ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹30 ಕೋಟಿ ಮೊತ್ತದ ಕುಡಿಯುವ ನೀರಿನ ಯೋಜನೆಗೆ ಶೀಘ್ರ ಚಾಲನೆ: ಶಾಸಕ ನೇಮರಾಜನಾಯ್ಕ

‘ಒಂದು ವೇದಿಕೆ, ಹಲವು ಈಡೇರಿಕೆ’ ಕಾರ್ಯಕ್ರಮ: ಶಾಸಕ ನೇಮರಾಜನಾಯ್ಕ ಹೇಳಿಕೆ
Published 4 ಜುಲೈ 2024, 14:22 IST
Last Updated 4 ಜುಲೈ 2024, 14:22 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಪಟ್ಟಣಕ್ಕೆ ಪ್ರತ್ಯೇಕವಾಗಿ ಅಮೃತ್ ಯೋಜನೆಯಲ್ಲಿ ₹30 ಕೋಟಿ ಮೊತ್ತದ ಕುಡಿಯುವ ನೀರಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಒಂದು ವೇದಿಕೆ, ಹಲವು ಈಡೇರಿಕೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗುಜರಾತ್ ಮೂಲದ ಗುತ್ತಿಗೆದಾರರು ಟೆಂಡರ್ ಪಡೆದಿದ್ದು, ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು. ಕ್ಷೇತ್ರ ವ್ಯಾಪ್ತಿಯ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಪ್ರೌಢ ಶಾಲೆಗಳಲ್ಲಿ ₹10 ಕೋಟಿ ಮೊತ್ತದಲ್ಲಿ ಕಂಪ್ಯೂಟರ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು. 201 ಶಾಲೆಗಳಿಗೆ ಕ್ರೀಡಾ ಸಾಮಾನುಗಳನ್ನು ವಿತರಿಸಲಾಗುವುದು ಎಂದರು.

ಸರ್ಕಾರದ 23 ಇಲಾಖೆಗಳ 1,747 ಫಲಾನುಭವಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒಂದೇ ಸೂರಿನಡಿ ವಿತರಣೆ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲು. ಕೆಲಸ ಮಾಡಲು ಸರ್ಕಾರ ಯಾವುದಿದ್ದರೇನು, ಮಾಡುವ ಇಚ್ಛಾಶಕ್ತಿ ಇರಬೇಕು ಎಂದು ಹೇಳಿದರು.

ಕಳೆದ 10 ವರ್ಷಗಳಲ್ಲಿ ಕ್ಷೇತ್ರದಲ್ಲಿ ಏನಾಗಿದೆಯೋ ಗೊತ್ತಿಲ್ಲ, ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು, ಅವರ ಭರವಸೆಗೆ ಚ್ಯುತಿ ಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಸಾಂಕೇತಿಕವಾಗಿ ತಲಾ ಐದು ಜನರಿಗೆ ಶಾಲೆಗಳಿಗೆ ನೀಡುವ ಕ್ರೀಡಾ ಕಿಟ್, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್, ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಿಸಲಾಯಿತು.

ತಹಶೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂಪಾಷಾ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆಂಜನೇಯ ಎಚ್.ಹುಲ್ಲಾಳ, ಬಿಇಒ ಮೈಲೇಶ್ ಬೇವೂರು, ಕೃಷಿ ಇಲಾಖೆಯ ಸುನೀಲ್‍ಕುಮಾರನಾಯ್ಕ, ಬಿ.ದೊಡ್ಡಬಸವರೆಡ್ಡಿ, ಪುರಸಭೆ ಸದಸ್ಯರಾದ ಬಿ.ಗಂಗಾಧರ, ದೀಪಕ್ ಸಾ ಕಠಾರೆ, ಚನ್ನಮ್ಮ ವಿಜಯಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT