ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಭಕ್ತರ ದರ್ಶನಕ್ಕೆ ಬಾಗಿಲು ತೆರೆದ 700 ದೇವಸ್ಥಾನಗಳು

ತೆರೆಯದ ಜಿಮ್‌, ಈಜುಕೊಳ; ಸಿದ್ಧತೆಯೂ ಇಲ್ಲ
Last Updated 5 ಜುಲೈ 2021, 9:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರವು ದೇವಾಲಯಗಳ ಮೇಲಿನ ನಿರ್ಬಂಧ ತೆಗೆದು ಹಾಕಿರುವುದರಿಂದ ಸೋಮವಾರ ಧಾರ್ಮಿಕ ದತ್ತಿ ಇಲಾಖೆಯು ವಿಜಯನಗರ ಜಿಲ್ಲೆಯಲ್ಲಿನ 700 ದೇಗುಲಗಳ ಬಾಗಿಲು ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿತು.

ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಕೊಟ್ಟೂರಿನ ಗುರು ಬಸವೇಶ್ವರ ಸ್ವಾಮಿ, ಮೈಲಾರದ ಮೈಲಾರಲಿಂಗೇಶ್ವರ ಸೇರಿದಂತೆ 700 ದೇವಸ್ಥಾನಗಳಲ್ಲಿ ಸೋಮವಾರ ಬೆಳಿಗ್ಗೆ 6.30ಕ್ಕೆ ವಿಶೇಷ ಪೂಜೆ ನೆರವೇರಿತು. ಕೆಲವರು ಪೂಜೆಗೆ ಸಾಕ್ಷಿಯಾದರು. ಸಮಯ ಕಳೆದಂತೆ ವಿವಿಧ ಕಡೆಗಳಿಂದ ಭಕ್ತರು ದೇಗುಲಕ್ಕೆ ಬಂದು ಪೂಜೆ ನೆರವೇರಿಸಿ, ದರ್ಶನ ಪಡೆದರು. ಇಷ್ಟು ದಿನಗಳ ವರೆಗೆ ಮೌನ ಆವರಿಸಿದ್ದ ದೇವಸ್ಥಾನಗಳಲ್ಲಿ ಗಂಟೆ ಶಬ್ದ ಕೇಳಿಸಿತು. ಭಕ್ತರ ಬರುವಿಕೆಯಿಂದ ದೇವಸ್ಥಾನಗಳಿಗೆ ವಿಶೇಷ ಕಳೆ ಬಂದಿದೆ. ಆದರೆ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಅನ್ನದಾಸೋಹಕ್ಕೆ ವ್ಯವಸ್ಥೆ ಕಲ್ಪಿಸಿಲ್ಲ.

ಎರಡು ವಾರಗಳ ಹಿಂದೆಯೇ ವಿಶ್ವಪ್ರಸಿದ್ಧ ಹಂಪಿ ಸ್ಮಾರಕಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿದ್ದರೂ ವಿರೂಪಾಕ್ಷೇಶ್ವರ ದೇವಸ್ಥಾನ ತೆರೆದಿರಲಿಲ್ಲ. ದೂರದ ಊರುಗಳಿಂದ ಬಂದವರು ದೇವರ ದರ್ಶನ ಪಡೆಯದೆ ನಿರಾಸೆಯಿಂದ ಹಿಂತಿರುಗುತ್ತಿದ್ದರು. ಈಗ ದೇಗುಲ ಬಾಗಿಲು ತೆರೆದಿರುವುದರಿಂದ ಪ್ರವಾಸಿಗರು ಸ್ಮಾರಕಗಳ ಜೊತೆಗೆ ದೇಗುಲಕ್ಕೆ ಭೇಟಿ ನೀಡಬಹುದಾಗಿದೆ.

ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ನಂತರ ಭಾನುವಾರ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಭಕ್ತರು ಗುಂಪು ಗುಂಪಾಗಿ ತೆರಳದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ಜಿಮ್‌, ಈಜು ಪ್ರಿಯರಿಗೆ ನಿರಾಸೆ:ದೇವಸ್ಥಾನಗಳೆಲ್ಲ ಬಾಗಿಲು ತೆರೆದರೂ ನಗರದ ಜಿಮ್‌, ಬ್ಯಾಡ್ಮಿಂಟನ್‌ ಕೋಟ್‌, ಈಜುಕೊಳ ಸೋಮವಾರ ಬಾಗಿಲು ತೆರೆಯಲಿಲ್ಲ. ಅದಕ್ಕಾಗಿ ಯಾವ ಸಿದ್ಧತೆಯೂ ಮಾಡಿಕೊಂಡಿಲ್ಲ. ಅನೇಕ ಜನ ನಗರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೇರಿದ ಒಳಾಂಗಣ ಕ್ರೀಡಾಂಗಣಕ್ಕೆ ಬಂದು ಹಿಂತಿರುಗಿದರು.

‘ಇನ್ನಷ್ಟೇ ನಮಗೆ ಮೇಲಧಿಕಾರಿಗಳಿಂದ ಸೂಚನೆ ಬರಬೇಕು. ಹಾಗಾಗಿ ಈಜುಕೊಳ, ಜಿಮ್‌ ತೆರೆದಿಲ್ಲ ಎಂದು ಹೇಳಿದ್ದಾರೆ. ಖಾಸಗಿಯವರ ಜಿಮ್‌, ಈಜುಕೊಳ ತೆರೆದಿವೆ. ಇವರಿಗೆ ತೆರೆಯಲು ಏನು ಸಮಸ್ಯೆ’ ಎಂದು ಯುವಕ ರಾಜು ಪ್ರಶ್ನಿಸಿದ್ದಾರೆ.

ಈ ಕುರಿತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರಿಸಿಂಗ್‌ ರಾಥೋಡ್‌ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ, ‘ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್‌ ಲಸಿಕೆ ಕೊಡಲಾಗುತ್ತಿದೆ. ಅದು ಮುಗಿದ ನಂತರ ಜಿಮ್‌, ಈಜುಕೊಳ, ಬ್ಯಾಡ್ಮಿಂಟನ್‌ ಕೋಟ್‌ನಲ್ಲಿ ಆಡಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT