ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುವೆ: ಕಾಗೇರಿ

Published 13 ಡಿಸೆಂಬರ್ 2023, 12:51 IST
Last Updated 13 ಡಿಸೆಂಬರ್ 2023, 12:51 IST
ಅಕ್ಷರ ಗಾತ್ರ

ಮುಂಡಗೋಡ: ‘ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನು ವರಿಷ್ಠರು ನಿರ್ಧರಿಸಲಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿ ಬಿಜೆಪಿ ಗೆಲ್ಲಿಸಲು ಶ್ರಮಿಸುತ್ತೇವೆ. ನನಗೆ ಪಕ್ಷವು ಶಿಕ್ಷಣ ಮಂತ್ರಿ, ಸಭಾಧ್ಯಕ್ಷ, ಶಾಸಕನನ್ನಾಗಿ ಮಾಡಿದೆ. ಪಕ್ಷದಲ್ಲಿ ಎಲ್ಲ ಜವಾಬ್ದಾರಿ ಹಾಗೂ ಸಾಕಷ್ಟು ಅವಕಾಶಗಳನ್ನು ನೀಡಿದೆ. ಪಕ್ಷವು ಮುಂದೆ ಯಾವ ಜವಾಬ್ದಾರಿ ನೀಡುತ್ತದೆಯೋ ಅದನ್ನು ನಿಭಾಯಿಸುತ್ತೇನೆ’ ಎಂದು ವಿಧಾನಸಭೆಯ ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ಬಿಜೆಪಿ ಮುಖಂಡರ ಜೊತೆ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೆನರಾ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಕುರಿತು ಪ್ರಶ್ನಿಸಿದಾಗ, ಬಿಜೆಪಿ ಕಮಲದ ಹೂವು ನಮ್ಮ ಅಭ್ಯರ್ಥಿ. ಕಮಲದ ಗೆಲುವಿಗೆ ಕಾರ್ಯಕರ್ತರು ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ವ್ಯಕ್ತಿ ಯಾರು ಎನ್ನುವುದನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಪಕ್ಷದ ವರಿಷ್ಠರು ನಿರ್ಧರಿಸಿದ ವ್ಯಕ್ತಿಯನ್ನು ಗೆಲ್ಲಿಸಲು ನಾವೆಲ್ಲರೂ ಒಟ್ಟಾಗಿ ದುಡಿಯುತ್ತೇವೆ’ ಎಂದರು.

ಭಾರತಕ್ಕೆ ಪ್ರಧಾನಿ ಮೋದಿ ಅವರ ನಾಯಕತ್ವದ ಅಗತ್ಯವಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಅವರು ಮಾಡಿರುವ ಸಾಧನೆ, ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಮತ್ತಷ್ಟು ಪ್ರೇರಣೆ ನೀಡುತ್ತಿದೆ. ಕಳೆದ ಆರು ತಿಂಗಳಿಂದ ರಾಜ್ಯ ಸರ್ಕಾರದ ಬಗ್ಗೆ ಜನರಲ್ಲಿ ಭ್ರಮನಿರಸವಾಗಿದೆ. ಯಾಕಾದರೂ ಈ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಜನರು ಪಶ್ಚಾತ್ತಾಪ ಪಡುವಂತ ಪರಿಸ್ಥಿತಿಯನ್ನು ಕಾಣಬಹುದಾಗಿದೆ. ದಿನದಿಂದ ದಿನಕ್ಕೆ ಬಿಜೆಪಿಯ ಬಗ್ಗೆ ಭರವಸೆ ಹೆಚ್ಚಾಗುತ್ತಿದೆ. ನಾವೇ ಒಳ್ಳೆಯದು ಮಾಡುತ್ತೇವೆ ಎಂಬ ನಂಬಿಕೆ ಸಹ ಹೆಚ್ಚಾಗುತ್ತಿದೆ. ಹಿಂದೆಯೂ ಅತ್ಯುತ್ತಮವಾದ ಆಡಳಿತ ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ ಎಂದರು.

ಶಿರಸಿ ಪ್ರತ್ಯೇಕ ಜಿಲ್ಲೆಯ ಕುರಿತು, ಸರ್ಕಾರದಲ್ಲಿ ಈ ಬಗ್ಗೆ ಪ್ರಸ್ತಾವ ಇದೆ. ಜಿಲ್ಲೆಯ ಜನರ ಧ್ವನಿಯನ್ನು ಆಧರಿಸಿ, ಸರ್ಕಾರಗಳು ನಿರ್ಣಯ ಕೈಗೊಳ್ಳುತ್ತವೆ. ಆಡಳಿತಾತ್ಮಕವು ಚಿಕ್ಕದಾದಷ್ಟು ಹೆಚ್ಚು ಪ್ರಭಾವಿಯಾಗಿ ಕೆಲಸ ಮಾಡಬಹುದು. ಅಲ್ಲದೇ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಹುದು ಎಂಬ ವಿಶ್ವಾಸ ಎಲ್ಲರಲ್ಲಿದೆ. ಸಣ್ಣ ರಾಜ್ಯ, ಸಣ್ಣ ಜಿಲ್ಲೆ ಇಂತಹ ಕಲ್ಪನೆಗಳಲ್ಲಿ ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡುತ್ತದೆ. ಈ ವಿಚಾರದಲ್ಲಿ ಜಿಲ್ಲೆಯ ಜನರ ಅಭಿಪ್ರಾಯಗಳು ಬಹಳ ಮುಖ್ಯವಾಗಿರುತ್ತವೆ ಎಂದರು.

ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್‌.ಟಿ.ಪಾಟೀಲ ಮಾತನಾಡಿ, ‘ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರು ಈ ಸಲವೂ ಸ್ಪರ್ಧಿಸಬೇಕು ಎಂಬ ಒತ್ತಡ ಸಾಕಷ್ಟಿದೆ. ದೇಶದಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವ ಛಾಯೆ ಎದ್ದು ಕಾಣುತ್ತಿದೆ. ಈ ಕಾರಣದಿಂದ ಸಂಸದ ಅನಂತಕುಮಾರ ಹೆಗಡೆ ಅವರೇ, ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಲಿ ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅವರು ಸ್ಪರ್ಧಿಸಲು ನಿರಾಕರಿಸಿದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲೋಕಸಭಾ ಅಭ್ಯರ್ಥಿಯಾದರೆ ಸ್ವಾಗತಿಸಲಾಗುವುದು. ಕಾಗೇರಿ ಅವರು ಪಕ್ಷದ ಹಿರಿಯ ಮುತ್ಸದಿಯಾಗಿದ್ದು, ಸ್ಪೀಕರ್‌ ಆಗಿ ಕೆಲಸ ಮಾಡಿದ್ದಾರೆ’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಗುರು ಕಾಮತ್, ರಾಜೇಶ ರಾವ್‌, ಬಿ.ಎಂ. ರಾಯ್ಕರ, ಮಂಜುನಾಥ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT