ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ನೀರಿನ ತೀವ್ರ ಕೊರತೆ: 310 ಹಳ್ಳಿಗಳ ಕಾಡಲಿದೆ ಬೇಸಿಗೆ!

Published 19 ಜನವರಿ 2024, 6:16 IST
Last Updated 19 ಜನವರಿ 2024, 6:16 IST
ಅಕ್ಷರ ಗಾತ್ರ

ಕಾರವಾರ: ಮುಂಗಾರು ಮಳೆಯ ಕೊರತೆಯ ಪರಿಣಾಮ ಬಹುತೇಕ ಜಲಮೂಲಗಳಲ್ಲಿ ನೀರಿನ ಹರಿವು ಕುಸಿದಿದೆ. ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ನೀರಿನ ಕೊರತೆ ಗಂಭೀರವಾಗಲು ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಕೆಲವು ದಿನಗಳ ಹಿಂದೆ ಸಮೀಕ್ಷೆ ನಡೆಸಿದ್ದು, ಏಪ್ರಿಲ್ ಆರಂಭದ ಹೊತ್ತಿಗೆ ಜಿಲ್ಲೆಯ 109 ಗ್ರಾಮ ಪಂಚಾಯ್ತಿಗಳ 310 ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಬಹುದಾದ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.

ಮಲೆನಾಡು ಪ್ರದೇಶವಾದ ಸಿದ್ದಾಪುರ ತಾಲ್ಲೂಕಿನಲ್ಲೇ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿರುವುದಾಗಿ ಅಂದಾಜಿಸಿದ್ದು ಅಲ್ಲಿನ 17 ಗ್ರಾಮ ಪಂಚಾಯ್ತಿಗಳ 72 ಹಳ್ಳಿಗಳು ನೀರಿನ ಕೊರತೆ ಎದುರಿಸಲಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಅದರನ್ವಯ ಹಳಿಯಾಳದ 51, ಭಟ್ಕಳದ 50, ಶಿರಸಿಯ 28, ಕುಮಟಾದ 27, ಅಂಕೋಲಾ ಹಾಗೂ ಮುಂಡಗೋಡದ ತಲಾ 22, ಕಾರವಾರದ 15, ಜೊಯಿಡಾದ 9, ಹೊನ್ನಾವರದ 8, ಯಲ್ಲಾಪುರದ 6 ಹಳ್ಳಿಗಳಿಗೆ ನೀರಿನ ತೊಡಕು ಎದುರಾಗುವ ಸಾಧ್ಯತೆ ಇದೆ.

‘ಮುಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಮಳೆ ಬೀಳದ ಪರಿಣಾಮ ಅಂತರ್ಜಲ ಮಟ್ಟ ಸುಧಾರಿಸಿಕೊಂಡಿಲ್ಲ. ಜಲಾಶಯಗಳಲ್ಲಿಯೂ ನೀರಿನ ಪ್ರಮಾಣ ಕುಸಿದಿದೆ. ಪ್ರಮುಖ ನದಿಗಳಲ್ಲಿಯೂ ನೀರಿನ ಹರಿವಿನ ಮಟ್ಟ ಕಡಿಮೆಯಾಗಿದೆ. ಮಾರ್ಚ್ ಬಳಿಕ ನೀರಿನ ಕೊರತೆ ಎದುರಿಸುತ್ತಿದ್ದ ಕಾರವಾರ ತಾಲ್ಲೂಕಿನ ಹಳ್ಳಿಗಳಲ್ಲಿಯೂ ಈಗಲೆ ನೀರಿನ ತೊಂದರೆ ಎದುರಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‌ಯೊಬ್ಬರು ಹೇಳಿದರು.

‘ಅಂತರ್ಜಲದ ಸರಾಸರಿ ಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಜಿಲ್ಲೆಯಲ್ಲಿ 6.5 ಮೀ.ಗೂ ಆಳಕ್ಕೆ ಈ ಮಟ್ಟವು ಕುಸಿತವಾಗಿದೆ. ಇದರಿಂದ ನೀರಿನ ಕೊರತೆ ಸಮಸ್ಯೆ ಗಂಭೀರವಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

‘ಜಿಲ್ಲೆಯ ಮುಂಡಗೋಡಿನ ಮೈನಳ್ಳಿ ಗ್ರಾಮದಲ್ಲಿ ಸದ್ಯ ನೀರಿನ ಕೊರತೆ ಎದುರಾಗಿದೆ. ಕೊಳವೆಬಾವಿ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳಿಗೊಮ್ಮೆ ನೀರಿನ ಮಟ್ಟದ ಸಮೀಕ್ಷೆ ನಡೆಸಲಾಗುತ್ತಿದ್ದು ಎಲ್ಲೆಲ್ಲಿ ಗಂಭೀರ ಸಮಸ್ಯೆ ಎದುರಾಗಬಹುದು ಎಂಬುದನ್ನು ಪಟ್ಟಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೀವ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಿದ್ದಾಪುರದಲ್ಲಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆ 6.5 ಮೀ.ಗೂ ಆಳಕ್ಕೆ ಕುಸಿತ ಅಂತರ್ಜಲ ಮಟ್ಟ ಮೈನಳ್ಳಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು
ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು ಅಲ್ಲಿ ನೀರಿಗೆ ಪರ್ಯಾಯ ಜಲಮೂಲಗಳನ್ನು ಗುರುತಿಸಿಕೊಳ್ಳುವ ಕೆಲಸ ನಡೆಯುತ್ತಿದೆ
ರಾಜೀವ ನಾಯ್ಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT