ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ತಿಂಗಳಲ್ಲಿ ತಗ್ಗಿದ ನಷ್ಟದ ಪ್ರಮಾಣ

ಉತ್ತಮ ಆದಾಯದತ್ತ ಸಾರಿಗೆ ಸಂಸ್ಥೆಯ ಕಾರವಾರ ಘಟಕ
Last Updated 4 ನವೆಂಬರ್ 2013, 9:05 IST
ಅಕ್ಷರ ಗಾತ್ರ

ಕಾರವಾರ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ಘಟಕದ ಬಗ್ಗೆ ಕೇಳಿದರೂ ನಷ್ಟದ ಮಾತು ಮೊದಲು ಬರುತ್ತದೆ. ಹೀಗಾಗಿ ಸಂಸ್ಥೆ ಲಾಭ ಗಳಿಸುವುದು ಇರಲಿ, ನಷ್ಟದ ಪ್ರಮಾಣ ಕಡಿಮೆ ಮಾಡಿಕೊಂಡರೂ ಸಾಕು ಎನ್ನುವ ಸ್ಥಿತಿಯಲ್ಲಿದೆ. ಹೀಗಿರುವಾಗ
ಸಾರಿಗೆ ಸಂಸ್ಥೆಯ ಕಾರವಾರ ಘಟಕ ಕೇವಲ ಐದು ತಿಂಗಳಲ್ಲಿಯೇ ₨ 49 ಲಕ್ಷ ನಷ್ಟ ಕಡಿಮೆ ಮಾಡಿ ಅಚ್ಚರಿ ಮೂಡಿಸಿದೆ.

ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರವಾರ ಘಟಕ ಹಿಂದೆಂದು ಕಾಣದ ಆದಾಯವನ್ನು ಈಗ ಗಳಿಸಿದೆ. 82 ಸಾರಿಗೆ ಬಸ್‌ಗಳನ್ನು ಹೊಂದಿರುವ ಈ ಘಟಕ ಕಳೆದ ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿ ನಷ್ಟದಲ್ಲಿ ನಡೆಯುತ್ತಿತ್ತು. ಬಸಪ್ಪ ಪೂಜಾರಿ ಈ ಘಟಕದ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ನಂತರ ಘಟಕದ ವರಮಾನ ಹೆಚ್ಚುತ್ತಾ ಸಾಗಿದೆ.

ಕಳೆದ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ ವರೆಗಿನ ನಷ್ಟಕ್ಕೆ ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ನಷ್ಟ ಹೋಲಿಸಿದರೆ, ಕಾರವಾರ ಘಟಕ ₨ 49.8 ಲಕ್ಷ ನಷ್ಟ ಕಡಿಮೆಯಾಗಿದೆ. ಕಾರವಾರ ಘಟಕದ ನಷ್ಟದ ಪ್ರಮಾಣದಲ್ಲಿ ಇಷ್ಟೊಂದು ಇಳಿಕೆಯಾಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಕುಮಟಾ ಘಟಕ  ₨ 44 ಲಕ್ಷ ಹಾಗೂ ಭಟ್ಕಳ ಘಟಕ ₨ 22 ಲಕ್ಷ ನಷ್ಟ ಕಡಿಮೆಯಾಗಿದೆ. ಉಳಿದ ಘಟಕಗಳು ಇನ್ನೂ ನಷ್ಟ ನಿಯಂತ್ರಿಸುವ ಪ್ರಯತ್ನದಲ್ಲಿದೆ.

ಕಾರವಾರ ಘಟಕದ ಆದಾಯ ಹೆಚ್ಚಿಸಲು ವ್ಯವಸ್ಥಾಪಕ ಬಸಪ್ಪ ಪೂಜಾರಿ ಅಂತಹದ್ದೇನು ಚಮಾತ್ಕಾರ ಮಾಡಿಲ್ಲ. ಬದಲಾಗಿ ಸ್ವಲ್ಪ ಬುದ್ಧಿ ಉಪಯೋಗಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿಬ್ಬಂದಿಯನ್ನು ಸ್ನೇಹಿತರಂತೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಇದಕ್ಕೆ ‘ಇಂತಹ ಸ್ನೇಹಪರ ವ್ಯವಸ್ಥಾಪಕರನ್ನು ನನ್ನ 30 ವರ್ಷ ಸೇವೆಯಲ್ಲಿಯೇ ಕಂಡಿಲ್ಲ’ ಎನ್ನುವ ಹಿರಿಯ ಅಧಿಕಾರಿಯೊಬ್ಬರ ಮಾತುಗಳೇ ಸಾಕ್ಷಿ.

ನಾಲ್ಕು ಹೊಸ ಮಾರ್ಗಗಳು: ಗ್ರಾಮೀಣ ಬಸ್‌ಗಳನ್ನು ಹೊರತು ಪಡಿಸಿ, ಉಳಿದ ಕಡೆಯ ಆದಾಯ ಇಲ್ಲದ ಮಾರ್ಗದ ಬಸ್‌ಗಳನ್ನು ರದ್ದುಗೊಳಿಸಿ ಆದಾಯ ಇರುವ ಮಾರ್ಗದ ಕಡೆ ಓಡಿಸಲಾಗುತ್ತಿದೆ. ಅಲ್ಲದೇ ಕಾರವಾರ–ಚಿಕ್ಕಮಗಳೂರು, ಕಾರವಾರ–ತಾಳಿಕೋಟೆ, ಕಾರವಾರ–ಪೂಣಾ ಹಾಗೂ ಕಾರವಾರ–ಪಿಂಪರಿ (ಮಹಾರಾಷ್ಟ್ರ) ಕಡೆ ಹೊಸದಾಗಿ ಬಸ್‌ ಪ್ರಾರಂಭಿಸಿದ್ದಾರೆ. ಕಾರವಾರ–ಅಥಣಿ ಮಾರ್ಗಕ್ಕೆ ನಾಲ್ಕು ಬಸ್‌ಗಳನ್ನು ಬಿಡಲಾಗುತ್ತಿದೆ. ಈ ಮಾರ್ಗಗಳಲ್ಲಿ ಹೆಚ್ಚಿನ ಆದಾಯವೂ ಬರುತ್ತಿದೆ ಎನ್ನುತ್ತಾರೆ ನಿರ್ವಾಹಕರು.

ಬಸ್‌ಗಳ ಉತ್ತಮ ನಿರ್ವಹಣೆ: ಮುಖ್ಯವಾಗಿ ಬಸ್‌ಗಳಿಗೆ ಟೈರ್‌ ಅಳವಡಿಕೆಯಲ್ಲಿ ಒಂದಷ್ಟು ಸೂತ್ರಗಳನ್ನು ಪಾಲಿಸಲಾಗುತ್ತಿದೆ. ಬಸ್‌ಗಳಿಗೆ ಹಿಂದಿನ ಟೈರ್‌ಗಳನ್ನು ಜೋಡಿಯಾಗಿ ಅಳವಡಿಸಲಾಗುತ್ತದೆ. ಇದರಲ್ಲಿ ಬಸ್‌ಗೆ ಹಳೆಯ ಟೈರ್ ಜೊತೆ ಹೊಸ ಟೈರ್‌ ಜೋಡಿಸುವುದನ್ನು ತಪ್ಪಿಸಿದ್ದಾರೆ. ಹಿಂದಿನ ಒಂದು ಟೈರ್‌ ಸವೆದರೆ, ಎರಡನ್ನೂ ತೆಗೆದು ಹೊಸ ಅಥವಾ ಸಮಾನ ಸಾಮರ್ಥ್ಯದ ಟೈರ್‌ ಅಳವಡಿಸಲಾಗುತ್ತಿದೆ.

‘ಹೀಗೆ ಮಾಡುವುದರಿಂದ ಟೈರ್‌ಗಳ ಕ್ಷಮತೆ ಹೆಚ್ಚುತ್ತದೆ. ದಾರಿ ಮಧ್ಯೆ ಬಸ್‌ ಕೆಟ್ಟು ನಿಲ್ಲುವುದು ತಪ್ಪುತ್ತದೆ. ಅಪಘಾತಗಳು ಕಡಿಮೆಯಾಗುತ್ತದೆ. ಅಲ್ಲದೇ ವರ್ಷಕ್ಕೆ ಲಕ್ಷಗಟ್ಟಲೆ ಹಣ ಉಳಿತಾಯವಾಗುತ್ತದೆ’ ಎನ್ನುತ್ತಾರೆ ವ್ಯವಸ್ಥಾಪಕ ಬಸಪ್ಪ ಪೂಜಾರಿ.
‘ನಮ್ಮ ಯೋಜನೆಗಳಿಗೆ ಉನ್ನತ ಅಧಿಕಾರಿಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ. ಸಿಬ್ಬಂದಿಯೂ ಉತ್ತಮವಾಗಿ ಸಹಕರಿಸುತ್ತಿದ್ದಾರೆ. ಹೀಗಾಗಿ ಘಟಕದ ಆದಾಯ ಹೆಚ್ಚಾಗುತ್ತಿದೆ. ಘಟಕವನ್ನು ಲಾಭದಲ್ಲಿ ನಡೆಸಬೇಕು ಎನ್ನುವ ಗುರಿ ಹೊಂದಿದ್ದೇನೆ’ ಎಂದು ಅವರು ತಮ್ಮ ಮನದಾಸೆ ಹಂಚಿಕೊಂಡರು.

‘ಕಳೆದ ಒಂದು ವರ್ಷದಿಂದ ಕಾರವಾರ ಘಟಕದ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಕಡೆ ಕಾರವಾರದ ಬಸ್‌ಗಳಿಗಾಗಿಯೇ ಕಾದು ನಿಲ್ಲುತ್ತಾರೆ. ಇತ್ತೀಚೆಗೆ ನಮ್ಮ ಬಸ್‌ ಎಲ್ಲಿಯೂ ಕೆಟ್ಟು ನಿಲ್ಲುತ್ತಿಲ್ಲ. ಅಧಿಕಾರಿಗಳಿಂದಲೂ ಯಾವುದೇ ಒತ್ತಡ ಇಲ್ಲ. ಇದರಿಂದ ಕೆಲಸ ಮಾಡಲು ಖುಷಿಯಾಗುತ್ತಿದೆ ಎಂದು ಚಾಲಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT