ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿಯ ಜಾತ್ರೆಗೆ ‘ಶಕ್ತಿ’ಯ ಸಾಥ್

ಭಕ್ತರಿಂದ ತುಂಬಿ ತುಳುಕುತ್ತಿರುವ ಸಾರಿಗೆ ಬಸ್‍ಗಳು
Published 22 ಮಾರ್ಚ್ 2024, 5:50 IST
Last Updated 22 ಮಾರ್ಚ್ 2024, 5:50 IST
ಅಕ್ಷರ ಗಾತ್ರ

ಶಿರಸಿ: ರಾಜ್ಯ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆಯು ಸರ್ಕಾರದ ಶಕ್ತಿ ಯೋಜನೆಯ ಪ್ರಯೋಜನ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದೆ. ಆರಂಭದ ದಿನವೇ ಅಧಿಕ ಸಂಖ್ಯೆ ಮಹಿಳಾ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. 

ಮಹಿಳೆಯರಿಗೆ ರಾಜ್ಯ ವ್ಯಾಪಿ ಬಸ್‍ಗಳಲ್ಲಿ ಸಂಚರಿಸಲು ಶಕ್ತಿ ಯೋಜನೆಯಡಿ ಅವಕಾಶ ನೀಡಲಾಗಿದೆ. ಇದರ ಪ್ರಯೋಜನ ಪಡೆಯುತ್ತಿರುವ ಮಹಿಳೆಯರು ತಂಡೋಪತಂಡವಾಗಿ ಶಿರಸಿಯ ಜಾತ್ರೆಗೆ ಆಗಮಿಸುತ್ತಿದ್ದಾರೆ. ಬೆಳಗಾವಿ, ಹಾವೇರಿ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳಾ ಭಕ್ತರು ಜಾತ್ರಾ ಸೇವೆಯ ಆರಂಭದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಇಷ್ಟ ದೇವಿಗೆ ಸೇವೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ. 

‘ಕಳೆದ ಜಾತ್ರೆಯಲ್ಲಿ ಹಣ್ಣು ಕಾಯಿ ಸೇವೆ ಆರಂಭದ ದಿನ ಅಂದಾಜು 1 ಲಕ್ಷ, ಜಾತ್ರೆಯ ಮುಕ್ತಾಯದೊಳಗೆ 20 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಈ ವರ್ಷ ಮೊದಲ ದಿನವೇ ಒಂದೂವರೆ ಲಕ್ಷ ಮಿಕ್ಕಿ ಭಕ್ತರು ಜಾತ್ರೆಗೆ ಬಂದಿದ್ದು, ಇದರಲ್ಲಿ ಶೇ.70ರಷ್ಟು ಮಹಿಳೆಯರು ಪಾಲ್ಗೊಂಡಿರುವುದು ವಿಶೇಷವಾಗಿದೆ. ಮಹಿಳಾ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ‘ ಎಂಬುದು ದೇವಾಲಯ ಧರ್ಮದರ್ಶಿ ಒಬ್ಬರ ಮಾತಾಗಿದೆ.

‘ಬಹುವರ್ಷದಿಂದ ಕುಟುಂಬ ಸಹಿತ ಮಾರಿಕಾಂಬಾ ದರ್ಶನ ಪಡೆಯಬೇಕೆಂಬ ಆಸೆಯಿತ್ತು. ಈ ಬಾರಿ ಶಕ್ತಿ ಯೋಜನೆಯ ಸಹಾಯದಿಂದ ಕುಟುಂಬದ 15ಕ್ಕೂ ಹೆಚ್ಚು ಸದಸ್ಯರು, ಗ್ರಾಮದ ಬಹುತೇಕ ಮಹಿಳೆಯರು ಜತೆಗೂಡಿ ಜಾತ್ರೆಗೆ ಬಂದು ಸೇವೆ ಸಲ್ಲಿಸಿದ್ದೇವೆ‘ ಎಂದು ಪುತ್ತೂರಿನ ಸುಷ್ಮಾ ಬಿಲ್ಲವ ಹೇಳಿದರು. 

‘ಜಾತ್ರೆ ಅಂಗವಾಗಿ ರಾಜ್ಯದ ವಿವಿಧ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ 200 ಬಸ್ ಸಂಚರಿಸುತ್ತಿದೆ. ಬಹುತೇಕ ಬಸ್‍ಗಳಲ್ಲಿ ನಿರೀಕ್ಷೆ ಮೀರಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಶಕ್ತಿ ಯೋಜನೆಯ ಪರಿಣಾಮ ಈ ಬಾರಿ ಮೊದಲ ದಿನವೇ 50 ಸಾವಿರಕ್ಕೂ ಹೆಚ್ಚಿನ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್ ಮೂಲಕ ಜಾತ್ರೆಗೆ ಆಗಮಿಸಿದ್ದಾರೆ. ಹೆಚ್ಚಿನ ಪ್ರಯಾಣಿಕರ ಆಕರ್ಷಿಸಲು ಬಸ್ ನಿಲ್ದಾಣದಲ್ಲಿ ಬಸ್ ಜತೆ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿದೆ’ ಎಂಬುದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಮಾಹಿತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT