ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ನಿಯಮಬಾಹಿರ ಅಪಾರ್ಟ್‌ಮೆಂಟ್‌

ನಗರ ಸಂಚಾರ
Last Updated 1 ಸೆಪ್ಟೆಂಬರ್ 2014, 8:24 IST
ಅಕ್ಷರ ಗಾತ್ರ

ಕಾರವಾರ: ದಿನದಿಂದ ದಿನಕ್ಕೆ ಕಾರವಾರ ದುಬಾರಿ ನಗರವಾಗಿ ಬೆಳೆಯುತ್ತಿರುವ ಬೆನ್ನಲ್ಲೇ, ನಗರದಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ಹಾಗೂ ನಿರ್ಮಾಣಗೊಳ್ಳುತ್ತಿರುವ ಅಪಾರ್ಟ್‌ಮೆಂಟಗಳ ಪಟ್ಟಿಯೂ ಬೆಳೆಯುತ್ತಿದೆ.

ಸೀಬರ್ಡ್‌ ನೌಕಾನೆಲೆ, ಕೈಗಾ ಅಣುಸ್ಥಾವರ ಸೇರಿದಂತೆ ಮತ್ತಿತರ ಯೋಜನೆಗಳಿಂದಾಗಿ ಕಾರವಾರ ನಗರದಲ್ಲಿ ನೆಲೆಸುವ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ನಗರದಲ್ಲಿ ಎಲ್ಲೆಂದರಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ.

ಒಂದು ಮಾಹಿತಿ ಪ್ರಕಾರ ನಗರದಲ್ಲಿ ಈವರೆಗೆ ಸಮಾರು 98 ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಂಡಿದೆ. ಅವುಗಳಲ್ಲಿ 30 ಹಳೆಯದ್ದಾಗಿದ್ದು, ಹೊಸದಾಗಿ ಅಂದರೆ, 2011 ರಿಂದ ಇಲ್ಲಿವರೆಗೆ 68 ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಂಡಿವೆ. ಕೆಲವು ಕಾಮಗಾರಿ ಹಂತದಲ್ಲಿವೆ. ಹಳೆಯ 30 ಅಪಾರ್ಟ್‌ಮೆಂಟ್‌ಗಳು ಕಾನೂನು ಬಾಹಿರವಾಗಿದೆ ಎಂದು ನಗರಸಭೆ ಗುರುತಿಸಿದ್ದು, ಅವುಗಳಿಗೆ ನೋಟಿಸ್‌ ನೀಡಿದೆ.

‘ನಗರದಲ್ಲಿರುವ ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇಲ್ಲ. ನೀರು ಶುದ್ಧೀಕರಣ ಘಟಕ ಎಲ್ಲಿಯೂ ಇಲ್ಲ. ಅಲ್ಲದೇ ಕೆಲ ಕಟ್ಟಡದ ಯೋಜನೆಯೇ ವ್ಯವಸ್ಥಿತವಾಗಿರುವುದಿಲ್ಲ. ಆದರೂ ಈ ಕಟ್ಟಡಗಳಿಗೆ ನಗರಸಭೆಯಿಂದ ದೃಢೀಕರಣ ನೀಡಲಾಗಿದೆ. ಯಾರೊಬ್ಬರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ನಗರಸಭೆ ಸದಸ್ಯ ದೇವಿದಾಸ ನಾಯ್ಕ ಆರೋಪಿಸಿದರು.

‘ಕಾನೂನು ಉಲ್ಲಂಘಿಸಿದ ಅಪಾರ್ಟ್‌ಮೆಂಟ್‌ಗಳ ಮೇಲೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ. ಹೊಸದಾಗಿ ನಿರ್ಮಾಣಗೊಂಡಿರುವ ಕಟ್ಟಡಗಳದ್ದೂ ಸಹ ಇದೇ ದರ್ಬಾರ್‌ ನಡೆಯುತ್ತಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಎಷ್ಟೇ ಪ್ರಶ್ನಿಸಿದರೂ, ಪರಿಣಾಮ ಮಾತ್ರ ಶೂನ್ಯ. ಇದು ಹೀಗೆ ಮುಂದುವರಿದರೆ, ಮುಂದೊಂದು ದಿನ ನಗರದಲ್ಲಿ ಸೈಕಲ್‌ ನಿಲ್ಲಿಸಲು ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ಬಹುತೇಕ ಅಪಾರ್ಟಮೆಂಟ್‌ಗಳು ಶೌಚಾಲಯದ ನೀರನ್ನು ಅನಧಿಕೃತವಾಗಿ ಯುಜಿಡಿ (ಒಳಚರಂಡಿ)ಗೆ ಬಿಡುತ್ತಿದೆ. ಆದರೆ, ಈಗಾಗಲೇ ಯುಜಿಡಿ ಯೋಜನೆ ವಿಫಲವಾಗಿದ್ದು, ಅದರಲ್ಲಿ ಇರುವ ನೀರು ಕೂಡ ಸರಾಗವಾಗಿ ಸಾಗದ ಪರಿಸ್ಥಿತಿಯಲ್ಲಿದೆ. ಇನ್ನು ಅಪಾರ್ಟ್‌ಮೆಂಟ್‌ಗಳ ಕೊಳಚೆ ನೀರು ಯುಜಿಡಿಯಲ್ಲಿ ಹರಿದರೆ, ಮ್ಯಾನ್‌ಹೋಲ್‌ಗಳು ತುಂಬಿ ಇಡೀ ನಗರವೇ ಗಬ್ಬೆದ್ದು ನಾರಲಿದೆ. ಹೀಗಾಗಿ ಈ ಬಗ್ಗೆ ಕಠಿಣ ನಿರ್ಣಯ ಕೈಗೊಳ್ಳಬೇಕಾದ ಅಗತ್ಯ ಇದೆ’ ಎಂದು ದೇವಿದಾಸ ನಾಯ್ಕ ಅಭಿಪ್ರಾಯ ಹಂಚಿಕೊಂಡರು.

‘ಕಾರವಾರದಲ್ಲಿ ಕಳೆದ 17 ವರ್ಷಗಳಿಂದ ಅಪಾರ್ಟ್‌ಮೆಂಟ್‌ ಸಂಸ್ಕೃತಿ ಬೆಳೆದು ಬಂದಿದೆ. ನಗರದಲ್ಲಿ ಸುಮಾರು 25 ರಿಂದ 30 ಅಪಾರ್ಟ್‌ಮೆಂಟ್‌ಗಳು ನಿಯಮ ಬಾಹೀರವಾಗಿದೆ. ಅವುಗಳಿಗೆ ಹಿಂದೆಯೇ ನೋಟಿಸ್‌ ನೀಡಲಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ನಿಗಾ ಇಡಲಾಗಿದ್ದು, ಸರಿಯಾದ ವ್ಯವಸ್ಥೆ ಹೊಂದಿರದ ಆರು ಹೊಸ ಕಟ್ಟಡಗಳಿಗೆ ನಗರಸಭೆಯಿಂದ ನಂಬರ್‌ ನೀಡುವುದು ಹಾಗೂ ದೃಢೀಕರಣ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ನಗರಸಭೆ ಪ್ರಭಾರ ಆಯುಕ್ತ ಮೋಹನರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಯಮ ಮೀರಿ ಅಪಾರ್ಟ್‌ಮೆಂಟ್‌ ನಿರ್ಮಿಸುವ ಸಂಸ್ಕೃತಿ ಕಾರವಾರದಲ್ಲಿ ಹಿಂದಿನಿಂದಲೂ ಬೆಳೆದುಬಂದು ಬಿಟ್ಟಿದೆ. ಹಳೆಯದರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ, ಹೊಸದಾಗಿ ಆ ಸಂಸ್ಕೃತಿ ಮುಂದುವರಿಯದಂತೆ ತಡೆಯಲು ದೃಢ ನಿರ್ಧಾರ ಕೈಗೊಂಡಿದ್ದೇನೆ. ಈ ವಿಷಯದಲ್ಲಿ ಎಷ್ಟೇ ಒತ್ತಡ ಬಂದರು ನಿಭಾಯಿಸಲು ಸಿದ್ಧನಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT