ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ನರೇಗಾ: ವೈಯಕ್ತಿಕ ಕಾಮಗಾರಿಗಳಿಗೆ ಸಿಗದ ಅನುಮತಿ

ಚುನಾವಣೇ ನೀತಿ ಸಂಹಿತೆಯಿಂದ ಎದುರಾದ ಸಮಸ್ಯೆ
Published 12 ಏಪ್ರಿಲ್ 2024, 4:57 IST
Last Updated 12 ಏಪ್ರಿಲ್ 2024, 4:57 IST
ಅಕ್ಷರ ಗಾತ್ರ

ಶಿರಸಿ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿ ವೈಯಕ್ತಿಕ ಕಾಮಗಾರಿ ಬೇಡಿಕೆ ನೀಡಿದ್ದ  ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಬರಗಾಲದ ಸಂದರ್ಭದಲ್ಲಿ ಕೃಷಿ ಹೊಂಡ ಸೇರಿದಂತೆ ಜಲಮೂಲ ಅಭಿವೃದ್ಧಿಗೆ ಮುಂದಾಗಿದ್ದವರಿಗೆ ಇದರಿಂದ ಸಮಸ್ಯೆಯಾಗಿದೆ. 

ಪ್ರಸಕ್ತ ವರ್ಷ ತಾಲ್ಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ತೊಂದರೆ ಎದುರಾಗಿದೆ. ಕೃಷಿ, ತೋಟಗಾರಿಕಾ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ. ಅಂತರ್ಜಲ ಕುಸಿತದಿಂದ  ಕೊಳವೆ ಬಾವಿಗಳು ನೀರು ಕಳೆದುಕೊಂಡಿವೆ. ಇಂಥ ಸಂದರ್ಭದಲ್ಲಿ ನರೇಗಾದಡಿ ನೈಸರ್ಗಿಕ ನಿರ್ವಹಣಾ ಉಪಚಾರದ ಬದು ನಿರ್ಮಾಣ, ಗ್ರಾಮೀಣ ಕೆರೆ ಹೂಳೆತ್ತುವ ಕಾಮಗಾರಿ, ಕೃಷಿ ಹೊಂಡ ನಿರ್ಮಾಣ, ಕೊಳವೆ ಬಾವಿ ಮರುಪೂರ್ಣ ಘಟಕ ನಿರ್ಮಿಸಿಕೊಳ್ಳಲು ಉತ್ಸಾಹ ತೋರಿದ್ದ ಕೃಷಿಕರಿಗೆ ಚುನಾವಣೆ ನೀತಿ ಸಂಹಿತೆ ತೊಡಕಾಗಿದೆ. ಇದರಿಂದ ವಿವಿಧ ಬೆಳೆಗಳ ನಾಶದ ಆತಂಕ ಕೂಡ ಹೆಚ್ಚಿದೆ. 

‘ಈಗಾಗಲೇ ನರೇಗಾ ಯೋಜನೆಯಡಿ ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡಿಗೆ ಅಭಿಯಾನದ ಅಂಗವಾಗಿ 2024-25ನೇ ಸಾಲಿನ ಕ್ರಿಯಾಯೋಜನೆ ತಯಾರಿಸಲಾಗಿದೆ. ಜನರು ಈಗಾಗಲೇ ವಿವಿಧ ಕಾಮಗಾರಿಗೆ ಹೆಸರು ನೀಡಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಇರುವ ಕಾರಣ ವೈಯಕ್ತಿಕ ಕಾಮಗಾರಿಗಳಿಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮಂಜೂರಾತಿ ಪಡೆಯುವುದು ಕಷ್ಟ. ಸಮುದಾಯದ ಕಾಮಗಾರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂಬುದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಮಾತಾಗಿದೆ.

‘ಸಾಮಾನ್ಯವಾಗಿ ಜಲಮೂಲಗಳನ್ನು ಅಭಿವೃದ್ಧಿಪಡಿಸುವುದು ಬೇಸಿಗೆಯಲ್ಲೇ ಆಗಿದೆ. ಆದರೆ ಈಗ ಕಾಮಗಾರಿಗೆ ಅನುಮೋದನೆ ಸಿಗುತ್ತಿಲ್ಲ. ನೀತಿ ಸಂಹಿತೆ ತೆರವಾಗುವ ಹೊತ್ತಿಗೆ ಮಳೆಗಾಲ ಆರಂಭವಾಗುವ ಸಾಧ್ಯತೆಯಿದೆ. ಒಂದೊಮ್ಮೆ ಹಾಗಾದರೆ ಮಳೆಗಾಲದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ನಮಗೆ ಬೇಸಿಗೆಯಲ್ಲಿ ನೀರಿನ ಅಗತ್ಯವಿರುತ್ತದೆ ಹೊರತು ಮಳೆಗಾಲದಲ್ಲಿ ಅಲ್ಲ ಎಂಬುದನ್ನು ಅಧಿಕಾರಿಗಳು  ಅರಿಯುವ ಅಗತ್ಯವಿದೆ’ ಎನ್ನುತ್ತಾರೆ ಕಾಮಗಾರಿ ಬೇಡಿಕೆ ಸಲ್ಲಿಸಿದ್ದ ಬನವಾಸಿಯ ಕೃಷಿಕ ಮಲ್ಲಸರ್ಜನ ಗೌಡ. 

ಈಗಾಗಲೇ ತಯಾರಿಸಿರುವ ಕ್ರಿಯಾಯೋಜನೆಗೆ ಕೃಷಿಹೊಂಡ ಕಾಮಗಾರಿ ಸೇರಿಸಲಾಗಿದೆ. ಆದರೆ ಕಾಮಗಾರಿಗೆ ಅನುಮತಿ ಸಿಗುತ್ತಿಲ್ಲ. 

- ಮಂಜುನಾಥ ಭಟ್ ವಾನಳ್ಳಿ- ಕೃಷಿಕ

ಈ ಹಿಂದಿನ ಕಾಮಗಾರಿ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯಿತಿಗಳಿಗೆ ಹೊಸ ಕಾಮಗಾರಿಗಳಿಗೆ ಆದೇಶ ಪತ್ರ ನೀಡಲು ನೀತಿ ಸಂಹಿತೆ ಅಡ್ಡಿಯಾಗಿದೆ. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ.

-ಬಿ.ವೈ.ರಾಮಮೂರ್ತಿ- ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT