ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಟಾ | ಅವೈಜ್ಞಾನಿಕ ಪೈಪ್‌ಲೈನ್ ಅಳವಡಿಕೆ: ಸಾರ್ವಜನಿಕರ ಆಕ್ಷೇಪ

Published 28 ಏಪ್ರಿಲ್ 2024, 15:23 IST
Last Updated 28 ಏಪ್ರಿಲ್ 2024, 15:23 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ 11 ಗ್ರಾಮ ಪಂಚಾಯಿತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಅಳವಡಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ರಸ್ತೆ ಬದಿ ಚರಂಡಿ ಮುಚ್ಚಿ ಹಾಕಿ ಮಳೆ ನೀರು ಹರಿಯದಂತೆ ಮಾಡಿರುವುದಕ್ಕೆ ಹಲವೆಡೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ತಾಲ್ಲೂಕಿನ ಬೊಗರಿಬೈಲ ಗ್ರಾಮದಲ್ಲಿ ಲೋಕೋಪಯೋಗಿ ರಸ್ತೆಯ ಒಂದು ಬದಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಚರಂಡಿ ಅಗೆದು ನಂತರ ಮಣ್ಣು ಹಾಕಿ ಮುಚ್ಚಿದ್ದಾರೆ. ಮಳೆ ಬಂದಾಗ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ಅಕ್ಕಪಕ್ಕದ ತೋಟಗಳಿಗೆ ನುಗ್ಗಿ ಹಾನಿಯಾಗಿದೆ. ಚರಂಡಿ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಗ್ರಾಮದ ಕೃಷಿಕರಾದ ಜಯಂತ ನಾಯ್ಕ, ಸತ್ಯನಾರಾಯಣ ನಾಯ್ಕ ದೂರಿದರು.

‘ಪೈಪ್‌ಲೈನ್ ಅಳವಡಿಸಲು ಇಲಾಖೆಯ ಚರಂಡಿ ಅಗೆದು ಹಾಗೇ ಮಣ್ಣು ತುಂಬಿದ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ನೋಟೀಸು ನೀಡಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಲೋಕೋಪಯೋಗಿ ಇಲಾಖೆ ಅನುಮತಿ ಪಡೆದು, ಚರಂಡಿ ಅಗೆಯುವ ಅಗತ್ಯ ಶುಲ್ಕ ಮುಂಚಿತವಾಗಿ ಪಾವತಿ ಮಾಡುವಂತೆ ತಿಳಿಸಲಾಗಿತ್ತು. ಆದರೆ ಅನುಮತಿ ಪಡೆಯದೆ ತಾಲ್ಲೂಕಿನ ವಿವಿಧ 13 ರಸ್ತೆಗಳ ಚರಂಡಿಯಲ್ಲಿ ಪೈಪ್‌ಲೈನ್ ಅಳವಡಿಸಿ ಹಾಗೇ ಬಿಟ್ಟಿದ್ದರಿಂದ ಈಚೆಗೆ ಸುರಿದ ಬಿರುಸಿನ ಮಳೆಗೆ ಚರಂಡಿ ಮಣ್ಣು ರಸ್ತೆಯಲ್ಲಿ ಬಂದು ಬಿದ್ದು ಸಂಚಾರಕ್ಕೂ ತೊಂದರೆಯಾಗಿದೆ. ಈಗ ಚರಂಡಿಯನ್ನು ಮೊದಲು ಇದ್ದ ಸ್ಥಿತಿಯಲ್ಲಿ ನಿರ್ಮಾಣ ಮಾಡಿಕೊಡಲು ಸೂಚಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪಿ. ನಾಯ್ಕ ಮಾಹಿತಿ ನೀಡಿದರು.

ನೀರು ಸರಬರಾಜು ಯೋಜನೆಯ ಕಾಮಗಾರಿ ಉಸ್ತುವಾರಿ ಎಂಜಿನಿಯರ್ ರಾಘವೇಂದ್ರ ನಾಯ್ಕ, ಚರಂಡಿ ದುರಸ್ತಿ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT