ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಸಕರು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲಿ: ಉಪೇಂದ್ರ ಪೈ

Published 2 ಜುಲೈ 2024, 14:10 IST
Last Updated 2 ಜುಲೈ 2024, 14:10 IST
ಅಕ್ಷರ ಗಾತ್ರ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ಜನಸ್ಪಂದನ, ಅಧಿಕಾರಿಗಳ ಸಭೆ ನಡೆಸುವುದರ ಬದಲು ಸಮಸ್ಯೆಗಳು ಇರುವ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಮುಖಂಡ ಉಪೇಂದ್ರ ಪೈ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿರಸಿ-ಹುಬ್ಬಳ್ಳಿ, ಶಿರಸಿ-ಕುಮಟಾ, ಶಿರಸಿ-ಹಾವೇರಿ ರಸ್ತೆಯಲ್ಲಿ ಹೊಂಡಗುಂಡಿಗಳಿಂದ ವಾಹನ ಸವಾರರು ಪರದಾಡುವಂತಾಗಿದೆ. ನಗರ ಭಾಗದ ರಸ್ತೆಗಳಲ್ಲಿ ಹೊಂಡ ಗುಂಡಿಗಳಿಂದ ಆಟೊ ದವರು ಪರದಾಡುತ್ತಿದ್ದಾರೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯಿಂದ ಎಪಿಎಂಸಿ ಕ್ರಾಸ್ ವರೆಗೆ ದ್ವಿಪಥ ರಸ್ತೆ ಕಾಮಗಾರಿ ಪಡೆದ ಗುತ್ತಿಗೆದಾರನಿಗೆ ಹಣ ಪಾವತಿಯಾದ ಕಾರಣ ರಸ್ತೆ ಅರ್ಧಂಬರ್ಧವಾಗಿದೆ. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಉಂಟಾಗುತ್ತಿದ್ದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಸ್ಥಳೀಯ ಶಾಸಕರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಶಾಸಕರು ಜವಾಬ್ದಾರಿ ಮರೆತಿದ್ದಾರೆ.‌ ಜನಸ್ಪಂದನ, ಅಧಿಕಾರಿಗಳ ಸಭೆ ನಡೆಸಿ, ಕಾಲಹರಣ ಮಾಡುತ್ತಿದ್ದಾರೆ. ನಗರಸಭೆಯ 31 ವಾರ್ಡ್‌ನ ಸದಸ್ಯರನ್ನು ಕರೆದು ಜವಾಬ್ದಾರಿ ನೀಡಿದರೆ ಅಭಿವೃದ್ಧಿ ಜತೆಯಲ್ಲಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಅಧ್ಯಕ್ಷರ ಆಯ್ಕೆ ಮಾಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸುವ ಬದಲು ಪ್ರತಿ ಶಾಸಕರ ನೆರಳಿನಲ್ಲಿ ಹಳ್ಳಿಗಳಲ್ಲಿಯೂ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸಿದರು.

ನಗರ ವ್ಯಾಪ್ತಿಯಲ್ಲಿ ಫಾರಂ ನಂಬರ್ 3, ಮನೆಯ ನಿರ್ಮಾಣಕ್ಕೆ ಪರವಾನಗಿ ಪಡೆಯಲು ಜನಸಾಮಾನ್ಯರನ್ನು ಸತಾಯಿಸುವ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನಗರಸಭೆಯ ಕೆಲ ಸದಸ್ಯರು ಲಂಚ ಪಡೆಯುತ್ತಿದ್ದಾರೆ ಎಂಬ ಆಪಾದನೆ ಜನರಿಂದ ಕೇಳಿ ಬಂದಿದೆ. ಬಿಡ್ಕಿಬೈಲ್, ಕೊಣನಬಿಡ್ಕಿಯಲ್ಲಿ ಅಂಗಡಿಗಳಿಗೆ ವಿದ್ಯುತ್ ಸಂರ್ಪಕ ಮಾಡಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಶಕ್ತಿ ಯೋಜನೆಯ ಬಸ್‌ಗಳು ಅಶಕ್ತಿಗೊಂಡಿವೆ. ರಸ್ತೆಯ ಮೇಲೆ ಬಸ್‌ಗಳು ಕೆಟ್ಟು ನಿಂತಿರುವುದು ಸಾಮಾನ್ಯವಾಗಿದೆ ಎಂದರು.

ಡಕೋಟಾ ಬಸ್‌ಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹೊಸ ಬಸ್ ತರುವಲ್ಲಿ ಶಾಸಕರು ಪ್ರಯತ್ನ ನಡೆಸಬೇಕು. ಶಿರಸಿ-ಕುಮಟಾ ರಸ್ತೆ ಸಂಪೂರ್ಣ ಬಂದ್ ಮಾಡಿದರೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗುತ್ತದೆ. ಒಂದು ಭಾಗದ ರಸ್ತೆ ನಿರ್ಮಾಣ ಮಾಡಿ ಒಂದು ಭಾಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯೆ ರಾಜೇಶ್ವರಿ ಹೆಗಡೆ ಮಾತನಾಡಿ, ಅರಸಾಪುರ ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲ. ಭೀಮಣ್ಣ ನಾಯ್ಕ ಶಾಸಕರಾಗಿ ಒಂದು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿಲ್ಲ. ಭೀಮಣ್ಣ ನಾಯ್ಕ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಸರಿಪಡಿಸಲು ಹಣ ಮಂಜೂರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಅನುದಾನ ಮಾತ್ರ ನೀಡಿಲ್ಲ. ರಸ್ತೆಯಲ್ಲಿ ಓಡಾಡಲು ಸಮಸ್ಯೆಯಾಗಿದ್ದು, ಗ್ರಾಮಸ್ಥರೆಲ್ಲರೂ ರಸ್ತೆ ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಯುವ ಘಟಕದ ಅಧ್ಯಕ್ಷ ಆದರ್ಶ ನಾಯ್ಕ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT