ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಸೋಲಾರ್ ರೂಫ್‌ಟಾಪ್ ಅಳವಡಿಕೆಗೆ ಹಿನ್ನಡೆ

Published 24 ಆಗಸ್ಟ್ 2024, 5:12 IST
Last Updated 24 ಆಗಸ್ಟ್ 2024, 5:12 IST
ಅಕ್ಷರ ಗಾತ್ರ

ಶಿರಸಿ: ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಸೋಲಾರ್ ಅಳವಡಿಕೆ ಯೋಜನೆ ಜಾರಿಗೊಂಡು ವರ್ಷಗಳು ಕಳೆದರೂ ತಾಲ್ಲೂಕಿನ ಹಲವು ಪಂಚಾಯಿತಿಗಳಲ್ಲಿ ಇಂದಿಗೂ ಅನುಷ್ಠಾನವಾಗಿಲ್ಲ. ಇದರಿಂದ ವಿದ್ಯುತ್ ಬಿಲ್ ಮೊತ್ತದಲ್ಲಿ ಉಳಿತಾಯ ಮತ್ತು ನಿರಂತರ ವಿದ್ಯುತ್ ಪೂರೈಕೆ ಉದ್ದೇಶಕ್ಕೆ ತಡೆಯಾಗಿದೆ.

ಪಂಚಾಯತ್‌ರಾಜ್ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಿರುವ ವಿದ್ಯುಚ್ಛಕ್ತಿ ಕೊರತೆ ಹೋಗಲಾಡಿಸಲು, ಸಾರ್ವಜನಿಕ ಉದ್ದೇಶಕ್ಕಾಗಿ ನೈಸರ್ಗಿಕವಾಗಿ ಲಭ್ಯವಿರುವ ಸೌರಮೂಲದಿಂದ ವಿದ್ಯುತ್ ಪಡೆಯಲು ಗ್ರಿಡ್ ಇಂಟರ್ಯಾಕ್ಟಿವ್ ಹೈಬ್ರಿಡ್ ಸೋಲಾರ್ ರೂಫ್‌ಟಾಪ್ ಪವರ್ ಪ್ಲ್ಯಾಂಟ್ ಯೋಜನೆ ಜಾರಿಗೊಳಿಸಲಾಗಿತ್ತು. ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 3 ಕಿಲೋ ವ್ಯಾಟ್‌ನಿಂದ ಆರಂಭಿಸಿ, ಗರಿಷ್ಟ ಚಾವಣಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಘಟಕ ನಿರ್ಮಿಸಲು ಸೂಚನೆ ನೀಡಲಾಗಿತ್ತು. ಆದರೆ ತಾಲ್ಲೂಕಿನ 10 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರೀಕ್ಷಿತ ಸ್ಪಂದನೆ ಸಿಗದ ಕಾರಣ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಿದೆ.

ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ 14ನೇ ಹಣಕಾಸು ಯೋಜನೆಯ ಶಿಲ್ಕು ಮತ್ತು 15ನೇ ಹಣಕಾಸು ಅನುದಾನ ಹಾಗೂ ಇನ್ನಿತರ ಅನುದಾನಗಳಡಿ ಕ್ರಿಯಾಯೋಜನೆ ರೂಪಿಸಿ, ಜಿಲ್ಲಾವಾರು ಗುತ್ತಿಗೆದಾರ ಸಂಸ್ಥೆ ಹಂಚಿಕೆ ಮಾಡಿ, ಸರ್ಕಾರದ ಮಾರ್ಗಸೂಚಿ ಅನ್ವಯ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವಂತೆ ಸೂಚಿಸಲಾಗಿತ್ತು. ತಾಲ್ಲೂಕಿನ 32 ಗ್ರಾಮ ಪಂಚಾಯಿತಿಗಳಲ್ಲಿ 22 ಪಂಚಾಯಿತಿಗಳು ಈಗಾಗಲೇ ಸೋಲಾರ್ ರೂಫ್‍ಟಾಪ್ ಅಳವಡಿಸಿದ್ದಾರೆ. ಉಳಿದಂತೆ 10 ಪಂಚಾಯಿತಿಗಳಲ್ಲಿ ಅನುಷ್ಠಾನ ಬಾಕಿಯಿದೆ.

‘ಸೋಲಾರ್ ಘಟಕ ಅಳವಡಿಸಲು ಸರ್ಕಾರ ವಿಶೇಷ ಅನುದಾನ ನೀಡುವುದಿಲ್ಲ. ಗ್ರಾ.ಪಂಗಳೇ ತಮ್ಮ ಹಣಕಾಸು ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಅಳವಡಿಸಬೇಕು. ಆದರೆ ಗ್ರಾ.ಪಂ ಸದಸ್ಯರು ಸೋಲಾರ್ ಅಳವಡಿಕೆಗಿಂತ ರಸ್ತೆ, ಚರಂಡಿ, ಕುಡಿಯುವ ನೀರು, ದಾರಿದೀಪ ಮೊದಲಾದ ವಿಚಾರಗಳಿಗೆ ಹೆಚ್ಚಿನ ಅನುದಾನ ಮೀಸಲಿರಿಸಲು ಆಗ್ರಹಿಸುತ್ತವೆ. ಆದ್ದರಿಂದ ಸೋಲಾರ್ ಘಟಕ ಅಳವಡಿಕೆಗೆ ಮೊತ್ತ ಸಾಕಾಗುವುದಿಲ್ಲ. ಸೋಲಾರ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಸ್ವೀಕರಿಸಿದರೆ ಅಳವಡಿಕೆ ಬಳಿಕ ಬಿಲ್ ಪಾವತಿಗೆ ಸಮಸ್ಯೆಯಾಗುತ್ತದೆ' ಎನ್ನುವುದು ಪಿಡಿಒಗಳ ಅಭಿಪ್ರಾಯ.

‘ಸ್ಥಳೀಯವಾಗಿ ಸೋಲಾರ್ ಅಳವಡಿಸಲು ಗ್ರಾ.ಪಂಗಳಿಗೆ ಸ್ವಾತಂತ್ರ್ಯ ನೀಡಬೇಕಿತ್ತು. ಇದರ ಕಳಪೆ ಪರಿಕರ ಪೂರೈಕೆ, ಮುಂದಿನ ದಿನಗಳಲ್ಲಿ ನಿರ್ವಹಣೆ ಸಮಸ್ಯೆ ಎದುರಾಗಲಿದೆ. ಸರ್ಕಾರವೇ ಇದಕ್ಕೆ ಪ್ರತ್ಯೇಕ ಅನುದಾನ ನೀಡಬೇಕಿತ್ತು. ಗ್ರಾ.ಪಂ ಸ್ವಂತ ಅನುದಾನ ಅಥವಾ 15ನೇ ಹಣಕಾಸು ಯೋಜನೆ ಅನುದಾನ ಖರ್ಚು ಮಾಡಲು ಆದೇಶಿಸಿದೆ. ಆದರೆ ಕಳೆದ ವರ್ಷ ಜಲ್ ಜೀವನ್ ಮಿಶನ್ ಯೋಜನೆಗೆ ಸಾಕಷ್ಟು ಅನುದಾನ ಖರ್ಚು ಮಾಡಲಾಗಿದೆ. ಉಳಿದ ಮೊತ್ತವನ್ನು ಕುಡಿಯುವ ನೀರು, ರಸ್ತೆ ಇತರ ಸೌಕರ್ಯಗಳಿಗೂ ವ್ಯಯಿಸಬೇಕಿದೆ. ಈ ನಡುವೆ ಸೋಲಾರ್ ಅಳವಡಿಕೆ ಸಮಸ್ಯೆಯಾಗಿದೆ’ ಎನ್ನುತ್ತಾರೆ ಗ್ರಾ.ಪಂ ಜನಪ್ರತಿನಿಧಿಗಳು. 

ಪ್ರಸಕ್ತ ಸಾಲಿನಲ್ಲಿ ಮೂರು ಗ್ರಾಮ ಪಂಚಾಯಿತಿಗಳು ಯೋಜನೆ ಅಳವಡಿಕೆಗೆ ಮುಂದಾಗಿವೆ. ಉಳಿದ ಕಡೆಯೂ ಶೀಘ್ರದಲ್ಲಿ ಸೋಲಾರ್‌ ರೂಫ್ ಟಾಪ್ ಅಳವಡಿಸಲು ಕ್ರಮವಹಿಸಲಾಗುವುದು
ಸತೀಶ ಹೆಗಡೆ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT