ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಕಡತ ನಾಪತ್ತೆ ಪ್ರಕರಣ: ನಗರಸಭೆಯ ನಾಲ್ವರು ಸಿಬ್ಬಂದಿ ಅಮಾನತು

Published 2 ಸೆಪ್ಟೆಂಬರ್ 2023, 5:19 IST
Last Updated 2 ಸೆಪ್ಟೆಂಬರ್ 2023, 5:19 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆರೋಪದ ಮೇರೆಗೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ನಗರಸಭೆಯ ಇನ್ನೊಬ್ಬ ಸಿಬ್ಬಂದಿ, ಕಚೇರಿ ವ್ಯವಸ್ಥಾಪಕ ಬಿ.ಕೃಷ್ಣಮೂರ್ತಿ ಅವರು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಮಯಾವಳಿಗೆ ಒಳಪಡುವ ಕಾರಣ, ಅವರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕೆಂದು ಜಿಲ್ಲಾಧಿಕಾರಿ ಅವರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಲ್ಲಿ ಮನವಿ ಮಾಡಿದ್ದಾರೆ.

ವಾಲ್‌ಮ್ಯಾನ್‌ ಹಾಗೂ ಪ್ರಭಾರ ಅಭಿಲೇಖಾಲಯದ ವಿಷಯ ನಿರ್ವಾಹಕರಾದ ಸುರೇಶಬಾಬು ಡಿ.ಎಚ್‌., ದ್ವಿತೀಯ ದರ್ಜೆ ಸಹಾಯಕ ಎಸ್‌.ಸುರೇಶ್‌, ನೈರ್ಮಲ್ಯ ಮೇಸ್ತ್ರಿ ಹಾಗೂ ಪ್ರಭಾರ ಕರವಸೂಲಿಕಾರ ಎನ್‌.ಯಲ್ಲಪ್ಪ ಹಾಗೂ ಪೌರಕಾರ್ಮಿಕ ಮತ್ತು ಪ್ರಭಾರ ಕರವಸೂಲಿಗಾರ ಎಚ್‌.ಶಂಕರ್‌ ಅಮಾನತುಗೊಂಡವರು. ಇವರೆಲ್ಲ ಸಿ ವೃಂದದ ನೌಕರರರಾಗಿದ್ದರು.

ನನ್ನ ಅನುಮತಿ ಪಡೆಯದೆ ಆಯುಕ್ತ ಬಿ.ಟಿ.ಬಂಡಿವಡ್ಡರ್‌ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಹೀಗಾಗಿ ಕಾರಣ ಕೇಳಿ ಅವರಿಗೂ ನೋಟಿಸ್ ನೀಡಲಾಗಿದೆ.
ಎಂ.ಎಸ್.ದಿವಾಕರ್‌, ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಅವರು ತಾವು ತೆಗೆದುಕೊಂಡ ಕ್ರಮಗಳ ಬಗ್ಗೆ ಶುಕ್ರವಾರ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದು ಮಾಹಿತಿ ನೀಡಿದ್ದು, ನಗರಸಭೆ ಪೌರಾಯುಕ್ತರು ಅಗಸ್ಟ್‌ 22 ಮತ್ತು 31ರಂದು ನೀಡಿರುವ ವರದಿ, ಕರ್ನಾಟಕ ರಕ್ಷಣಾ ವೇದಿಕೆಯವರು ಆ.19ರಂದು ನೀಡಿದ ಪತ್ರವನ್ನು ಉಲ್ಲೇಖಿಸಿದ್ದಾರೆ.

ಅಯುಕ್ತರ ವರದಿ

’ಈ ಐವರು ಸಿಬ್ಬಂದಿ ನಗರಸಭೆ ಅಭಿಲೇಖಾಲಯದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಡಿಮ್ಯಾಂಡ್‌ ರಿಜಿಸ್ಟರ್‌ಗಳು, ಕೆಎಂಎಫ್‌–24 ರಿಜಿಸ್ಟರ್‌ಗಳು ಅಭಿಲೇಖಾಲಯದಲ್ಲಿ ಲಭ್ಯವಿಲ್ಲ ಎಂದು ಮಾಹಿತಿ ನೀಡಿದ್ದರು. ಪುನಃ ಆಗಸ್ಟ್‌ 22ರಂದು ಈ ಎಲ್ಲಾ ದಾಖಲೆಗಳು ಅಭಿಲೇಖಾಲಯದಲ್ಲಿ ಲಭ್ಯ ಇದೆ ಎಂದು ತಿಳಿಸಿದ್ದಾರೆ. ಈ ರೀತಿ ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದು, ಸದರಿ ನೌಕರರು ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿಸಿದ್ದರಿಂದ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ವಹಿಸಬೇಕು’ ಎಂದು ಆಯುಕ್ತರು ಆಗಸ್ಟ್‌ 31ರಂದು ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ ಮೇರೆಗೆ ಈ ಅಮಾನತು ಆದೇಶ ಹೊರಡಿಸಲಾಗಿದೆ.

ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಗೆ ನೋಟಿಸ್ ನೀಡಲಾಗಿತ್ತು. ಈ ಪೈಕಿ ಬಿ.ಕೃಷ್ಣಮೂರ್ತಿ, ಎನ್‌.ಯಲ್ಲಪ್ಪ ಮತ್ತು ಎಚ್‌.ಶಂಕರ್ ಅವರು ಉತ್ತರ ನೀಡಿ, ವೈಯಕ್ತಿಕ ವಿಚಾರದಲ್ಲಿ ತಮ್ಮನ್ನು ಈ ಪ್ರಕರಣದಲ್ಲಿ ಭಾಗಿ ಮಾಡಲಾಗಿರುತ್ತದೆ ಎಂದು ಹೇಳಿದ್ದರು.

ಆಗಿದ್ದೇನು?

‘ನಗರಸಭೆಯಿಂದ ಆರೇಳು ತಿಂಗಳ ಹಿಂದೆಯೇ 49 ಕಡತಗಳನ್ನು ಮಾಜಿ ಸಚಿವ ಆನಂದ್ ಸಿಂಗ್, ಅವರ ಅಳಿಯ ಸಂದೀಪ್‌ ಸಿಂಗ್‌, ಹಾಲಿ ಸದಸ್ಯರು, ಮಾಜಿ ಸದಸ್ಯ ವೇಣುಗೋಪಾಲ್‌ ಹಾಗೂ ಕೆಲವು ಅಧಿಕಾರಿಗಳು, ಸಿಬ್ಬಂದಿ ಸೇರಿಕೊಂಡು ಸಿ.ಸಿ ಟಿ.ವಿ. ಕ್ಯಾಮೆರಾ ಬಂದ್ ಮಾಡಿಸಿಕೊಂಡು ಕಚೇರಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಇದುವರೆಗೂ ತಂದುಕೊಟ್ಟಿಲ್ಲ’ ಎಂಬ ದೂರನ್ನು ಸುರೇಶ್‌ ಬಾಬು ಡಿ.ಎಚ್. ಹೆಸರಿನಲ್ಲಿ ಇದೇ 10ರಂದು ಮುಖ್ಯಮಂತ್ರಿ ಮತ್ತು ಇತರ ಹಲವರಿಗೆ ಸಲ್ಲಿಸಲಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆಗೂ ಈ ದೂರು ಬಂದಿತ್ತು. ಕಡತಗಳ ಬಗ್ಗೆ ಸಾರ್ವಜನಿಕವಾಗಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದ ಮೇರೆಗೆ ಆಯುಕ್ತರು ಆಗಸ್ಟ್ 22ರಂದು ಮಾಧ್ಯಮಗಳ ಸಮ್ಮುಖದಲ್ಲೇ ಕಡತಗಳನ್ನು ತರಿಸಿ ಪರಿಶೀಲಿಸಿ, ಕಡತಗಳು ಕಣ್ಮರೆಯಾಗಿರುವುದನ್ನು ಒಪ್ಪಿಕೊಂಡಿದ್ದರು. ಆ.25ರಂದು ಪತ್ರಿಕಾಗೋಷ್ಠಿ ಕರೆದು, ಕಡತಗಳು ನಾಪತ್ತೆಯಾಗಿಲ್ಲ, ಸಿಬ್ಬಂದಿ ನೀಡಿದ ಲಿಖಿತ ಮಾಹಿತಿಯ ಆಧಾರದಲ್ಲಿ ತಾವು ಈ ಹೇಳಿಕೆ ನೀಡುತ್ತಿರುವುದಾಗಿ ತಿಳಿಸಿದ್ದರು.

‘ಬಂಧನವೂ ಸಾಧ್ಯ’

‘ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಈಗ ಅಮಾನತು ಮಾಡಲಾಗಿದೆ. ಕಡತ ನಾಪತ್ತೆಯಾಗಿರುವುದು ಸಾಬೀತಾದರೆ ತಪ್ಪಿತಸ್ಥ ಸಿಬ್ಬಂದಿಯನ್ನು ಬಂಧಿಸುವ ಸಾಧ್ಯತೆಯೂ ಇದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ‘ಪ್ರಜಾವಾಣಿ‘ಗೆ ತಿಳಿಸಿದರು. ‘ಕಡತ ನಾಪತ್ತೆ ಪ್ರಕರಣದಿಂದಾಗಿ ಇಡೀ ರಾಜ್ಯವೇ ಹೊಸಪೇಟೆಯತ್ತ ನೋಡುವಂತಾಗಿದೆ. ನಿಜವಾಗಿಯೂ ಕಡತ ನಾಪತ್ತೆಯಾಗಿದೆಯೇ ಎಂಬುದರ ಬಗ್ಗೆ ನಾನು ವಿವರವಾದ ವರದಿ ಕೇಳಿದ್ದೇನೆ. ಆಯುಕ್ತರು ವರದಿ ನೀಡಿದ್ದಾರೆ. ಅದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ತನಿಖೆ ಆಗಲಿದೆ. ಕಡತ ನಾಪತ್ತೆಯಾಗಿರುವುದು ಸಾಬೀತಾದರೆ ತಪ್ಪಿತಸ್ಥರಿಗೆ ತಕ್ಷ ಶಿಕ್ಷೆ ನಿಶ್ಚಿತ. ಅದಕ್ಕೆ ಮೊದಲಾಗಿ ಪ್ರಕರಣದ ಗಂಭೀರತೆ ತಿಳಿಯಬೇಕು ಎಂಬ ಕಾರಣಕ್ಕೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT