ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಪಶು ಆಹಾರ: ಸಹಾಯಧನಕ್ಕೆ ಹೆಚ್ಚಿದ ಒತ್ತಡ

ಪಶು ಆಹಾರ ದರ ಏರಿಕೆಯಿಂದ ಕಂಗೆಟ್ಟ ಹೈನುಗಾರರು
Published 25 ಫೆಬ್ರುವರಿ 2024, 4:30 IST
Last Updated 25 ಫೆಬ್ರುವರಿ 2024, 4:30 IST
ಅಕ್ಷರ ಗಾತ್ರ

ಶಿರಸಿ: ಹೈನುಗಾರರಿಗೆ ಈ ಬಾರಿಯ ತೀವ್ರ ಬರ ಹಾಗೂ ಏರಿದ ಪಶು ಆಹಾರದ ದರ ಕಂಗೆಡುವಂತೆ ಮಾಡಿದೆ. ಮೇವಿಗೆ ಮೀಸಲಿಟ್ಟ ಅನುದಾನವನ್ನು ಪಶು ಆಹಾರಕ್ಕೆ ಸಹಾಯಧನ ನೀಡಲು ಬಳಕೆ ಮಾಡಿಕೊಳ್ಳಲು ಆಗ್ರಹ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಭಾಗದಲ್ಲಿ ಹೆಚ್ಚಿನ ಜಾನುವಾರುಗಳಿದ್ದು, ಹೈನೋದ್ಯಮ ಹಲವರ ಜೀವನಾಧಾರವಾಗಿದೆ. 13 ಸಾವಿರ ಮಿಶ್ರ ತಳಿಯ ಜಾನುವಾರುಗಳಿವೆ. ಇಡೀ ಜಿಲ್ಲೆಯಿಂದ 37 ಸಾವಿರ ಲೀಟರ್ ನಿತ್ಯ ಹಾಲು ಸಂಗ್ರಹವಾಗುತ್ತಿದೆ. ಬಹುತೇಕ ಹೈನುಗಾರರು ಪಶು ಆಹಾರವನ್ನು ಅವಲಂಬಿಸಿ ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ.

ಆದರೆ, ಈಚೆಗೆ ಪಶು ಆಹಾರ ದರ ಏರಿಕೆಯಾಗಿರುವುದು ಹೈನುಗಾರರನ್ನು ಚಿಂತೆಗೆ ದೂಡಿದೆ. ಕೆಎಂಎಫ್ ನಂದಿನಿ ಗೋಲ್ಡ್ 50 ಕೆಜಿ ಚೀಲಕ್ಕೆ ₹1273 ರಿಂದ ₹1299, ನಂದಿನಿ ಬೈಪಾಸ್ ₹1399 ರಿಂದ ₹1425ಕ್ಕೆ ಏರಿಕೆಯಾಗಿದೆ.

‘ಬರದ ಕಾರಣಕ್ಕೆ ಹಾಲಿನ ಇಳುವರಿ ಕುಂಠಿತವಾಗಿದೆ. ಹಾಲಿನ ಗುಣಮಟ್ಟ ಹಾಗೂ ಕೊಬ್ಬಿನ ಪ್ರಮಾಣದಲ್ಲೂ ಇಳಿಕೆಯಾಗುತ್ತಿದೆ. ಆದರೆ ಹೈನುಗಾರರು ನಂದಿನಿ ಪಶು ಆಹಾರದ ಜತೆಗೆ ವಿವಿಧ ರೀತಿಯ ಪಶು ಆಹಾರ ಬಳಸಿಕೊಂಡು ಗುಣಮಟ್ಟ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಪಶು ಆಹಾರದ ದಿಢೀರ್ ದರ ಏರಿಕೆಯು ಹೈನುಗಾರರ ಆದಾಯಕ್ಕೆ ಮತ್ತಷ್ಟು ಹೊಡೆತ ನೀಡುತ್ತಿದೆ’ ಎನ್ನುತ್ತಾರೆ ಹಾಲು ಉತ್ಪಾದಕ ಸಹಕಾರ ಸಂಘವೊಂದರ ಪ್ರಮುಖರು.

‘ರಾಜ್ಯ ಸರ್ಕಾರವು ಜಿಲ್ಲಾಡಳಿತಕ್ಕೆ ಬರದ ಸಂದರ್ಭದಲ್ಲಿ ಮೇವಿನ ಸಲುವಾಗಿ ವಿಶೇಷ ಅನುದಾನ ಮೀಸಲಿಟ್ಟಿದೆ. ಇದು ಸಾಮಾನ್ಯ ಹೈನುಗಾರರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಉತ್ತಮ ಹಾಲು ಪಡೆಯಲು ಪಶು ಆಹಾರ ಬಳಕೆ ಅನಿವಾರ್ಯ. ಜಿಲ್ಲಾಡಳಿತಕ್ಕೆ ಹಣ ನೀಡುವ ಬದಲು ಹೈನುಗಾರರಿಗೆ ಪಶು ಆಹಾರದ ಮೇಲೆ ಸಹಾಯಧನ ನೀಡಿದರೆ ಹೈನುಗಾರರಿಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಹೈನೋದ್ಯಮಿ ರವೀಂದ್ರ ಹೆಗಡೆ ಹೇಳುತ್ತಾರೆ.

ಜಿಲ್ಲೆಯಲ್ಲಿ ಮಾಸಿಕ 500 ಟನ್ ಕೆಎಂಎಫ್ ಪಶು ಆಹಾರ 600 ಟನ್ ಇತರ ಕಂಪನಿಗಳ ಪಶು ಆಹಾರ ಖರೀದಿಯಿದೆ. ಇದರ ಜತೆ ಪ್ರತಿ ಕೆಜಿಗೆ ₹8ರ ದರದಲ್ಲಿ 140 ಟನ್ ರಸಮೇವು ಮಾರಾಟವಾಗುತ್ತಿದೆ. ಹೀಗಾಗಿ ಸರ್ಕಾರವು ಹುಲ್ಲು ಹಾಗೂ ಮೇವಿನ ಸಲುವಾಗಿ ಜಿಲ್ಲಾಡಳಿತದಲ್ಲಿ ಮೀಸಲಿಡುವ ಹಣವನ್ನು ನಂದಿನಿ ಪಶು ಆಹಾರದ ಮೇಲಿನ ಸಹಾಯಧನಕ್ಕೆ ನೀಡಲು ತಕ್ಷಣ ಕ್ರಮವಹಿಸಬೇಕು ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಧಾಮುಲ್ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT