ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಯೆಂಡಿ ಬಲೆಗೆ ಸುಗ್ಗಿ ಕಾಲ

Published 17 ಜುಲೈ 2023, 3:44 IST
Last Updated 17 ಜುಲೈ 2023, 3:44 IST
ಅಕ್ಷರ ಗಾತ್ರ

ಗಣಪತಿ ಹೆಗಡೆ

ಕಾರವಾರ: ಮುಂಗಾರು ವಿಳಂಬವಾದರೂ ಮೇ ಅಂತ್ಯಕ್ಕೆ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆ ನಿಂತಿತು. ಜೂನ್ ಮಧ್ಯಂತರದ ಬಳಿಕ ಮಳೆಯ ರಭಸವೂ ಹೆಚ್ಚಿತು. ಇದರಿಂದ ಮೀನು ಮಾರುಕಟ್ಟೆ ಮೀನುಗಳಿಲ್ಲದೆ ಭಣ ಭಣಗುಡುತ್ತಿತ್ತು. ಆದರೆ ಈಗ ಸಾಂಪ್ರದಾಯಿಕ ಮೀನುಗಾರಿಕೆಗೆ ಹೇಳಿ ಮಾಡಿಸಿದ ವಾತಾವರಣ ಮೂಡಿದೆ. ಇದರಿಂದ ಯೆಂಡಿ ಬಲೆ ಮೀನುಗಾರಿಕೆಗೆ ಸುಗ್ಗಿ ಕಾಲ ಶುರುವಾಗಿದೆ.

ಇಲ್ಲಿನ ಟ್ಯಾಗೋರ್ ಕಡಲತೀರ, ಅಲಿಗದ್ದಾ ಕಡಲತೀರದಲ್ಲಿ ನಿತ್ಯ ಮುಂಜಾನೆ, ಇಳಿಸಂಜೆಯ ಹೊತ್ತಲ್ಲಿ ಯೆಂಡಿ ಬಲೆ ಮೂಲಕ ಮೀನು ಹಿಡಿಯುವ ಪ್ರಕ್ರಿಯೆ ಚಿಗಿತುಕೊಂಡಿದೆ. ಕಳೆದ ಎರಡು ವಾರಗಳಿಂದ ಮಳೆ, ಗಾಳಿಯ ರಭಸಕ್ಕೆ ಪ್ರಕ್ಷುಬ್ಧಗೊಂಡಿದ್ದ ಸಮುದ್ರವೂ ಶಾಂತವಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ಮೀನುಗಳು ದಡಕ್ಕೆ ಸಮೀಪಿಸುವ ಜತೆಗೆ ಯಾಂತ್ರೀಕೃತ ಮೀನುಗಾರಿಕೆಯೂ ಸ್ಥಗಿತಗೊಂಡಿರುವುದು ಸಾಂಪ್ರದಾಯಿಕ ಮೀನುಗಾರರ ಪಾಲಿಗೆ ವರವಾಗಿದೆ.

ದಿನವೂ ನಸುಕಿನ ಜಾವದಲ್ಲಿ ಕಡಲತೀರಕ್ಕೆ ಸಮೀಪದಲ್ಲೇ ಯೆಂಡಿ ಬಲೆ ಬೀಸಲಾಗುತ್ತದೆ. ನಾಲ್ಕಾರು ತಾಸಿನ ಬಳಿಕ ಹತ್ತರಿಂದ ಹನ್ನೆರಡು ಮಂದಿ ಮೀನುಗಾರರು ಬಲೆ ಎಳೆಯುತ್ತಾರೆ. ಬಲೆಗೆ ಬೀಳುವ ರಾಶಿಗಟ್ಟಲೆ ಬಂಗುಡೆ, ಸಿಗಡಿ (ಶೆಟ್ಲಿ), ಬುರುಗು, ಇಸ್ವಾಣ, ಏಡಿ ಸೇರಿದಂತೆ ಇನ್ನೂ ಹಲವು ಬಗೆಯ ಮೀನುಗಳನ್ನು ಪಾಲು ಹಾಕಿ ಮಾರಾಟ ಮಾಡುತ್ತಾರೆ. ಇಳಿ ಸಂಜೆಯ ಹೊತ್ತಲ್ಲೂ ಇದೇ ಮಾದರಿಯ ಮತ್ಸ್ಯ ಬೇಟೆ ನಡೆಯುತ್ತದೆ. ನಿತ್ಯ ಕನಿಷ್ಠ 10 ರಿಂದ 12 ಗುಂಪುಗಳು ಯೆಂಡಿ ಮೀನುಗಾರಿಕೆಯಲ್ಲಿ ತೊಡಗಿದ್ದು ಕಾಣಸಿಗುತ್ತದೆ.

ಯೆಂಡಿ ಬಲೆಗೆ ಬೀಳುವ ಮೀನುಗಳನ್ನು ಖರೀದಿಸಲು ಕೆಲವರು ಕಡಲತೀರಕ್ಕೆ ಬರುತ್ತಾರೆ. ಮಾರುಕಟ್ಟೆಗೂ ಹೆಚ್ಚು ಪೂರೈಕೆ ಆಗುತ್ತಿರುವ ಪರಿಣಾಮ ಕಳೆದೊಂದು ತಿಂಗಳಿನಿಂದ ಇದ್ದ ಮೀನಿನ ಕೊರತೆ ಸಮಸ್ಯೆ ಸ್ವಲ್ಪ ತಗ್ಗಿದೆ.

ಮಳೆ ಗಾಳಿ ಕಡಿಮೆ ಇರುವುದರಿಂದ ಯೆಂಡಿ ಬಲೆಗೆ ಹೆಚ್ಚು ಮೀನು ಸಿಗುತ್ತಿದೆ. ಮಾರುಕಟ್ಟೆಯಲ್ಲಿ ಮೀನಿನ ಕೊರತೆ ಇದ್ದ ಕಾರಣ ಉತ್ತಮವೂ ದರವೂ ಲಭಿಸುತ್ತಿದೆ.
ರೋಹಿತ್ ಅಸ್ನೋಟಿಕರ್, ಸಾಂಪ್ರದಾಯಿಕ ಮೀನುಗಾರ

‘ಮುಂಗಾರು ಅಬ್ಬರಿಸಿದ್ದಲ್ಲದೆ ವಿಪರೀತ ಗಾಳಿಯೂ ಇದ್ದ ಕಾರಣ ಆಳಸಮುದ್ರದ ಕಡೆಗಿದ್ದ ಮೀನುಗಳು ದಡಕ್ಕೆ ಸಮೀಪ ಬಂದಿವೆ. ಸಮುದ್ರದ ಅಬ್ಬರ ಕಡಿಮೆ ಆಗಿರುವುದರಿಂದ ಬಲೆ ಬೀಸಲು ಅನುಕೂಲವಾಗಿದೆ. ನಿತ್ಯ ಒಂದೊಂದು ಗುಂಪು ಸರಾಸರಿ ₹3 ರಿಂದ ₹ 4 ಸಾವಿರ ಸಂಪಾದಿಸುತ್ತಿದ್ದೇವೆ. ಮೀನಿನ ಕೊರತೆ ಇರುವ ಕಾರಣ ಸಿಗುವ ಅತ್ಯಲ್ಪ ಮೀನಿಗೂ ಉತ್ತಮ ದರ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ರಾಮಾ ಸುರಂಗೇಕರ್.

ಭಟ್ಕಳ: ಪಾತಿದೋಣಿ ಮೀನುಗಾರಿಕೆಗೆ ಅನುಕೂಲ

ಭಾರಿ ಮಳೆಯಲ್ಲೂ ಪಾತಿ ದೋಣಿ ಮೀನುಗಾರರು ಸಮುದ್ರಕ್ಕಿಳಿದು ಭರ್ಜರಿ ಮತ್ಸ್ಯ ಬೇಟೆ ನಡೆಸುತ್ತಿದ್ದು ಮಳೆಗಾಲದಲ್ಲೂ ಮತ್ಸ್ಯಪ್ರಿಯರಿಗೆ ಅಗ್ಗದ ದರದಲ್ಲಿ ಭರಪೂರ ಮೀನು ಸಿಗುತ್ತಿದೆ. ಎರಡು ತಿಂಗಳು ತಾಜಾ ಮೀನಿಗೆ ಕೊರತೆ ಉಂಟಾಗಿ ಮಾಂಸ ಖಾದ್ಯ ಪ್ರಿಯರು ಮಾಂಸ ಇಲ್ಲವೆ ಶಿಥಲೀಕರಣ ಘಟಕದಲ್ಲಿ ದಾಸ್ತಾನಿಡುವ ಮೀನಿನ ಮೊರೆಹೊಗುತಿದ್ದರು. ಆಗೊಮ್ಮೆ ಈಗೊಮ್ಮೆ ಮಾರುಕಟ್ಟೆ ತಾಜಾ ಮೀನು ಬಂದರೂ ಕೈಸುಡುವಷ್ಟು ಹಣ ನೀಡಿ ತೆಗೆದುಕೊಳ್ಳಬೇಕಾದ ಸ್ಥಿತಿ ಇತ್ತು.

ಆದರೆ ಈ ವರ್ಷ ಮಳೆಗಾಲದಲ್ಲಿ ತಾಲ್ಲೂಕಿನಲ್ಲಿ ತಾಜಾ ಮೀನಿನ ಬರ ಕಾಣಿಸಿಕೊಂಡಿಲ್ಲ. ಕೆಲದಿನಗಳ ಹಿಂದೆ ಕಾಣಿಸಿಕೊಂಡ ಚಂಡಮಾರುತ ದಿನಗಳ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ತಾಜಾ ಮೀನುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದು ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ‘ಹವಾಮಾನ ಕೈಕೊಟ್ಟರೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದು. ಸಮುದ್ರದಲ್ಲಿ ಈ ಬಾರಿ ಬಿರುಗಾಳಿ ಅಷ್ಟಾಗಿ ಇಲ್ಲದ ಕಾರಣ ಪಾತಿದೋಣಿ ಮೀನುಗಾರಿಕೆ ಮೂಲಕ ಮೀನು ಹಿಡಿಯಲು ಅನುಕೂಲವಾಗಿದೆ’ ಎನ್ನುತ್ತಾರೆ ಸುರೇಶ ಮೊಗೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT