ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಯಿಡಾ | ಕೇಳುವವರಿಲ್ಲ ವಿದ್ಯಾರ್ಥಿಗಳ ಅರಣ್ಯ ರೋದನ

Published 31 ಡಿಸೆಂಬರ್ 2023, 5:03 IST
Last Updated 31 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ಜೊಯಿಡಾ: ಇಲ್ಲಿಯ ಮಕ್ಕಳು ಬೆಳಗಾಗುವ ಮುಂಚೆ ಮನೆ ಬಿಟ್ಟವರು ಮರಳಿ ಮನೆಗೆ ಬಂದು ಸೇರುವುದು ರಾತ್ರಿ ಊಟಕ್ಕೆ. ಪ್ರತಿದಿನವೂ ಕಿಕ್ಕಿರಿದು ತುಂಬುವ ಬಸ್ಸಿನಲ್ಲಿ ಒಂಟಿ ಕಾಲಿನಲ್ಲಿ ನಿಂತುಕೊಂಡೇ ಹರಸಾಹಸ ಪಟ್ಟು ವಿದ್ಯಾಭ್ಯಾಸಕ್ಕೆ ಹೋಗಬೇಕಿದೆ.

ಇದು ಜೊಯಿಡಾ ತಾಲ್ಲೂಕಿನ ಉಳವಿ ಹಾಗೂ ಕಾರ್ಟೋಳಿ ಭಾಗಗಳಿಂದ ಕುಂಬಾರವಾಡ ಹಾಗೂ ಜೊಯಿಡಾ ಶಾಲೆ– ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನವೂ ಶಿಕ್ಷಣಕ್ಕಾಗಿ ಎದುರಿಸುತ್ತಿರುವ ಸಂಕಟವಾಗಿದೆ.

ಉಳವಿ ಭಾಗದ ಹೆಣಕೋಳ, ಕಡಕರ್ಣಿ, ಅಂಬೋಳಿ, ಚಂದ್ರಾಳಿ, ಮಾತ್ಕರ್ಣಿ, ಆಮಸೇತ, ಕೊಂದರ, ಮೈನೋಳದಿಂದ ಕುಂಬಾರವಾಡ ಪ್ರಾಥಮಿಕ ಶಾಲೆಗೆ 28, ಪ್ರೌಢಶಾಲೆಗೆ 37, ಪದವಿಪೂರ್ವ ಕಾಲೇಜಿಗೆ 22 ಮತ್ತು ಜೊಯಿಡಾದ ವಿವಿಧ ಕಾಲೇಜುಗಳಿಗೆ 26 ವಿದ್ಯಾರ್ಥಿಗಳು ಸೇರಿ ಒಟ್ಟು ಸುಮಾರು 113 ವಿದ್ಯಾರ್ಥಿಗಳು ಬೆಳಿಗ್ಗೆ ಉಳವಿಯಿಂದ ಬೆಳಗಾವಿಗೆ ಹೋಗುವ ಬಸ್ಸಿನಲ್ಲಿ ಬರುತ್ತಾರೆ. ಬಹುತೇಕ ದಿನಗಳಲ್ಲಿ ಉಳವಿಯಿಂದ ಬರುವ ಬಸ್ಸು ಪ್ರಯಾಣಿಕರಿಂದ ತುಂಬಿರುವುದರಿಂದ ಆರಂಭದ ನಿಲ್ದಾಣದ ವಿಧ್ಯಾರ್ಥಿಗಳಿಗೆ ಮಾತ್ರ ಬಸ್ಸಿನಲ್ಲಿ ಬರಲು ಅವಕಾಶ ಸಿಗುತ್ತದೆ. ಮುಂದಿನ ನಿಲ್ದಾಣಗಳಿಗೆ ಬರುವ ಹೊತ್ತಿಗೆ ಜಾಗ ಇಲ್ಲದಿರುವುದರಿಂದ ಚಾಲಕರು ಬಸ್ ನಿಲ್ಲಿಸುವುದಿಲ್ಲ. ತದನಂತರ ಬರುವ ಇಚಲಕರಂಜಿ ಬಸ್ ಶಕ್ತಿ ಯೋಜನೆಯ ಮಹಿಳೆಯರಿಂದ ತುಂಬಿರುತ್ತದೆ. ಅದು ಬಹುತೇಕ ಹಳ್ಳಿಗಳಲ್ಲಿ ನಿಲ್ಲಿಸುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಹತ್ತಿ ಶಾಲೆ– ಕಾಲೇಜುಗಳಿಗೆ ಬರಬೇಕು. ಇಲ್ಲವಾದರೆ ಅಂದು ರಜೆ ಮಾಡಬೇಕು ಎಂಬ ಸ್ಥಿತಿ ಇದೆ.

ದಾಂಡೇಲಿಯಿಂದ ಉಳವಿಗೆ ಹೋಗುವ ಬಸ್ಸು ಬಾರದ ಕಾರಣ ವಿದ್ಯಾರ್ಥಿಗಳು ರಾತ್ರಿ 8 ಕ್ಕೆ ಬಂದ ಬೈಲಹೊಂಗಲ–ಉಳವಿ ಬಸ್ಸಿಗೆ ಹತ್ತಲು ಪ್ರಯತ್ನಿಸುತ್ತಿರುವುದು

ದಾಂಡೇಲಿಯಿಂದ ಉಳವಿಗೆ ಹೋಗುವ ಬಸ್ಸು ಬಾರದ ಕಾರಣ ವಿದ್ಯಾರ್ಥಿಗಳು ರಾತ್ರಿ 8 ಕ್ಕೆ ಬಂದ ಬೈಲಹೊಂಗಲ–ಉಳವಿ ಬಸ್ಸಿಗೆ ಹತ್ತಲು ಪ್ರಯತ್ನಿಸುತ್ತಿರುವುದು

ಮಧ್ಯಾಹ್ನ 3.30ಕ್ಕೆ ಕಾಲೇಜು ಮತ್ತು 4.30ಕ್ಕೆ ಶಾಲೆ ಬಿಟ್ಟರೂ ಇವರಿಗೆ ಮನೆಗೆ ಹೋಗಲು 5.30ಕ್ಕೆ ದಾಂಡೇಲಿಯಿಂದ ಉಳವಿಗೆ ಹೋಗುವ ಬಸ್ಸು ಬರಬೇಕು. ಈ ಬಸ್‌ ದಾಂಡೇಲಿ ಹಾಗೂ ಜೊಯಿಡಾದಿಂದ ವಿದ್ಯಾರ್ಥಿಗಳು ಹಾಗೂ ಜನರಿಂದ ತುಂಬಿಯೇ ಬರುತ್ತದೆ. ಕೆಲವು ದಿನಗಳಲ್ಲಿ ಸರಿಯಾದ ಸಮಯಕ್ಕೆ ಬರುವುದೇ ಇಲ್ಲ. ವಿದ್ಯಾರ್ಥಿಗಳು 7.30ಕ್ಕೆ ಬರುವ ಬೈಲಹೊಂಗಲ ಅಥವಾ 8ಕ್ಕೆ ಬರುವ ಇಚಲಕರಂಜಿ ಬಸ್ಸಿಗಾಗಿ ಕಾಯುತ್ತ ನಿಲ್ಲುತ್ತಾರೆ. ಸರಿಯಾದ ಬಸ್ ನಿಲ್ದಾಣ ವ್ಯವಸ್ಥೆಯೂ ಇಲ್ಲದಿರುವುದರಿಂದ ಅಂಗಡಿಯಿಂದ ಅಂಗಡಿಗೆ ಅಲೆಯುತ್ತ ಕಾಲ ಕಳೆಯುತ್ತಾರೆ.

ಬಹುತೇಕ ಎಲ್ಲ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯಲು ಹಳ್ಳಿಗಳಿಂದ ಮುಖ್ಯ ರಸ್ತೆಗೆ ಸುಮಾರು 2 ಕಿ.ಮೀ.ದಿಂದ 5 ಕಿ.ಮೀ ದೂರದಲ್ಲಿ ದಟ್ಟ ಕಾಡಿನ ಮಧ್ಯ ವನ್ಯ ಜೀವಿಗಳ ದಾಳಿಯ ಭಯದಲ್ಲೇ ಕತ್ತಲೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಮಕ್ಕಳನ್ನು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಬಿಡುವುದು ಹಾಗೂ ರಾತ್ರಿ ಕರೆದುಕೊಂಡು ಹೋಗಲು ಬರುವುದು ಕೆಲವು ಪಾಲಕರ ಪ್ರತಿದಿನದ ಕಾಯಕ ಆಗಿದೆ.

ಕಾರ್ಟೋಳಿ ಭಾಗದ ಸುಮಾರು 7 ಹಳ್ಳಿಗಳಿಂದ ಅಂದಾಜು 50 ವಿದ್ಯಾರ್ಥಿಗಳು ಬೆಳಿಗ್ಗೆ ವಾಗೇಲಿಯಿಂದ ಬರುವ ಮಿನಿ ಬಸ್ಸಿನಲ್ಲಿ ಪ್ರಯಾಣಿಕರು ಸೇರಿದಂತೆ 100 ಕ್ಕಿಂತ ಹೆಚ್ಚಿನ ಜನರ ನಡುವೆಯೇ ಹತ್ತಿ ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ. ಇವರು ಮನೆಗೆ ಮರಳುವುದು ಸಂಜೆ 6.30 ಕ್ಕೆ ಹೋಗುವ ಅದೇ ಮಿನಿ ಬಸ್ಸಿಗೆ. ಆದ್ದರಿಂದ ಮಧ್ಯಾಹ್ನ ಕಾರ್ಟೋಳಿ ಭಾಗಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಬಿಡುವಂತೆ  ಈಚಿಗೆ ನಡೆದ ಜಿಲ್ಲಾಧಿಕಾರಿಯವರ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಆಗ್ರಹಿಸಿದ್ದರು.

ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಆರಂಭವಾದ ಮೇಲೆ ಹುಬ್ಬಳ್ಳಿ, ಬೈಲಹೊಂಗಲ ಹಾಗೂ ವಿವಿಧ ಭಾಗಗಳಿಂದ ಉಳವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ಬರುತ್ತವೆ. ಆದರೆ ಅವುಗಳು ವಿದ್ಯಾರ್ಥಿಗಳು ಕೈ ಮಾಡಿದರೆ ನಿಲ್ಲಿಸುವುದಿಲ್ಲ ಎನ್ನುತ್ತಾರೆ ವಿದ್ಯಾರ್ಥಿನಿಯರಾದ ಶೀಲ್ಪಾ ಮೀರಾಶಿ ಹಾಗೂ ಶ್ವಾತಿ ಬಿಲ್ಲೆಕರ.

‘ನಾವು ಪ್ರಾಥಮಿಕ ಶಾಲೆಗೆ ಬರುವಾಗಿನಿಂದಲೂ ಬಸ್ಸಿನ ಸಮಸ್ಯೆ ಇದೆ. ಹಲವು ಬಾರಿ ಮನವಿಗಳನ್ನೂ ನೀಡಿದ್ದೇವೆ. ಯಾರೂ ಸ್ಪಂದಿಸುತ್ತಿಲ್ಲ. ಕೆಲವೊಮ್ಮೆ ರಾತ್ರಿ ಟ್ರಕ್, ಟೆಂಪೊಗಳಲ್ಲಿ ಸಹ ಮನೆಗೆ ಹೋಗಿದ್ದೇವೆ. ಶನಿವಾರ ನಮಗೆ ಖಾಸಗಿ ವಾಹನವೇ ಗತಿ. ಬಸ್ ಸಮಸ್ಯೆಯಲ್ಲಿಯೇ ನಮ್ಮ ವಿಧ್ಯಾರ್ಥಿ ಜೀವನ ಮುಗಿಯಿತು’ ಎಂದು ಪಿಯು ವಿಧ್ಯಾರ್ಥಿ ದರ್ಶನ ಶೆಳಪೆಕರ ಬೇಸರ ವ್ಯಕ್ತಪಡಿಸಿದರು.

ಜೊಯಿಡಾದಿಂದ ಸಂಜೆ 4.30ಕ್ಕೆ, ಶನಿವಾರ ಮಧ್ಯಾಹ್ನ 1ಕ್ಕೆ ಉಳವಿಗೆ ಪ್ರತ್ಯೇಕವಾಗಿ ಮತ್ತು ಪ್ರತಿದಿನ ಬೆಳಿಗ್ಗೆ 7ಕ್ಕೆ ವಿದ್ಯಾರ್ಥಿಗಳಿಗಾಗಿಯೇ ಬಸ್ಸು ಬಿಡುವಂತೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಕಾರ್ಟೋಳಿಗೆ ಹೆಚ್ಚುವರಿ ಬಸ್ ಬಿಡಲು ಅನುಮತಿ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಉಳವಿಗೆ ವಿಧ್ಯಾರ್ಥಿಗಳಿಗಾಗಿಯೆ ಪ್ರತ್ಯೇಕ ಬಸ್ ಬಿಡಲಾಗುತ್ತಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ಸಮಸ್ಯೆ ಆಗುತ್ತಿದೆ. ಶನಿವಾರ ಬಸ್ ಬಿಡಲು ಹಾಗೂ ಪ್ರತಿದಿನ ಸಮಯಕ್ಕೆ ಬಸ್ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. 
ಎಚ್.ಎಲ್. ರಾಠೋಡ, ಡಿಪೊ ವ್ಯವಸ್ಥಾಪಕ, ದಾಂಡೇಲಿ
ತಾಲ್ಲೂಕಿನಲ್ಲಿ ಪ್ರತ್ಯೇಕ ಬಸ್ ಡಿಪೊ ನಿರ್ಮಾಣ ಮಾಡಿದಾಗಲೇ ಬಸ್ ಸಮಸ್ಯೆ ನಿವಾರಣೆಯಾಗುತ್ತದೆ. ಈ ಬಗ್ಗೆ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಮಂಜುನಾಥ ಮೊಕಾಶಿ, ಅಧ್ಯಕ್ಷರು, ಉಳವಿ, ಗ್ರಾಮ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT