ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬ ಧ್ವನಿ ಬೇಕು: ಸಂಸದ ಅನಂತಕುಮಾರ ಹೆಗಡೆ

ಶಿರಸಿಯಲ್ಲಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ
Published 21 ಫೆಬ್ರುವರಿ 2024, 12:51 IST
Last Updated 21 ಫೆಬ್ರುವರಿ 2024, 12:51 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ ಜಿಲ್ಲೆ): ‘ಹಿಂದೂಗಳು ಕಟ್ಟಿದ ತೆರಿಗೆ ರಾಜ್ಯ ಸರ್ಕಾರದಿಂದ ಹಗಲು ದರೋಡೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಎಂಬ ಧ್ವನಿ ಏಳಬೇಕಿದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. 

ನಗರದ ದೀನದಯಾಳ ಸಭಾಂಗಣದಲ್ಲಿ ಬುಧವಾರ ನಗರ ಮಂಡಳ ಅಧ್ಯಕ್ಷರ ಪದಗ್ರಹಣ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತರು ಮಾತ್ರ ಈ ರಾಜ್ಯದಲ್ಲಿ ವಾಸವಿದ್ದಾರೆ ಎಂಬಂತೆ ಸಿದ್ದರಾಮಯ್ಯ ಬಜೆಟ್ ಮಂಡಿಸಿದ್ದಾರೆ. ಹಾಗಾದರೆ ಉಳಿದವರು ಯಾರು ಎಂಬ ಪ್ರಶ್ನೆ ಬರುತ್ತದೆ. ರಾಜ್ಯದಲ್ಲಿ ಬಹುಸಂಖ್ಯಾತರು ನೀಡುವ ತೆರಿಗೆ, ಅಲ್ಪಸಂಖ್ಯಾತರು ನೀಡುವ ತೆರಿಗೆ ಪ್ರಮಾಣ ಹೋಲಿಕೆ ಮಾಡಿ ನೋಡಬೇಕು’ ಎಂದರು.

‘ಶೇ 90ರಷ್ಟು ಉದ್ದಿಮೆ, ಕೈಗಾರಿಕೆ, ಆರ್ಥಿಕ ಸಂಸ್ಥೆ ನಡೆಸುವವರು ಹಿಂದೂಗಳು. ಆದರೆ, ನಾವು ತುಂಬುವ ತೆರಿಗೆ ಹಣ ನಮ್ಮತನ ಒಪ್ಪದ, ದೇಶದ ಕಾನೂನು ಪಾಲಿಸದವರಿಗೆ ಕೊಡಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್ (ಐಎಸ್‌) ಆಗದಿದ್ದರೆ ಅಲ್ಲಿನ ಸರ್ಕಾರಕ್ಕೆ ತೆರಿಗೆ ನೀಡುವುದು ತಪ್ಪು ಎಂದು ಇಸ್ಲಾಂ ಧರ್ಮ ಗ್ರಂಥದಲ್ಲೇ ಉಲ್ಲೇಖವಿದೆ. ಜಕಾತ್ (ತೆರಿಗೆ) ತಪ್ಪಿಸುವುದು ಮುಸ್ಲಿಮರ ಹಕ್ಕು. ಅವರಂತೆ ಹಿಂದೂಗಳು ಕೂಡ ತೆರಿಗೆ ನೀಡದಂತೆ ನಿರ್ಧರಿಸಿದರೆ ಹೇಗೆ? ಈ ಬಗ್ಗೆ ಮುಂಬರುವ ದಿನಗಳಲ್ಲಿ ಗಟ್ಟಿಯಾದ ಧ್ವನಿ ಏಳಬೇಕು’ ಎಂದರು.

‘ಕೇರಳ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರವಿಲ್ಲ. ಅದೂ ಅಲ್ಲದೇ ಅಲ್ಲಿನ ಸರ್ಕಾರ ಬಿಜೆಪಿ ವಿರೋಧಿ ಆಗಿವೆ. ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ, ಸಮಸ್ಯೆಯಾಗಿದೆ ಎಂಬ ದೂರು ಆಯಾ ರಾಜ್ಯಗಳಿಂದ ಬಂದಿಲ್ಲ. ಆದರೆ ಅಲ್ಪಸಂಖ್ಯಾತ ತುಷ್ಠೀಕರಣ ಮಾಡುವಲ್ಲಿ ತಲ್ಲೀನರಾದ ಸಿದ್ದರಾಮಯ್ಯ ಅವರಿಗೆ ಮಾತ್ರ ವೇದನೆ ಯಾಕೆ? ಅತಾರ್ಕಿಕವಾಗಿ ಅರಚಾಡುವುದು ಸಿದ್ದರಾಮಯ್ಯ ಟ್ರೇಡ್ ಮಾರ್ಕ್‘ ಎಂದು ಅವರು ವ್ಯಂಗ್ಯವಾಡಿದರು. 

ಪಕ್ಷದ ಸ್ಥಳೀಯ ಪದಾಧಿಕಾರಿಗಳಾದ ಆನಂದ ಸಾಲೇರ, ರಾಜೇಶ ಶೆಟ್ಟಿ, ಚಂದ್ರು ದೇವಾಡಿಗ, ಗುರುಪ್ರಸಾದ ಹೆಗಡೆ, ರೇಖಾ ಹೆಗಡೆ, ಶರ್ಮಿಳಾ ಮಾದನಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT