ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ‘ಐಎನ್ಎಸ್ ಚಪಲ್’ಗೆ ಹೊಸ ಮೆರಗು

ತುಕ್ಕು ಹಿಡಿದ ನೌಕೆಯ ದುರಸ್ತಿ ಕಾರ್ಯ ಪೂರ್ಣ: ವೀಕ್ಷಣೆಗೆ ಸಿಗುತ್ತಿಲ್ಲ ಅವಕಾಶ
Published 14 ಮೇ 2024, 4:30 IST
Last Updated 14 ಮೇ 2024, 4:30 IST
ಅಕ್ಷರ ಗಾತ್ರ

ಕಾರವಾರ: ತುಕ್ಕು ಹಿಡಿದು ಪ್ರವಾಸಿಗರ ಕಣ್ಮನ ಸೆಳೆಯಲಾಗದ ಸ್ಥಿತಿಗೆ ತಲುಪಿದ್ದ ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯ ಈಗ ಹೊಸ ಮೆರಗು ಪಡೆದುಕೊಂಡಿದೆ. ಆದರೂ, ಪ್ರವಾಸಿಗರ ವೀಕ್ಷಣೆಗೆ ಇನ್ನೂ ಮುಕ್ತಗೊಂಡಿಲ್ಲದ ಕೊರಗು ಕಾಡುತ್ತಿದೆ.

ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ನೆಲೆನಿಂತಿರುವ ಭಾರತೀಯ ನೌಕಾಪಡೆಯ ವಿಶ್ರಾಂತ ಯುದ್ಧನೌಕೆ ಐ.ಎನ್.ಎಸ್ ಚಪಲ್ 2006 ರಿಂದಲೂ ಪ್ರವಾಸಿಗರನ್ನು ಸೆಳೆಯುವ ತಾಣವಾಗಿ ಮಾರ್ಪಟ್ಟಿದೆ. ಮಳೆ, ಗಾಳಿಗೆ ತುತ್ತಾಗಿ ಯುದ್ಧನೌಕೆ ವಸ್ತು ಸಂಗ್ರಹಾಲಯದ ಮೇಲ್ಭಾಗದ ನೆಲಹಾಸು (ಡೆಕ್) ಸೇರಿದಂತೆ ಬಹುತೇಕ ಉಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದವು.

ಈಚೆಗಷ್ಟೆ ಜಿಲ್ಲಾಡಳಿತವು ಸುಮಾರು ₹68 ಲಕ್ಷ ವೆಚ್ಚದಲ್ಲಿ ವಸ್ತು ಸಂಗ್ರಹಾಲಯವನ್ನು ದುರಸ್ತಿಪಡಿಸುವ ಕೆಲಸ ನಡೆಸಿತ್ತು. ಅಮೂಸ್ ಮರೈನ್ ಸರ್ವೀಸ್ ಎಂಬ ಖಾಸಗಿ ಕಂಪನಿಗೆ ದುರಸ್ತಿ ಕೆಲಸದ ಗುತ್ತಿಗೆ ನೀಡಲಾಗಿತ್ತು. ಎರಡು ತಿಂಗಳು ದುರಸ್ತಿ ಕೆಲಸ ನಡೆಸಿದ ಕಂಪನಿಯು ವಸ್ತುಸಂಗ್ರಹಾಲಯದ ಡೆಕ್ ಬದಲಿಸಿ ಹೊಸ ಡೆಕ್ (ನೌಕೆಯ ಮೇಲ್ಭಾಗದ ನೆಲಹಾಸು) ಅಳವಡಿಸಿದೆ. ಜತೆಗೆ ತುಕ್ಕು ಹಿಡಿದ ಭಾಗಗಳಿಗೆ ರಾಸಾಯನಿಕ ಬಳಸಿ ತುಕ್ಕು ತೆರವುಗೊಳಿಸಿದೆ. ಇಡೀ ನೌಕೆಗೆ ಬಣ್ಣ ಬಳಿಯಲಾಗಿದೆ.

‘2005ರಲ್ಲಿ ನೌಕಾದಳದಿಂದ ನೌಕೆ ನಿವೃತ್ತಿಯಾದ ಬಳಿಕ ಅದನ್ನು ಕಾರವಾರಕ್ಕೆ ತಂದಿದ್ದ ವೇಳೆ ಕೆಲ ಭಾಗಗಳನ್ನು ಬದಲಿಸಿ ದುರಸ್ತಿಪಡಿಸಲಾಗಿತ್ತು. ಅದಾದ ಬಳಿಕ ಸಂಪೂರ್ಣ ನೌಕೆಯ ದುರಸ್ತಿ ಕಾರ್ಯ ನಡೆದಿರಲಿಲ್ಲ. ಮಳೆ ನೀರಿನಿಂದ ಸೋರಿಕೆಯಾಗುತ್ತಿದ್ದ ವೇಳೆ ನೌಕಾದಳದವರು ಕೆಲ ಸಣ್ಣ ಪುಟ್ಟ ದುರಸ್ತಿ ಕೆಲಸ ನಡೆಸುತ್ತಿದ್ದರು. 17 ವರ್ಷದ ಬಳಿಕ ಸಂಪೂರ್ಣ ದುರಸ್ತಿ ಕೆಲಸ ನಡೆಸಲಾಗಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೊಸ ಮೆರಗಿನೊಂದಿಗೆ ಐ.ಎನ್.ಎಸ್ ಚಪಲ್ ಆಕರ್ಷಿಸುತ್ತಿದ್ದರೂ ಅದನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿಲ್ಲ. ಸದ್ಯ ಪ್ರವಾಸಿ ಸೀಸನ್ ಕೂಡ ಆಗಿರುವುದರಿಂದ ನೂರಾರು ಪ್ರವಾಸಿಗರು ವಸ್ತು ಸಂಗ್ರಹಾಲಯ ವೀಕ್ಷಣೆಗೆ ಬಂದು ನೌಕೆ ವೀಕ್ಷಿಸಲಾಗದೆ ಬೇಸರದಿಂದ ಮರಳುತ್ತಿದ್ದಾರೆ.

ಯುದ್ಧನೌಕೆ ವಸ್ತು ಸಂಗ್ರಹಾಲಯದ ದುರಸ್ತಿ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣ ಕೆಲಸವಾದ ಬಳಿಕ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು.
ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ
ದುರಸ್ತಿಗೆ ಮೊದಲು ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಮೇಲ್ಭಾಗದ ನೆಲಹಾಸು (ಡೆಕ್) ತುಕ್ಕು ಹಿಡಿದ ಸ್ಥಿತಿಯಲ್ಲಿತ್ತು
ದುರಸ್ತಿಗೆ ಮೊದಲು ಐ.ಎನ್.ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದ ಮೇಲ್ಭಾಗದ ನೆಲಹಾಸು (ಡೆಕ್) ತುಕ್ಕು ಹಿಡಿದ ಸ್ಥಿತಿಯಲ್ಲಿತ್ತು
ಸಂಪೂರ್ಣ ದುರಸ್ತಿಗೊಂಡು ಹೊಸದಾಗಿ ಬಣ್ಣ ಬಳಿದ ನಂತರ ಕಂಗೊಳಿಸುತ್ತಿರುವ ಐ.ಎನ್.ಎಸ್ ಚಪಲ್ ಯುದ್ಧನೌಕೆ
ಸಂಪೂರ್ಣ ದುರಸ್ತಿಗೊಂಡು ಹೊಸದಾಗಿ ಬಣ್ಣ ಬಳಿದ ನಂತರ ಕಂಗೊಳಿಸುತ್ತಿರುವ ಐ.ಎನ್.ಎಸ್ ಚಪಲ್ ಯುದ್ಧನೌಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT