ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ | ಬೀದಿ ದೀಪಗಳಿಲ್ಲದ ಹೆದ್ದಾರಿ: ರಾತ್ರಿ ಸಂಚಾರ ಅಪಾಯಕರ

Published 16 ಮೇ 2024, 6:25 IST
Last Updated 16 ಮೇ 2024, 6:25 IST
ಅಕ್ಷರ ಗಾತ್ರ

ಭಟ್ಕಳ: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಅಪೂರ್ಣವಾಗಿರುವುದರಿಂದ ಪಟ್ಟಣದಲ್ಲಿ ಹಾಯ್ದು ಹೋಗಿರುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೇ ರಾತ್ರಿಯಲ್ಲಿ ಸಂಚರಿಸಬೇಕಾದವರು ಪರದಾಡುವಂತಾಗಿದೆ.

ಕಳೆದ ಒಂದು ವರ್ಷದಿಂದ ಇದೇ ಸ್ಥಿತಿ ಇದೆ. ಐಆರ್‌ಬಿ ಅಧಿಕಾರಿಗಳು ಬೀದಿ ದೀಪ ಅಳವಡಿಕೆಗೆ ಕ್ರಮ ವಹಿಸದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಭಟ್ಕಳ ಪಟ್ಟಣದ ಬಹುತೇಕ ಅಂಗಡಿಗಳು, ವ್ಯಾಪಾರ–ವ್ಯವಹಾರ ಕೇಂದ್ರಗಳು ರಾಷ್ಟ್ರೀಯ ಹೆದ್ದಾರಿಯ ಆಸುಪಾಸಿನಲ್ಲಿವೆ. ಪಟ್ಟಣದ ಮೂಡಭಟ್ಕಳದಿಂದ ಹಿಡಿದು ವೆಂಕಟಾಪುರ ಕ್ರಾಸ್‌ ತನಕ ರಾಷ್ಟ್ರೀಯಯ ಹೆದ್ದಾರಿಯ ಅಂಚು ಪಟ್ಟಣದ ಪ್ರಮುಖ ವ್ಯಾಪಾರ ವ್ಯವಹಾರಗಳ ಕೆಂದ್ರವಾಗಿದೆ. ಈ ಹಿಂದೆ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯ್ತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಖರವಾಗಿ ಬೆಳಕು ಹೊರಸೂಸುವ ಬೀದಿದೀಪಗಳನ್ನು ಅಳವಡಿಸಲಾಗಿತ್ತು. ಒಂದು ವರ್ಷದ ಹಿಂದೆ ಹೆದ್ದಾರಿ ಅಂಚಿನಲ್ಲಿರುವ ಹಳೆಯ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡುವ ನೆಪದಲ್ಲಿ ಬೀದಿ ದೀಪ ತೆಗೆದು ಹಾಕಿದ ಐಆರ್‌ಬಿ ಇನ್ನೂ ತನಕ ಅದರ ಮರು ಅಳವಡಿಕೆಗೆ ಮುಂದಾಗಿಲ್ಲ.

ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಪಟ್ಟಣ ವ್ಯಾಪ್ತಿಯ ಹೆದ್ದಾರಿಯಲ್ಲಿ ಬೀದಿದೀಪ ಇರದ ಕಾರಣ ವೇಗವಾಗಿ ಬರುವ ವಾಹನಗಳು ಹೆದ್ದಾರಿ ದಾಟಿ ಬರುವ ವಾಹನಗಳಿಗೆ ಗುದ್ದಿ ನಿತ್ಯ ಅಪಘಾತಗಳಾಗುತ್ತಿವೆ. ಪೊಲೀಸ್ ಇಲಾಖೆ ಹಾಗು ಸಾರ್ವಜನಿಕರಿಂದ ಜನದಟ್ಟಣೆ ಇರುವ ಅಲ್ಲಲ್ಲಿ ಮುಖ್ಯವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೂ ಕಗ್ಗತ್ತಲಿನಲ್ಲಿ ಬ್ಯಾರಿಕೇಡ್‌ಗೆ ಗುದ್ದಿ ಅಪಘಾತಗೊಂಡ ಅನೇಕ ಉದಾಹರಣೆಗಳಿವೆ. ನೆರೆಯ ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ತಾಲ್ಲೂಕುಗಳಲ್ಲಿ ಪಟ್ಟಣದಲ್ಲಿ ಈ ರೀತಿ ಕಗ್ಗತ್ತಲಿನ ದರ್ಶನವಾಗುವುದಿಲ್ಲ. ಭಟ್ಕಳವನ್ನು ಮಾತ್ರ ಐಆರ್‌ಬಿ ‌ ಇಂತಹ ಸ್ಥಿತಿಗೆ ತಂದಿಟ್ಟಿದೆ ಎಂಬ ದೂರು ಕೇಳಿ ಬಂದಿದೆ. ಸದಾ ಬೆಳಕಿನಿಂದ ಕಂಗೊಳಿಸುತ್ತಿದ್ದ ಶಂಸುದ್ದೀನ್ ವೃತ್ತದಲ್ಲಿ ರಾತ್ರಿ ವೇಳೆ ಈಗ ಸಂಪೂರ್ಣ ಕಗ್ಗತ್ತಲು ಆವರಿಸಿಕೊಳ್ಳುತ್ತದೆ. ಮಳೆಗಾದಲ್ಲಿ ಅಪಘಾತದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿ ಬೀದಿದೀಪ ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರಾದ ಮಾಜಿ ಸೈನಿಕ ಶ್ರೀಕಾಂತ ಒತ್ತಾಯಿಸಿದ್ದಾರೆ.

ಭಟ್ಕಳದ ಜನನಿಬಿಡ ನವಾಯತ್ ಕಾಲೊನಿಯಲ್ಲಿ ಹಾಯ್ದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಗ್ಗತ್ತಲು ಕವಿದಿರುವುದು
ಭಟ್ಕಳದ ಜನನಿಬಿಡ ನವಾಯತ್ ಕಾಲೊನಿಯಲ್ಲಿ ಹಾಯ್ದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಗ್ಗತ್ತಲು ಕವಿದಿರುವುದು
‘ಸ್ಪಷ್ಟ ಮಾಹಿತಿ ಸಿಕ್ಕಿಲ್ಲ’
ಭಟ್ಕಳ ಪಟ್ಟಣ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ಮಾಡದೇ ಬೀದಿ ದೀಪ ಅಳವಡಿಕೆ ಸಾಧ್ಯ ಇಲ್ಲ. ಭಟ್ಕಳದಲ್ಲಿ ನಡೆಸಬೇಕಾದ ಕಾಮಗಾರಿಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸ್ಪಷ್ಟ ಮಾಹಿತಿ ನಮಗೆ ಸಿಕ್ಕಿಲ್ಲ. ಅವರ ಯೋಜನೆ ಪ್ರಕಾರ ಕಾಮಗಾರಿ ಮಾಡಲು ಐಆರ್‌ಬಿ ಸಿದ್ಧವಿದೆ ಎಂದು ಐಆರ್‌ಬಿ ಎಂಜಿನಿಯರ್ ಸುದೇಶ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT