ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಪದ್ಧತಿಯ ಮತ್ಸ್ಯಾಕ್ಷಮ: ಮೀನುಗಾರಿಕೆಗೆ ಪ್ಲಾಸ್ಟಿಕ್ ಬಾಟಲಿಗಳ ರಾಶಿ!

Published 9 ಡಿಸೆಂಬರ್ 2023, 5:55 IST
Last Updated 9 ಡಿಸೆಂಬರ್ 2023, 5:55 IST
ಅಕ್ಷರ ಗಾತ್ರ

ಕಾರವಾರ: ತಮಿಳುನಾಡಿನ ಕೆಲ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಕೃತಕ ಗುಡ್ಡ ನಿರ್ಮಿಸಿ ಕಪ್ಪೆ ಬೊಂಡಾಸ್ (ಸ್ಕ್ವಿಡ್) ಮೀನುಗಳನ್ನು ಹಿಡಿಯುತ್ತಿದ್ದಾರೆ. ಪ್ರತಿ ದಿನ ಮೂರು ಕ್ವಿಂಟಲ್‌ ಖಾಲಿ ಪ್ಲಾಸ್ಟಿಕ್‌ ಬಾಟಲಿಗಳು ಸಮುದ್ರಕ್ಕೆ ಸೇರುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

‘ಬೆಳಕಿನ ಮೀನುಗಾರಿಕೆ ಮತ್ತು ಬುಲ್ ಟ್ರಾಲ್‍ (ಎರಡು ದೋಣಿಗಳನ್ನು ಸೇರಿಸಿ ಬಲೆ ಕಟ್ಟಿಕೊಂಡು ಮೀನಿನ ರಾಶಿ ಸೆರೆಹಿಡಿಯುವ ಪ್ರಕ್ರಿಯೆ) ನಡೆಸಿದ ಪರಿಣಾಮ ಮೀನಿನ ಕೊರತೆ ತಲೆದೋರಿದೆ. ಇನ್ನೊಂದು ಅವೈಜ್ಞಾನಿಕ ಮೀನುಗಾರಿಕೆ ಪದ್ಧತಿಯು ಮಾರಕವಾಗಬಹುದು’ ಎಂಬುದು ಸ್ಥಳೀಯ ಮೀನುಗಾರರ ಆತಂಕ.

‘ಕಾರವಾರದ ಅಲಿಗದ್ದಾ ಕಡಲತೀರದಿಂದ ನಿತ್ಯ ನಸುಕಿನ ಜಾವ ಹತ್ತಾರು ಡಬಲ್ ಎಂಜಿನ್ ದೋಣಿಗಳ ಮೂಲಕ ಮೂರು ಕ್ವಿಂಟಲ್‍ಗೂ ಹೆಚ್ಚು ತೂಕದ ಪ್ಲಾಸ್ಟಿಕ್ ಬಾಟಲಿಗಳನ್ನು ಅರಬ್ಬಿ ಸಮುದ್ರದ ಆಳ ಪ್ರದೇಶಕ್ಕೆ ಸಾಗಿಸಲಾಗುತ್ತಿದೆ’ ಎಂದು ಅಂದಾಜಿಸಲಾಗಿದೆ.

‘ಪ್ರತಿ ವರ್ಷ ಅಕ್ಟೋಬರ್ ನಂತರ ತಮಿಳುನಾಡಿನಿಂದ ಬರುವ ನೂರಾರು ಮೀನುಗಾರರು  ಗುಜರಿಯವರಿಂದ ರಾಶಿಗಟ್ಟಲೆ ಪ್ಲಾಸ್ಟಿಕ್ ಬಾಟ್ಲಿಗಳನ್ನು ಖರೀದಿಸುತ್ತಾರೆ. ಬೈತಕೋಲದಿಂದ ಸ್ವಲ್ಪ ದೂರದಲ್ಲಿರುವ ಲೇಡೀಸ್ ಬೀಚ್‍ನಿಂದ ನೂರಾರು ಚೀಲ ಮರಳನ್ನೂ ಸಾಗಿಸುತ್ತಾರೆ. ತೀರದಿಂದ 10 ರಿಂದ 15 ನಾಟಿಕಲ್ ಮೈಲಿ ದೂರದಲ್ಲಿ ಜಿಪಿಎಸ್ ಕೇಂದ್ರ ಗುರುತಿಸಿ ಅಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಯ ರಾಶಿಗೆ ಮರಳಿನ ಚೀಲ ಕಟ್ಟಿ ನೀರಿಗೆ ಬಿಡುತ್ತಾರೆ. ಅವುಗಳಿಗೆ ಗಾಳಿಮರದ ಟೊಂಗೆ ಕಟ್ಟಿ ಕೃತಕ ಗುಡ್ಡ ಸೃಷ್ಟಿಸುತ್ತಾರೆ’ ಎಂದು ಸ್ಥಳೀಯ ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘10 ರಿಂದ 15 ದಿನದ ಅವಧಿಯಲ್ಲಿ ಕೃತಕ ಗುಡ್ಡ ಸೃಷ್ಟಿಸಿದ ಜಾಗಕ್ಕೆ ತೆರಳಿ ರೇಡಿಯಂ ಗಾಳದ ಮೂಲಕ ಕಪ್ಪೆ ಬೊಂಡಾಸ್ ಮೀನುಗಳನ್ನು ಹಿಡಿದು ತರುತ್ತಾರೆ. ಒಂದೇ ಬಾರಿಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಸಿಗುತ್ತವೆ ಎಂಬ ಕಾರಣಕ್ಕೆ ಈ ಪ್ರಕ್ರಿಯೆ ನಡೆಸುತ್ತಾರೆ’ ಎಂದರು.

‘ಖಾಲಿ ಪ್ಲಾಸ್ಟಿಕ್ ಬಾಟಲಿ ಮತ್ತು ಮರಳಿನ ಚೀಲವುಳ್ಳ ಕೃತಕ ಗುಡ್ಡದ ಜಾಗದಲ್ಲಿ ಕಪ್ಪೆಬೊಂಡಾಸ್ ಮೀನುಗಳು ಮೊಟ್ಟೆಗಳನ್ನು ಇಡುತ್ತವೆ. ಮೀನುಗಳನ್ನು ಹಿಡಿಯುವಾಗ ಮೊಟ್ಟೆಗಳಿಗೆ ಹಾನಿಯಾಗುತ್ತದೆ. ನಂತರ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀರಿನಲ್ಲೇ ಬಿಟ್ಟು ಬರುವುದರಿಂದ ಅವು ಸಮುದ್ರದಲ್ಲೇ ತೇಲುತ್ತ ಜಲಚರಗಳ ಜೀವನದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ. ಮಾಲಿನ್ಯಕ್ಕೂ ಕಾರಣವಾಗುತ್ತವೆ’ ಎಂದು  ಕಡಲಜೀವಶಾಸ್ತ್ರಜ್ಞ ಶಿವಕುಮಾರ ಹರಗಿ ತಿಳಿಸಿದರು.

ಕಪ್ಪೆ ಬೊಂಡಾಸ್ ಹಿಡಿಯಲು ಆಳಸಮುದ್ರಕ್ಕೆ ತಮಿಳುನಾಡು ಮೂಲದ ಮೀನುಗಾರರು ಒಯ್ಯುವ ಬೋಟುಗಳು (ಮೊದಲ ಸಾಲಿನಲ್ಲಿ ಇರುವವು) ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಲಾಗಿತ್ತು.
ಕಪ್ಪೆ ಬೊಂಡಾಸ್ ಹಿಡಿಯಲು ಆಳಸಮುದ್ರಕ್ಕೆ ತಮಿಳುನಾಡು ಮೂಲದ ಮೀನುಗಾರರು ಒಯ್ಯುವ ಬೋಟುಗಳು (ಮೊದಲ ಸಾಲಿನಲ್ಲಿ ಇರುವವು) ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಲಾಗಿತ್ತು.
ಕಪ್ಪೆ ಬೊಂಡಾಸ್ ಮೀನುಗಳನ್ನು ಹಿಡಿಯಲು ಅವೈಜ್ಞಾನಿಕ ಪದ್ಧತಿ ಅನುಸರಿಸುತ್ತಿರವ ಬಗ್ಗೆ ಪರಿಶೀಲಿಸಲಾಗುವುದು. ಪ್ಲಾಸ್ಟಿಕ್‍ ವಸ್ತುಗಳು ಸಮುದ್ರದ ಒಳಗೆ ಸೇರದಂತೆ ತಡೆಯಲು ಜಾಗೃತಿ ಮೂಡಿಸುತ್ತೇವೆ.
ಬಿಪಿನ್ ಬೋಪಣ್ಣ ಜಂಟಿ ನಿರ್ದೇಶಕ ಮೀನುಗಾರಿಕೆ ಇಲಾಖೆ
‘ಪ್ರಕರಣ ದಾಖಲಿಸದಂತೆ ಪ್ರಭಾವ’
‘ತಮಿಳುನಾಡಿ ಮೀನುಗಾರರು ಅಪಾಯ ಮೀರಿ ಆಳಸಮುದ್ರಕ್ಕೆ ತೆರಳಿ ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿರುವುದು ಗಮನದಲ್ಲಿದೆ. ಅವರೊಟ್ಟಿಗೆ ಸ್ಥಳೀಯ ಕೆಲವರು ಶಾಮೀಲಾಗಿರುವ ಬಗ್ಗೆ ದೂರುಗಳಿವೆ. ಈ ಹಿಂದೆಯೂ ಎರಡು ಬಾರಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳ ಮೂಟೆಗಳನ್ನು ಸಾಗಿಸುತ್ತಿದ್ದ  ದೋಣಿಗಳನ್ನು ವಶಕ್ಕೆ ಪಡೆದಿದ್ದೆವು.  ಆದರೆ ಪ್ರಕರಣ ದಾಖಲಿಸದಂತೆ ರಾಜಕೀಯ ಒತ್ತಡ ಬಂತು’ ಎಂದು ಮೀನುಗಾರಿಕೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT