ಶುಕ್ರವಾರ, ಡಿಸೆಂಬರ್ 9, 2022
20 °C

ಯಲ್ಲಾಪುರ ಕಾಡಿಗೆ ಬೀದಿ ನಾಯಿಗಳ ಬಿಟ್ಟ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲ್ಲಾಪುರ: ತಾಲ್ಲೂಕಿನ ಹಳಿಯಾಳ ಕ್ರಾಸ್ ಬಳಿ ಕಾಡಿನಲ್ಲಿ ಹತ್ತಾರು ಬೀದಿ ನಾಯಿಗಳನ್ನು ಬಿಟ್ಟಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಳಿಯಾಳ ಪಟ್ಟಣದಲ್ಲಿದ್ದ ಬೀದಿ ನಾಯಿಗಳನ್ನು ಅಲ್ಲಿನ ಪುರಸಭೆ ಸಿಬ್ಬಂದಿ ಹಿಡಿದು ಬಿಟ್ಟಿದ್ದಾರೆ ಎಂದು ಬೆಂಗಳೂರಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿಗೆ ಹಳಿಯಾಳದ ನಿವಾಸಿಗಳು ಕರೆ ಮಾಡಿ ದೂರು ನೀಡಿದ್ದಾರೆ. 

80ರಿಂದ 100 ಬೀದಿ ನಾಯಿಗಳನ್ನು ಟಾಟಾ ಏಸ್ ವಾಹನದಲ್ಲಿ ತುಂಬಿಕೊಂಡು ಬಂದು ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಟ್ಟು ತೆರಳಿರುವುದು ವಿಡಿಯೊದಲ್ಲಿ ದಾಖಲಾಗಿದೆ. 

‘ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಸಾಗಾಣಿಕೆ ಮಾಡಿ ಕಾಡಿನಲ್ಲಿ ಬಿಟ್ಟಿರುವ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆಯಾಗಿದೆ’ ಎಂದು ದೂರಿದ್ದಾರೆ.

ಮಾಹಿತಿಗೆ ಸೂಚನೆ:

‘ಇದನ್ನು ಆಧರಿಸಿ ಪಶು ಇಲಾಖೆಯು ಮೇಲಧಿಕಾರಿಗಳಿಗೆ ವರದಿ ನೀಡಬೇಕು. ಕೂಡಲೇ ಸ್ಪಷ್ಟವಾದ ಮಾಹಿತಿಯನ್ನು ಪಶು ಇಲಾಖೆಯ ಕಚೇರಿಗೆ ನೀಡಬೇಕು’ ಎಂದು ಹಳಿಯಾಳದ ಮುಖ್ಯ ಪಶು ವೈದ್ಯಾಧಿಕಾರಿಯು ಪುರಸಭೆಗೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಬರೆದಿರುವ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಹಳಿಯಾಳದ ಯೋಗರಾಜ ಎಸ್.ಕೆ.ಎಂಬುವವರು ಈ ಕುರಿತು ಮನೇಕಾ ಗಾಂಧಿ ಅವರ ‘ಪೀಪಲ್ ಫಾರ್ ಅನಿಮಲ್‌’, ‘ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ’ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ವಾಹನದಲ್ಲಿ ಸಾಗಿಸಿರುವ ಕುರಿತು ದೂರು ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ದೂರವಾಣಿ ಕರೆಗೆ ಲಭ್ಯರಾಗಲಿಲ್ಲ.

ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆನಂದ ಪ್ರತಿಕ್ರಿಯಿಸಿ, ‘ಯಲ್ಲಾಪುರದ ಅರಣ್ಯದಲ್ಲಿ ಬೀದಿ ನಾಯಿಗಳನ್ನು ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪರಿಶೀಲನೆ ನಡೆಸಲು ವಲಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು