ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ಕೊರತೆ: ಹಳೆಯ ಚಿತ್ರಮಂದಿರದಲ್ಲಿ ವಸತಿ ಶಾಲೆ!

ಆತಂಕದಲ್ಲೇ ವಿದ್ಯಾರ್ಥಿಯರ ಕಲಿಕೆ
Published 30 ನವೆಂಬರ್ 2023, 21:03 IST
Last Updated 30 ನವೆಂಬರ್ 2023, 21:03 IST
ಅಕ್ಷರ ಗಾತ್ರ

ಕುರುಗೋಡು (ಬಳ್ಳಾರಿ ಜಿಲ್ಲೆ): ಪ್ರತ್ಯೇಕ ತರಗತಿ ಕೊಠಡಿಗಳಿಲ್ಲ, ಕ್ರೀಡಾಂಗಣವಿಲ್ಲ, ಶೌಚಾಲಯಗಳು ಸಮರ್ಪಕವಾಗಿಲ್ಲ, ಪುಟ್ಟ ಜಾಗದಲ್ಲೇ ಆಟ–ಪಾಠ...

ಇದು ಹಳೆಯ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರ ಸ್ಥಿತಿ.

ಈ ಮೊದಲು ಶಾಲೆ ಮತ್ತು ವಸತಿನಿಲಯ ನಡೆಯುತ್ತಿದ್ದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸ್ವಂತ ಕಟ್ಟಡವಿರದ ಕಾರಣ 40 ವರ್ಷ ಹಳೆಯದಾದ ಚಿತ್ರಮಂದಿರದ ಕಟ್ಟಡದಲ್ಲೇ ಮೂರು ವರ್ಷಗಳಿಂದ ವಸತಿ ಶಾಲೆ ನಡೆಯುತ್ತಿದೆ.

‘ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ 226 ವಿದ್ಯಾರ್ಥಿನಿಯರಿದ್ದು, ಒಂದೇ ಸಭಾಂಗಣದಲ್ಲಿ 2ರಿಂದ 3 ತರಗತಿ ನಡೆಸಲಾಗುತ್ತಿದೆ. ಎಲ್ಲರಿಗೂ ಒಂದೆಡೆಯೇ ಪಾಠ ಮಾಡುವುದರಿಂದ ನಮಗೆ ಸರಿಯಾಗಿ ಅರ್ಥವಾಗುತ್ತಿಲ್ಲ’ ಎಂಬುದು ವಿದ್ಯಾರ್ಥಿನಿಯರ ಅಳಲು.

ವಸತಿ ಶಾಲೆಗಿಲ್ಲ ಸ್ವಂತ ಕಟ್ಟಡ: ಜಿಲ್ಲಾ ಪರಿಷತ್ ಬಾಲಕಿಯರ ಪ್ರೌಢಶಾಲೆ ಹೆಸರಿನಲ್ಲಿ 1996ರಲ್ಲಿ ಪ್ರಾರಂಭವಾದ ಶಾಲೆ, ನಂತರ ಗಾಂಧಿತತ್ವ ಆಧಾರಿತ ಬಾಲಕಿಯರ ವಸತಿ ಶಾಲೆಯಾಗಿ 2011-12ರಲ್ಲಿ ಮೇಲ್ದರ್ಜೆಗೇರಿಸಿ ಸಮಾಜ ಕಲ್ಯಾಣ ಇಲಾಖೆಗೆ ಸೇರ್ಪಡೆ ಮಾಡಲಾಯಿತು. 2012-13ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುದಾನದೊಂದಿಗೆ ಕರ್ನಾಟಕ ವಸತಿ ಶಿಕ್ಷಣಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಇದೇ ಮಾದರಿಯಲ್ಲಿ ಜಿಲ್ಲೆಯ ಚೆಳ್ಳಗುರ್ಕಿ ಗ್ರಾಮದಲ್ಲೂ ಮತ್ತೊಂದು ಶಾಲೆ ಇದೆ. ಅಲ್ಲಿ ಎರ‍್ರೀತಾತ ಮಠದ ಕೊಠಡಿಗಳಲ್ಲಿ ಶಾಲೆ ನಡೆಯುತ್ತಿದೆ. ಕುರುಗೋಡು ಮತ್ತು ಚೆಳ್ಳಗುರ್ಕಿಯ ಎರಡೂ ಶಾಲೆಗಳಿಗೂ ಸ್ವಂತ ಕಟ್ಟಡಗಳಿಲ್ಲ.

6 ಎಕರೆ ಭೂಮಿ ಕಾಯ್ದಿರಿಸಲಾಗಿದೆ. ಕಟ್ಟಡ ನಿರ್ಮಾಣ ಅನುದಾನಕ್ಕಾಗಿ ಕರ್ನಾಟಕ ವಸತಿ ಶಿಕ್ಷಣಗಳ ಸಂಘದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅದು ಸಿಕ್ಕ ಬಳಿಕ ಕಟ್ಟಡ ನಿರ್ಮಿಸಲಾಗುವುದು
–ಎ.ಕೆ.ಜಲಾಲಪ್ಪ, ಉಪನಿರ್ದೇಶಕ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಳ್ಳಾರಿ
ವಿವಿಧ ಬಡಾವಣೆಗಳಲ್ಲಿ ಪರಿಶೀಲಿಸಿದರೂ ಸೂಕ್ತ ಕಟ್ಟಡ ಸಿಗಲಿಲ್ಲ. ಆದ್ದರಿಂದ ತಿಂಗಳಿಗೆ ₹1.20 ಲಕ್ಷ ಬಾಡಿಗೆ ಕೊಟ್ಟು ಈ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ.
–ವಿಶ್ವನಾಥ, ಪ್ರಾಚಾರ್ಯ, ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ ಶಾಲೆ, ಕುರುಗೋಡು
ಸೌಲಭ್ಯಗಳಿಲ್ಲದ ಹಳೆ ಕಟ್ಟಡದಲ್ಲಿ ವಸತಿ ಶಾಲೆ ನಡೆಯುತ್ತದೆ. ಏನಾದರೂ ಅಚಾತುರ್ಯ ಸಂಭವಿಸಿದರೆ ಯಾರು ಹೊಣೆ? ನಮ್ಮ ಮಕ್ಕಳಿಗೆ ಸೂಕ್ತ ಸೌಲಭ್ಯ, ರಕ್ಷಣೆ ಇಲ್ಲ.
–ವಿದ್ಯಾರ್ಥಿನಿಯರ ಪೋಷಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT