ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಸಮಸ್ಯೆಗಳ ಉಡುಗೆ ಕಳಚುವ ‘ಮಾತಂಗಿ ಚಪ್ಪರ’

ಲಕ್ಕಿ, ಬೇವಿನ ಸೊಪ್ಪಿನ ಉಡುಗೆ ತೊಟ್ಟು ಹರಕೆ ಅರ್ಪಿಸುವ ಭಕ್ತರು
Published 24 ಮಾರ್ಚ್ 2024, 6:22 IST
Last Updated 24 ಮಾರ್ಚ್ 2024, 6:22 IST
ಅಕ್ಷರ ಗಾತ್ರ

ಶಿರಸಿ: ಎಂಟುದಿನಗಳ ಕಾಲ ಇಲ್ಲಿನ ಬಿಡ್ಕಿಬೈಲಿನಲ್ಲಿರುವ ಜಾತ್ರೆ ಗದ್ದುಗೆಯಿಂದ ತೆರಳುವ ವೇಳೆ ಮಾರಿಕಾಂಬೆ ದೇವಿಯ ಉಗ್ರ ದೃಷ್ಟಿ ತಾಗಿ ‘ಮಾತಂಗಿ ಚಪ್ಪರ’ ಬೆಂಕಿಗಾಹುತಿ ಆಗುತ್ತದೆ. ಆ ಮೂಲಕ ರಾಕ್ಷಸತ್ವ ಅಂತ್ಯದ ಪ್ರತೀಕವಾಗಿ ಚಪ್ಪರ ನಿಲ್ಲುತ್ತದೆ. ಈ ಜನಪದೀಯ ಆಚರಣೆ ಕೇವಲ ಭಕ್ತಿಯ ಆಯಾಮಕ್ಕಷ್ಟೇ ಸೀಮಿತವಾಗದೇ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯನ್ನೂ ಪ್ರತಿಬಿಂಬಿಸುತ್ತದೆ. 

ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಪ್ರಾರಂಭವಾದ 8 ದಿನಗಳ ನಂತರ ಜಾತ್ರಾ ವಿಸರ್ಜನಾ ವಿಧಿವಿಧಾನಗಳು ನೆರವೇರುತ್ತವೆ. ಜಾತ್ರೆಯ ಕೊನೆಯ ವಿಧಾನಗಳಲ್ಲಿ ಮಾತಂಗಿ ಚಪ್ಪರ ಸುಡುವುದು ಒಂದಾಗಿದೆ. ದೇವಿ ಗದ್ದುಗೆಯಿಂದ ಮೆರವಣಿಗೆಯಲ್ಲಿ ಹೋಗುವಾಗ ಮಹಿಷಾಸುರನ ಸಂಹಾರ ಸಂಕೇತವಾಗಿ ಮಾತಂಗಿ ಚಪ್ಪರ ಸುಡುತ್ತಾರೆ‌. ಜನಪದೀಯದ ಪ್ರಕಾರ ಇದು ದುಷ್ಟತನ ಸಂಹಾರದ ಪ್ರತೀಕವಾಗಿದೆ. ವಿಶೇಷವೆಂಬಂತೆ ಈ ಚಪ್ಪರ ಸುಟ್ಟರೆ, ತಮ್ಮ ಸಮಸ್ಯೆಗಳಿಗೂ ಮುಕ್ತಿ ಸಿಕ್ಕಂತೆ ಎಂಬುದು ಭಕ್ತರ ನಂಬಿಕೆ.

ಜಾತ್ರೆ ನಡೆಯುವ ದಿನಗಳಲ್ಲಿ ಜಾತ್ರೆ ಗದ್ದುಗೆ ಅನತಿ ದೂರದಲ್ಲಿ ತೆಂಗಿನ ಎಲೆಗಳ ಚಪ್ಪರ ಕಾಣುತ್ತದೆ. ಸುತ್ತಮುತ್ತ ಲಕ್ಕಿ, ಬೇವಿನ ಎಲೆಗಳ ರಾಶಿಯೇ ಬಿದ್ದಿರುತ್ತದೆ. ಜಾತ್ರೆಯ ಎಂಟು ದಿನಗಳ ಅವಧಿಯಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಈ ಚಪ್ಪರಕ್ಕೆ ಬಂದು ಹರಕೆ ಸಲ್ಲಿಸುತ್ತಾರೆ. ಹೀಗೆ ಹರಕೆ ಸಲ್ಲಿಸಿದವರು ತರುವ ವಸ್ತುಗಳೇ ಈ ಎಲೆಗಳ ರಾಶಿ. ಇದು ಮಾತಂಗಿ ಚಪ್ಪರದ ಸೌಂದರ್ಯವೂ ಹೌದು.

‘ವಿವಿಧ ರೋಗ ರುಜಿನದಿಂದ ಸಮಸ್ಯೆ ಅನುಭವಿಸುತ್ತಿರುವವರು, ಜೀವನದಲ್ಲಿ ವಿವಿಧ ಸಮಸ್ಯೆ ಹೊತ್ತ ಭಕ್ತರು, ಜಾತ್ರೆ ಸಂದರ್ಭದಲ್ಲಿ ದೇವಿಗೆ ಲಕ್ಕಿ ಹಾಗೂ ಬೇವಿನ ಎಲೆ ಉಡುಗೆ ಸೇವೆ ಸಲ್ಲಿಸುವುದಾಗಿ ಹರಕೆ ಹೇಳಿಕೊಳ್ಳುತ್ತಾರೆ. ತಮ್ಮ ಸಮಸ್ಯೆ ನೀಗಿದ ಬಳಿಕ ಹರಕೆ ಒಪ್ಪಿಸುತ್ತಾರೆ. ಸಮೀಪದ ಮರ್ಕಿ ದುರ್ಗಿ ದೇವಾಲಯದ ಬಳಿಯಿಂದ ಬೇವಿನುಡಿಗೆ, ಲಕ್ಕಿ ಎಲೆ ಉಡುಗೆ ತೊಟ್ಟು ವಾದ್ಯಮೇಳಗಳ ಜತೆ ಉದ್ದಂಡ ನಮಸ್ಕಾರ ಹಾಕುತ್ತ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾದ ಮಾರಿಕಾಂಬೆಗೆ ಪ್ರದಕ್ಷಿಣೆ ಹಾಕಿ ಮಾತಂಗಿ ಚಪ್ಪರದ ಬಳಿ ಬಂದು ಉಡುಗೆ ಕಳಚುತ್ತಾರೆ. ತಮ್ಮ ಸಮಸ್ಯೆಯನ್ನೂ ಇಲ್ಲಿಯೇ ಬಿಟ್ಟು ಹೋದಂತೆ ಭಕ್ತರು ಸಂಭ್ರಮಿಸುತ್ತಾರೆ’ ಎಂದು ಮಾತಂಗಿ ಚಪ್ಪರದಲ್ಲಿ ಕಾರ್ಯನಿರ್ವಹಿಸುವವರೊಬ್ಬರು ಹೇಳಿದರು.

ಮಾತಂಗಿ ಚಪ್ಪರದೊಳಗಿರುವ ದೈವೀ ಸ್ವರೂಪ ಪಡ್ಲಿಗಿಗಳು
ಮಾತಂಗಿ ಚಪ್ಪರದೊಳಗಿರುವ ದೈವೀ ಸ್ವರೂಪ ಪಡ್ಲಿಗಿಗಳು

ಮಾತಂಗಿ ಚಪ್ಪರಕ್ಕೆ ಜಾತ್ರೆ ಸಂದರ್ಭದಲ್ಲಿ ವಿಶೇಷ ಮಹತ್ವವಿದೆ. ಕಷ್ಟಗಳನ್ನು ದೂರ ಮಾಡುವಂತೆ ದೇವಿಯಲ್ಲಿ ಹರಕೆ ಹೊತ್ತವರು ಇಲ್ಲಿಗೆ ಬಂದು ಹರಕೆ ಅರ್ಪಿಸುತ್ತಾರೆ

-ಯಲ್ಲಮ್ಮ ಚಲವಾದಿ ಮಾತಂಗಿ ಚಪ್ಪರದ ಪ್ರಮುಖರು

ನಿರಂತರ ಉರಿಯುವ ದೀಪ ‘ಮಾತಂಗಿ ಚಪ್ಪರದಲ್ಲಿ ಪಡ್ಲಿಗಿ ಹಾಗೂ ಮೇಟಿ ದೀಪ ಇರುತ್ತದೆ. ಈ ದೀಪ ಜಾತ್ರೆ ಮುಗಿರುವವರೆಗೂ ನಿರಂತರ ಉರಿಯುತ್ತಿರಬೇಕು. ನಿತ್ಯವೂ ಈ ದೀಪಕ್ಕೆ ತೈಲ ಹಾಕಿ ಆರದಂತೆ ಎಚ್ಚರಿಕೆ ವಹಿಸಬೇಕು. ಮೇಟಿಯವರು ಮಾತಂಗಿ ಚಪ್ಪರದಲ್ಲಿ ಈ ದೀಪ ಇಟ್ಟು ಅದು ಆರದಂತೆ ಕಾಯುವ ಕೆಲಸ ಮಾಡುತ್ತಾರೆ. ಹೀಗಾಗಿ ಒಂಭತ್ತು ದಿನಗಳ ಕಾಲ ಈ ಚಪ್ಪರದ ಉಸ್ತುವಾರಿ ಹೊತ್ತವರು ಇಲ್ಲೇ ವಾಸ ಮಾಡಬೇಕು’ ಎನ್ನುತ್ತಾರೆ ಚಪ್ಪರದ ಮುಖ್ಯಸ್ಥೆ ಶಾಂತಮ್ಮ ಮಾದಾರ. ‘ಮಾತಂಗ ಚಪ್ಪರದಲ್ಲಿ ದೈವಾರಾಧನೆಯು ಕೆಲವು ಸಮುದಾಯಗಳಲ್ಲಿ ಸೇರಿಹೋಗಿದೆ. ಮಾತಂಗಿ ಒಕ್ಕಲುಗಳಾದ ಮಾದಿಗ ಅಸಾದಿ ಮುಂತಾದ ಸಮುದಾಯಗಳು ಇದರ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT