ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಿನ ಕೊರತೆ: ಇಳಿಕೆಯಾದ ಸಸಿ ನಾಟಿ ಗುರಿ

ಗಿಡ ಬೆಳೆಸಲು ಅರಣ್ಯ ಇಲಾಖೆ ಹಿಂದೇಟು
Published 13 ಮೇ 2024, 4:32 IST
Last Updated 13 ಮೇ 2024, 4:32 IST
ಅಕ್ಷರ ಗಾತ್ರ

ಶಿರಸಿ: ಬರಗಾಲ ಹಾಗೂ ನೀರಿನ ಕೊರತೆ ಕಾರಣಕ್ಕೆ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸುವ ಗಿಡಗಳ ಪ್ರಮಾಣದಲ್ಲಿ ತೀವ್ರ ಇಳಿಕೆಯಾಗಿದೆ. ಕಳೆದ ವರ್ಷಗಳಲ್ಲಿ ಬೆಳೆಸಿದ್ದ ಗಿಡಗಳ ಸಂಖ್ಯೆಯ ಅರ್ಧಕ್ಕಿಂತ ಕಡಿಮೆ ಗಿಡಗಳನ್ನು ಮಾತ್ರ ಬೆಳೆಸಲಾಗುತ್ತಿದೆ.

ಶಿರಸಿ ಅರಣ್ಯ ವಿಭಾಗವು ಶಿರಸಿ ಹಾಗೂ ಸಿದ್ದಾಪುರ ತಾಲ್ಲೂಕುಗಳನ್ನು ಒಳಗೊಂಡಿದ್ದು, 6 ವಲಯಗಳನ್ನು ಹೊಂದಿದೆ. ಒಟ್ಟು 1,71,828 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ವಿಭಾಗದ ವಿವಿಧ ವಲಯಗಳಲ್ಲಿ ಒಟ್ಟು 10 ಸಸ್ಯಪಾಲನಾ ಕ್ಷೇತ್ರಗಳಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ 30ರಷ್ಟು ಗಿಡಗಳನ್ನು ಮಾತ್ರ ಬೆಳೆಸಲಾಗಿದೆ.

‘2022-23ನೇ ಸಾಲಿನಲ್ಲಿ ಇಲಾಖೆ ಬಳಕೆಗೆ 29,80,574 ಸಸಿಗಳನ್ನು ಮತ್ತು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳಿಗೆ ವಿತರಿಸಲು 45,100 ಸಸಿಗಳನ್ನು ಬೆಳೆಸಲಾಗಿತ್ತು. ಮಾವು, ಹಲಸು,ನೇರಳೆ, ವಾಟೆ, ಉಪ್ಪಗೆ, ಮುರುಗಲು, ದಿಮ್ಮಿ ಆಧಾರಿತ ಸಸಿಗಳಾದ ಸಾಗವಾನಿ, ಸೀಸಂ, ಮತ್ತಿ, ನಂದಿ, ಕಿಂದಳ ಜಾತಿಯ ಸಸಿಗಳು ಹಾಗೂ ಅಳಿವಿನಂಚಿನಲ್ಲಿರುವ ಸಸ್ಯಗಳಾದ ಸರಾಕಾ, ಅಶೋಕಾ, ದೇವದಾರಾ ಮತ್ತಿತರ ಸಸಿಗಳನ್ನು ಬೆಳೆಸಲಾಗಿತ್ತು. ಆದರೆ ಈ ವರ್ಷ ಅಂದಾಜು 10 ಲಕ್ಷ ಗಿಡಗಳನ್ನು ಮಾತ್ರ ಬೆಳೆಸಲಾಗಿದೆ’ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ನದಿ, ಹೊಳೆಗಳ ಪಕ್ಕದ ಅರಣ್ಯ ಇಲಾಖೆ ನರ್ಸರಿಗಳಿಗೆ ಆಯಾ ಭಾಗದ ನೈಸರ್ಗಿಕ ನೀರು ಲಭ್ಯವಿಲ್ಲದಂತಾಗಿದೆ. ಹೀಗಾಗಿ ನರ್ಸರಿಯಲ್ಲಿ ತುರ್ತು ಬಳಕೆಗೆ ಪೂರಕವಾಗಿರುವ ಕೊಳವೆಬಾವಿಗಳ ನೀರನ್ನು ಬಳಸಿಕೊಂಡು ಸಸ್ಯಗಳ ಪೋಷಣೆ ಮಾಡಲಾಗುತ್ತಿದೆ. ನೀರಿಲ್ಲದ ಪರಿಣಾಮ ಈಗಾಗಲೆ ಬೆಳೆಸಿರುವ ಗಿಡಗಳು ಬಾಡುತ್ತಿದ್ದು, ಬಿಸಿಲಿನಿಂದ ರಕ್ಷಣೆಗೆ ನೆರಳಿನ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಸ್ಯಪಾಲನಾ ಕೇಂದ್ರಗಳಲ್ಲಿ ಅಕ್ಟೋಬರ್‌ನಿಂದಲೇ ಅರಣ್ಯ ಇಲಾಖೆ ಸಸಿ ಬೆಳೆಸಲು ಪ್ರಾರಂಭಿಸಿತ್ತು. ಬಿಸಿಲ ತಾಪ ಹೆಚ್ಚಿದೆ. ಮಳೆ ಇಲ್ಲದ ಕಾರಣ ವಾತಾವರಣದಲ್ಲಿ ತೇವಾಂಶ ಕೂಡ ಇಲ್ಲ. ಹೀಗಾಗಿ ನರ್ಸರಿ ಗಿಡಗಳ ರಕ್ಷಣೆಗೆ ಶೇಡ್ ನೆಟ್ ಕಟ್ಟಲಾಗಿದೆ. ಇದರಿಂದ ಗಿಡಗಳು ಒಣಗುವುದು ಕಡಿಮೆಯಾಗಿದೆ’ ಎಂದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ 25-30 ಮಾತ್ರ ಗಿಡಗಳನ್ನು ಬೆಳೆಸಲಾಗಿದೆ

-ಉಷಾ ಕಬ್ಬೇರ್ ಹುಲೇಕಲ್ ವಲಯದ ಆರ್.ಎಫ್.ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT