ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಕಾಲೇಜು ಕಟ್ಟಡ ಅರ್ಧಕ್ಕೆ ಸ್ಥಗಿತ?

ನಾಲ್ಕು ತಿಂಗಳ ಹಿಂದೆ ನಿಂತಿರುವ ಕಾಮಗಾರಿ: ಗೋಡೆ ನಿರ್ಮಾಣವೂ ಇಲ್ಲ
Published 25 ಆಗಸ್ಟ್ 2024, 4:46 IST
Last Updated 25 ಆಗಸ್ಟ್ 2024, 4:46 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಕನಸು ಈಡೇರುವುದು ಅನುಮಾನವಿದೆ. ಕಟ್ಟಡ ಕಾಮಗಾರಿ ಸ್ಥಗಿತಗೊಂಡು ನಾಲ್ಕು ತಿಂಗಳು ಕಳೆದಿರುವುದು ಇದಕ್ಕೆ ಕಾರಣ.

ರಾಷ್ಟ್ರೀಯ ಹೆದ್ದಾರಿ–66ರ ಅಂಚಿನಲ್ಲಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿ ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡುವ ಕಾಮಗಾರಿಯನ್ನು 2023ರ ಮಾರ್ಚ್‍ನಿಂದ ಲೋಕೋಪಯೋಗಿ ಇಲಾಖೆ ಆರಂಭಿಸಿತ್ತು. ಹಲವು ಬಾರಿ ಸ್ಥಗಿತಗೊಂಡಿದ್ದ ಕೆಲಸವು, ಕಳೆದ ಏಪ್ರಿಲ್ ತಿಂಗಳಿನ ವೇಳೆಗೆ ನೆಲಮಹಡಿಯ ಪಿಲ್ಲರ್ ಮತ್ತು ಸ್ಲ್ಯಾಬ್ ಹಂತಕ್ಕೆ ತಲುಪಿದ ಬಳಿಕ ಕೆಲಸ ಮತ್ತೆ ಸ್ಥಗಿತವಾಗಿದೆ.

‘ಮೇ ತಿಂಗಳ ಬಳಿಕ ಕಟ್ಟಡ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಕಾಮಗಾರಿ ಮುಂದುವರೆಯುವ ಬಗ್ಗೆ ಶಂಕೆ ಮೂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಕಾಮಗಾರಿಗಳನ್ನು ತಾಂತ್ರಿಕ ಕಾರಣಗಳ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ. ಅದೇ ಸಾಲಿಗೆ ಮಹಿಳಾ ಕಾಲೇಜು ಕಟ್ಟಡ ಕಾಮಗಾರಿ ಸೇರಿರಬಹುದು ಎಂಬ ಆತಂಕವೂ ಇದೆ’ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯರೊಬ್ಬರು.

‘2023–24ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಲೇಜು ಕಟ್ಟಡ ನಿರ್ಮಾಣಕ್ಕೆ ₹3 ಕೋಟಿ ಅನುದಾನ ಮಂಜೂರಾಗಿತ್ತು. ಅದಕ್ಕೂ ಕೆಲ ತಿಂಗಳು ಮೊದಲು ಕರ್ನಾಟಕ ಗೃಹ ಮಂಡಳಿಯಿಂದ (ಕೆ.ಎಚ್.ಬಿ) ₹3.30 ಕೋಟಿ ಮಂಜೂರಾಗಿತ್ತು. ಲೋಕೋಪಯೋಗಿ ಇಲಾಖೆ ಐದು ಕೊಠಡಿಗಳನ್ನು ನಿರ್ಮಿಸುವ ಕೆಲಸ ಆರಂಭಿಸಿ ವರ್ಷ ಕಳೆದಿದೆ. ಇದುವರೆಗೂ ಗೋಡೆಯನ್ನೂ ಕಟ್ಟಿಲ್ಲ. ಗೃಹ ಮಂಡಳಿ ಅನುದಾನ ಮಂಜೂರಾದರೂ ಕೆಲಸ ಆರಂಭಿಸಿಲ್ಲ. ಜಿಲ್ಲೆಯ ಏಕೈಕ ಮಹಿಳಾ ಕಾಲೇಜು ಹತ್ತು ವರ್ಷ ಕಳೆದರೂ ಬಾಡಿಗೆ ಕಟ್ಟಡದಲ್ಲಿ ನಡೆಯಬೇಕಾದ ಸ್ಥಿತಿ ಈ ವರ್ಷವೂ ಮುಂದುವರೆಯಬೇಕಾಗಿದೆ’ ಎಂದು ದೂರಿದರು.

‘ಕಾಲೇಜಿಗೆ ಐದು ಕೊಠಡಿಯನ್ನು ಮೊದಲ ಹಂತದಲ್ಲಿ ನಿರ್ಮಿಸುವ ಕೆಲಸ ನಡೆದಿದೆ. ನಿರೀಕ್ಷೆಯಂತೆ ಕಾಮಗಾರಿ ನಡೆದದ್ದರೆ ಈ ಶೈಕ್ಷಣಿಕ ವರ್ಷದ ಆರಂಭದಲ್ಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಯೋಚನೆ ಇತ್ತು. ಆದರೆ, ಕಟ್ಟಡ ನಿರ್ಮಾಣ ಪೂರ್ಣಗೊಂಡಿಲ್ಲ. ತ್ವರಿತವಾಗಿ ಪೂರ್ಣಗೊಳಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಪ್ರಾಚಾರ್ಯ ವಿ.ಎಂ.ನಾಯ್ಕ ತಿಳಿಸಿದರು.

ಕಟ್ಟಡದ ಸ್ಲ್ಯಾಬ್ ಪಿಲ್ಲರ್ ಹಂತ ಮುಗಿದಿದೆ. ಕ್ರಿಯಾಯೋಜನೆ ಪ್ರಕಾರ ಇಟ್ಟಿಗೆಯಿಂದ ಗೋಡೆ ನಿರ್ಮಿಸಬೇಕಿದೆ. ಇದಕ್ಕಾಗಿ ಸಮಯ ತಗುಲಿದೆ. ಇನ್ನೊಂದು ವಾರದೊಳಗೆ ಕೆಲಸ ಆರಂಭಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಲಾಗಿದೆ
- ರಾಮು ಅರ್ಗೇಕರ್ ಲೋಕೋಪಯೋಗಿ ಇಲಾಖೆ ಎಇಇ

ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವ!

ಕಾಲೇಜುಕಟ್ಟಡ ಕಾಮಗಾರಿಯ ಈ ಹಿಂದಿನ ಕ್ರಿಯಾಯೋಜನೆ ಆಧರಿಸಿ ಮುಂದುವರೆಸಲು ಸದ್ಯ ಬಿಡುಗಡೆಯಾದ ಅನುದಾನ ಸಾಲುತ್ತಿಲ್ಲ. ಇದಕ್ಕಾಗಿ ಹೆಚ್ಚುವರಿ ಅನುದಾನದ ಅಗತ್ಯವಿದೆ. ಹೊಸ ಪ್ರಸ್ತಾವ ಸಿದ್ಧಪಡಿಸಿ ಇಲಾಖೆಗೆ ಕಳುಹಿಸಲಾಗುತ್ತಿದೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ರಾಮು ಅರ್ಗೇಕರ್ ತಿಳಿಸಿದರು. ‘ಕಟ್ಟಡ ಕಾಮಗಾರಿಗೆ ಕಳೆದ ವರ್ಷವಷ್ಟೆ ₹3 ಕೋಟಿ ಮಂಜೂರಾಗಿದೆ. ಅದರಲ್ಲಿ ಅಡಿಪಾಯ ಅಂದಾಜು 20 ರಿಂದ 25 ಕಾಂಕ್ರೀಟ್ ಕಂಬಗಳು ಸ್ಲ್ಯಾಬ್ ಮಾತ್ರ ಪೂರ್ಣಗೊಂಡಿದೆ. ಗೋಡೆ ಕಿಟಕಿ ಸೇರಿದಂತೆ ಯಾವುದೇ ಕೆಲಸ ನಡೆದಿಲ್ಲ. ಆದರೂ ಅನುದಾನ ಸಾಲದು ಎಂದು ಲೋಕೋಪಯೋಗಿ ಇಲಾಖೆ ಹೇಳುತ್ತಿದೆ. ಹಿಂದಿನ ಸರ್ಕಾರದ ಅವಧಿಯ ಕೆಲಸ ಸ್ಥಗಿತಗೊಳಿಸಲು ಈಗಿನ ಸರ್ಕಾರ ಇಂತಹ ನೆಪ ಹುಡುಕುತ್ತಿರುವ ಸಾಧ್ಯತೆ ಇದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯರೊಬ್ಬರು ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT