ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಣಿಗರ ಸ್ವರ್ಗ ಯಲ್ಲಾಪುರದ ‘ಸೂರ್ಯಕಲ್ಯಾಣಿ’ ಗುಡ್ಡ

ಎತ್ತರದ ಪ್ರದೇಶದಿಂದ ಗೋಚರಿಸುವ ಅರಬ್ಬಿ ಅಲೆಗಳು, ಪಶ್ಚಿಮ ಘಟ್ಟದ ಸಾಲು
ವಿಶ್ವೇಶ್ವರ ಗಾಂವ್ಕರ
Published 10 ಡಿಸೆಂಬರ್ 2023, 5:30 IST
Last Updated 10 ಡಿಸೆಂಬರ್ 2023, 5:30 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಮಾವಿನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾರೆ ಗ್ರಾಮದಲ್ಲಿರುವ ಸೂರ್ಯಕಲ್ಯಾಣಿ ಗುಡ್ಡ ಸಾಹಸ ಪ್ರಿಯ ಚಾರಣಿಗರ ಅಚ್ಚುಮೆಚ್ಚಿನ ಸ್ಥಳ. ಈ ಗುಡ್ಡ ಏರಿ ತುತ್ತ ತುದಿಯಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು ಒಂದು ಅವರ್ಣನೀಯ, ಅಚ್ಚಳಿಯದ ಅನುಭವ.

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಚಿನ್ನಾಪುರದಿಂದ ಕೈಗಾ ರಸ್ತೆಯಲ್ಲಿ ಸರಿಸುಮಾರು 36 ಕಿ.ಮೀ ಸಾಗಿದರೆ ಮಲವಳ್ಳಿ, ನಂತರ ಶೇಡಿಮನೆ ಸಿಗುತ್ತದೆ. ಅಲ್ಲಿಂದ ಸೂರ್ಯಕಲ್ಯಾಣಿ ಗುಡ್ಡಕ್ಕೆ 2 ಕಿ.ಮೀ ಕಾಲು ನಡಿಗೆಯ ಹಾದಿ.

‘ಕಲ್ಲು, ಮಣ್ಣು, ಮರದ ಬೇರುಗಳ ನಡುವೆ ಹೆಜ್ಜೆ ಹಾಕುತ್ತ, ಹಕ್ಕಿಗಳ ಚಿಲಿಪಿಲಿ ನಿನಾದ ಆಲಿಸುತ್ತ ಆ ಪ್ರಶಾಂತ ವಾತಾವರಣದಲ್ಲಿ ಕಿರಿದಾದ ಕಾಲುದಾರಿಯಲ್ಲಿ ನಡೆದು ಸೂರ್ಯಕಲ್ಯಾಣಿ ಗುಡ್ಡ ಏರುವುದೇ ಒಂದು ರೋಮಾಂಚನಕಾರಿ ಅನುಭವ. ಗುಡ್ಡದಲ್ಲಿ ಮಠ ಮಠ ಮಧ್ಯಾಹ್ನದ ಬಿರು ಬಿಸಿಲಿನಲ್ಲಿಯೂ ಬೀಸುವ ತಂಗಾಳಿಯನ್ನು ಆಸ್ವಾದಿಸುವುದು, ಆ ಪ್ರಶಾಂತ ನೀರವ ಮೌನದಲ್ಲಿ ಪ್ರಕೃತಿಯ ಸದ್ದುಗಳನ್ನು ಆಲಿಸುವುದು, ಗುಡ್ಡದ ಮೇಲೆ ನಿಂತು ಸುತ್ತಲೂ ಕಾಣುವ ಪ್ರಕೃತಿಯ ಚೆಲುವನ್ನು, ಬೆಟ್ಟದ ಸಾಲು ಸಾಲು ಪಂಕ್ತಿಯನ್ನು ನೋಡುವುದು, ತೆಳುವಾದ ಹುಲ್ಲಿನ ಮೇಲೆ ಹಾಯಾಗಿ ಮಲಗಿ ಸೂರ್ಯಾಸ್ತವನ್ನು ತದೇಕ ಚಿತ್ತವಾಗಿ ವೀಕ್ಷಿಸುವುದು ಎಲ್ಲಿಲ್ಲದ ಆನಂದವನ್ನು ನೀಡಿತು’ ಎನ್ನುತ್ತಾರೆ ಈಚೆಗೆ ಸೂರ್ಯಕಲ್ಯಾಣಿ ಗುಡ್ಡಕ್ಕೆ ಭೇಟಿಕೊಟ್ಟ ರಮಾ ಅಚ್ಯುತ್.

ಸೂರ್ಯಕಲ್ಯಾಣಿ ಗುಡ್ಡದ ಮೇಲೆ ನಿಂತರೆ ದೂರದಲ್ಲಿ ಗಂಗಾವಳಿ ನದಿ ತಪ್ಪಲು ಪ್ರದೇಶ, ಕಮ್ಮಾಣಿ, ಸುಂಕಸಾಳ, ಗೋಕರ್ಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಾತಾವರಣ ಶುಭ್ರವಾಗಿದ್ದರೆ ಗುಡ್ಡದ ತುದಿಯಿಂದ ಅರಬ್ಬಿ ಸಮುದ್ರದ ಅಲೆಗಳು ಗೋಚರಿಸುತ್ತದೆ. ತಾಲ್ಲೂಕಿನಲ್ಲಿಯೇ ಅತ್ಯಂತ ಎತ್ತರದ್ದು ಎನ್ನಲಾಗುವ ಈ ಗುಡ್ಡಕ್ಕೆ ಹೋಗಲು ಶೀಗೆಕೇರಿ ಗ್ರಾಮ ಅರಣ್ಯ ಸಮಿತಿಯವರು ಮಾರ್ಗಸೂಚಿ ಫಲಕ ಅಳವಡಿಸಿದ್ದಾರೆ. ಈ ಗುಡ್ಡದ ಸಮೀಪದಲ್ಲಿ ಒಂದು ಬಾವಲಿ ಗುಹೆ ಇದ್ದು, ಈ ಗುಹೆಯಲ್ಲಿ ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಆಶ್ರಯ ಪಡೆದಿದ್ದರು ಎಂಬ ಪ್ರತೀತಿ ಇದೆ.

ಯಲ್ಲಾಪುರ ತಾಲ್ಲೂಕು ಸೂಯ೯ಕಲ್ಯಾಣಿ ಗುಡ್ಡದಲ್ಲಿ ಸೂರ್ಯಾಸ್ತದ ಕ್ಷಣ
ಯಲ್ಲಾಪುರ ತಾಲ್ಲೂಕು ಸೂಯ೯ಕಲ್ಯಾಣಿ ಗುಡ್ಡದಲ್ಲಿ ಸೂರ್ಯಾಸ್ತದ ಕ್ಷಣ
ಸೂರ್ಯಕಲ್ಯಾಣಿ ಗುಡ್ಡಕ್ಕೆ ಚಾರಣದ ಮೂಲಕ ಸಾಗುವುದು ವಿಶಿಷ್ಟ ಬಗೆಯ ಅನುಭೂತಿ ನೀಡುವ ಜತೆಗೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ.
ಶ್ರೀರಂಗ ಕಟ್ಟಿ ನಿವೃತ್ತ ಪ್ರಾಚಾರ್ಯ

ಸವಾರರಿಗೆ ರೋಚಕ ಅನುಭವ ‘ಸೂರ್ಯಕಲ್ಯಾಣಿ ಗುಡ್ಡಕ್ಕೆ ಸಾಗುವ ರಸ್ತೆಯುದ್ದಕ್ಕೂ ದಟ್ಟವಾದ ಕಾಡು ಸ್ವಾಗತಿಸುತ್ತದೆ. ರಸ್ತೆಯಲ್ಲಿ ಮತ್ತೆ ಮತ್ತೆ ಎದುರಾಗುವ ತಿರುವುಗಳು ಬೈಕ್‌ ಸವಾರರಿಗೆ ರೋಚಕ ಅನುಭವ ನೀಡುತ್ತವೆ. ಸಾಹಸ ಮಾಡಲು ಇಚ್ಛಿಸುವ ಸವಾರರು ಬಹುದೂರದವರೆಗೆ ಬೈಕ್ ಚಲಾಯಿಸಿಕೊಂಡು ಸಾಗಬಹುದಾಗಿದೆ. ಆದರೆ ಎತ್ತರದ ಗುಡ್ಡದಲ್ಲಿ ಏನೂ ಸಿಗುವುದಿಲ್ಲ. ಹೀಗಾಗಿ ಗುಡ್ಡಕ್ಕೆ ಹೋಗುವವರು ತಿಂಡಿ ಮತ್ತು ನೀರನ್ನು ಒಯ್ಯುವುದು ಒಳಿತು’ ಎನ್ನುತ್ತಾರೆ ಚಾರಣಿಗ ಅಚ್ಯುತಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT