎನ್ನುತ್ತಾರೆ ಅವರು.

'ನೈರ್ಮಲ್ಯದ ವಿಷಯದಲ್ಲಂತೂ ಪರಿಸ್ಥಿತಿ ಮಿತಿಮೀರಿದೆ. ಇಡೀ ಆವರಣ ಕಸದ ತೊಟ್ಟಿಯಾಗಿದೆ. ಶೌಚಾಲಯ ಮತ್ತು ಮೂತ್ರಾಲಯಗಳ ಕೊಳಕು ನೀರು ನೇರವಾಗಿ ತೆರೆದ ಚರಂಡಿಗೆ ಹರಿಯುತ್ತಿದ್ದು, ಇಡೀ ಆವರಣ ಗಬ್ಬೆದ್ದು ನಾರುತ್ತಿದೆ. ಈ ದುರ್ವಾಸನೆಯಿಂದಾಗಿ ನಿಲ್ದಾಣದ ಸುತ್ತಲ ನಿವಾಸಿಗಳ ಜೀವನ ದುಸ್ತರವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಸುತ್ತಮುತ್ತಲ ನಿವಾಸಿಗಳು ಮತ್ತು ಪ್ರಯಾಣಿಕರ ಆರೋಗ್ಯಕ್ಕೆ ಸಂಚಕಾರ ಬಂದೊದಗಿದೆ' ಎನ್ನುತ್ತಾರೆ ಸ್ಥಳಿಕರಾದ ವಿನಾಯಕ ಹೆಗಡೆ.

'ಮುಂಗಡ ಬುಕ್ಕಿಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲದೆ ಜನರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಕೆರೆಯಂತಾಗಿದ್ದ ಬಸ್ ನಿಲ್ದಾಣದ ಆವರಣ, ಮಳೆ ನಿಂತ ಮೇಲೆ ಧೂಳಿನಿಂದ ಆವೃತವಾಗಿದೆ. ಕಲ್ಲಿನ ಕಣಗಳು ಮತ್ತು ಧೂಳಿನ ಕಾರಣದಿಂದಾಗಿ ಉಸಿರಾಡುವುದೂ ಕಷ್ಟವಾಗುತ್ತಿದೆ. ನಿತ್ಯ ಓಡಾಡುವವರ ಪರಿಸ್ಥಿತಿ ಯಾರಿಗೆ ಹೇಳಬೇಕು' ಎಂಬುದು ಪ್ರಯಾಣಿಕರ ದೂರಾಗಿದೆ.

ಮಾರಿಕಾಂಬಾ ಜಾತ್ರೆ ಆರಂಭವಾಗುವ ಮೊದಲೇ ನಿಲ್ದಾಣಕ್ಕೆ ಕಾಯಕಲ್ಪ ನೀಡಲು ಅಧಿಕಾರಿಗಳು ಮುಂದಾಗಬೇಕು
ವಸಂತ ಶೆಟ್ಟಿ, ಪ್ರಯಾಣಿಕ

ಈಗಾಗಲೇ ದುರಸ್ತಿ ಸಂಬಂಧ ಜಲ್ಲಿ, ಕಲ್ಲು ತರಲಾಗಿದ್ದು, ತ್ವರಿತವಾಗಿ ದುರಸ್ತಿ ನಡೆಸಲಾಗುವುದು
ಬಸವರಾಜ, ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ

ಈಡೇರದ ಭರವಸೆ: ಆಕ್ರೋಶ

‘ಮಳೆಗಾಲ ಮುಗಿದ ತಕ್ಷಣ ದುರಸ್ತಿ ಕಾರ್ಯ ಮಾಡುವುದಾಗಿ ಭರವಸೆ ನೀಡಿದ್ದ ಸಾರಿಗೆ ಸಂಸ್ಥೆಯು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಿರಸಿ ಮಾರಿಕಾಂಬಾ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಲಕ್ಷಾಂತರ ಭಕ್ತರು ನಗರಕ್ಕೆ ಆಗಮಿಸಲಿದ್ದಾರೆ. ಇಂತಹ ಸಂದರ್ಭದಲ್ಲೂ ನಿಲ್ದಾಣದ ದುಸ್ಥಿತಿ ಹೀಗಿದ್ದರೆ ಭಕ್ತರ ಸ್ಥಿತಿ ಏನಾಗಬೇಡ?’ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.