ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಪಂಡಿತ ಗ್ರಂಥಾಲಯ ಸ್ಥಳಾಂತರಕ್ಕೆ ದೊರೆಯದ ಅನುದಾನ

27 ಸಾವಿರ ಅಮೂಲ್ಯ ಪುಸ್ತಕಗಳಿರುವ ಪಂಡಿತ ಗ್ರಂಥಾಲಯ
Published 7 ಜುಲೈ 2024, 6:10 IST
Last Updated 7 ಜುಲೈ 2024, 6:10 IST
ಅಕ್ಷರ ಗಾತ್ರ

ಶಿರಸಿ: ಶತಮಾನಗಳಿಂದ ಓದುಗರ ಜ್ಞಾನ ದಾಹ ತಣಿಸುತ್ತಿರುವ ನಗರದ ಪಂಡಿತ ಸಾರ್ವಜನಿಕ ಗ್ರಂಥಾಲಯ ಸ್ಥಳಾಂತರ ಕಾರ್ಯವು ಅನುದಾನ ಬಿಡುಗಡೆಯಾಗದ ಕಾರಣಕ್ಕೆ ವಿಳಂಬವಾಗುತ್ತಿದೆ.

ಶತಮಾನದಿಂದ ಓದುಗರಿಗೆ ಆಸರೆಯಾಗಿದ್ದ ಪಂಡಿತ ಸಾರ್ವಜನಿಕ ಗ್ರಂಥಾಲಯ 27 ಸಾವಿರಕ್ಕೂ ಹೆಚ್ಚಿನ ಅಮೂಲ್ಯ ಪುಸ್ತಕಗಳನ್ನು ಹೊಂದಿದ್ದು, ಈಗಲೂ ತನ್ನ ಸೇವೆ ಸಲ್ಲಿಸುತ್ತಿದೆ. ನಿತ್ಯ ಸಂಜೆ ಐದು ಗಂಟೆಯಿಂದ ಗ್ರಂಥಾಲಯದಲ್ಲಿ ಓದುಗರು ಅಧ್ಯಯನ ಮಾಡುತ್ತಾರೆ. ಆದರೆ ಈಗ ಸಮೀಪದ ಬಸ್ ನಿಲ್ದಾಣ ವಿಸ್ತರಣೆ ವಿಷಯ ಗ್ರಂಥಾಲಯದ ಅಸ್ತಿತ್ವಕ್ಕೆ ಧಕ್ಕೆ ನೀಡುತ್ತಿದೆ. 

ಗ್ರಂಥಾಲಯದ ಹಿಂಭಾಗದಲ್ಲಿಯೇ ಬಸ್ ನಿಲ್ದಾಣವಿದ್ದು, ಹೊಸದಾಗಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೆಚ್ಚಿನ ಬಸ್‍ಗಳ ಓಡಾಟವಿರುವ ಕಾರಣಕ್ಕೆ ಬಸ್ ನಿಲ್ದಾಣ ಪ್ರದೇಶ ವಿಸ್ತರಿಸುವ ಪ್ರಸ್ತಾಪವಿದೆ. ಒಂದೊಮ್ಮೆ ವಿಸ್ತರಣೆಯಾದರೆ ಪುರಾತನ ಗ್ರಂಥಾಲಯ ತೆರವು ಅನಿವಾರ್ಯವಾಗಲಿದೆ. ಕಟ್ಟಡವೂ ಬ್ರಿಟಿಷ್‌ ಕಾಲದ್ದಾಗಿದ್ದು, ಕೆಲವೆಡೆ ಶಿಥಿಲವಾಗಿದೆ. ಅಮೂಲ್ಯ ಪುಸ್ತಕಗಳ ರಕ್ಷಣೆಯೂ ಸವಾಲಿನ ವಿಷಯವಾಗಿದೆ.

‘ಎರಡು ವರ್ಷಗಳ ಹಿಂದೆ ಗ್ರಂಥಾಲಯವನ್ನು ಬೇರೆಡೆ ಸ್ಥಳಾಂತರಿಸಲು ಗ್ರಂಥಾಲಯ ಸಮಿತಿ ನಿರ್ಧರಿಸಿತ್ತು. ನಗರ ಪ್ರದೇಶದಲ್ಲಿಯೇ ಬೇರೆಡೆ ಜಾಗ ದಾನಕ್ಕೆ ಪಡೆದು ಅಲ್ಲಿ ಹೊಸ ಕಟ್ಟಡ ನಿರ್ಮಿಸಲು ₹2.15 ಕೋಟಿ ಬಿಡುಗಡೆ ಮಾಡುವಂತೆ ಆಗಿನ ಬಿಜೆಪಿ ಸರ್ಕಾರಕ್ಕೆ ಪ್ರಸ್ತಾವ ಕೂಡ ಸಲ್ಲಿಸಲಾಗಿತ್ತು‌. ಆದರೆ ಆಗ ಅನುದಾನ ಬಿಡುಗಡೆಯಾಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು ಒಂದು ವರ್ಷ ಕಳೆದರೂ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಬಸ್ ನಿಲ್ದಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದೀಗ ಗ್ರಂಥಾಲಯ ತೆರವು ಕಾರ್ಯ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ’ ಎಂದು ಗ್ರಂಥಾಲಯ ಸಮಿತಿಯ ಪ್ರಮುಖರೊಬ್ಬರು ಹೇಳಿದರು.

‘ಗ್ರಂಥಾಲಯದಲ್ಲಿ ಶತಮಾನದ ದಾಖಲೆಗಳಿರುವ ನೂರಾರು ಪುಸ್ತಕಗಳು ಇರುವುದು ವಿಶೇಷವಾಗಿದೆ. ಇವುಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಅನುಕೂಲ. ಈ ಗ್ರಂಥಾಲಯದ ಜತೆ ಹೈಟೆಕ್ ಸ್ಪರ್ಷವುಳ್ಳ ಗ್ರಂಥಾಲಯ ಸ್ಥಾಪಿಸಲು ಸಮಿತಿ ನಿರ್ಧರಿಸಿದ್ದು, ಪೂರಕವಾಗಿ ಸರ್ಕಾರ ಅನುದಾನ ನೀಡಿದರೆ ಈ ಕಾರ್ಯ ಸುಲಭವಾಗಲಿದೆ. ಗ್ರಂಥಾಲಯ ಖಾಸಗಿಯಾಗಿದ್ದು, ಸರ್ಕಾರದ ಅನುದಾನ ನೇರವಾಗಿ ನೀಡಲು ಬರುವುದಿಲ್ಲ. ಹೀಗಾಗಿ ಮನವಿ ನೀಡಲಾಗಿದೆ. ಗ್ರಂಥಾಲಯ ಜಾಗ ಸುಮಾರು 3 ಗುಂಟೆಯಷ್ಟಿದ್ದು, ಪರಿಹಾರ ರೂಪದಲ್ಲಿ ಅನುದಾನ ನೀಡಿದರೂ ಅನುಕೂಲ ಆಗುತ್ತದೆ. ಈ ಕುರಿತು ಸ್ಥಳೀಯ ಶಾಸಕ ಭೀಮಣ್ಣ ಅವರ ಸಹಕಾರ ಪಡೆಯಲಾಗುವುದು’ ಎಂದೂ ಹೇಳಿದರು.

ಜ್ಞಾನ ಭಂಡಾರವಾಗಿರುವ ಪಂಡಿತ ಗ್ರಂಥಾಲಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೆ ಇಲ್ಲಿರುವ ಅಮೂಲ್ಯ ಪುಸ್ತಕಗಳ ರಕ್ಷಣೆ ಸಾಧ್ಯ. ತಕ್ಷಣ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.
ವೆಂಕಟಾಚಲ ಹೆಗಡೆ ಓದುಗ ಸದಸ್ಯ
ಈಗಾಗಲೇ ದಾನಿಗಳೊಬ್ಬರು ಸ್ಥಳ ನೀಡಲು ಒಪ್ಪಿಗೆ ಸೂಚಿಸಿದ್ದು ಅನುದಾನ ಬಿಡುಗಡೆಯ ನಂತರ ನೂತನ ಕಟ್ಟಡ ನಿರ್ಮಿಸಲು ಮುಂದಾಗಲಾಗುವುದು
ಹರೀಶ್ ಪಂಡಿತ್ ಪಂಡಿತ್ ಗ್ರಂಥಾಲಯ ಸಮಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT