ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂತು, ರೈತರಿಗೆ ಖುಷಿ ತಂತು

Published 7 ಆಗಸ್ಟ್ 2023, 6:35 IST
Last Updated 7 ಆಗಸ್ಟ್ 2023, 6:35 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸುಮಾರು 40 ದಿನದ ಹಿಂದೆ ಇಲ್ಲೇ ‘ಬೇಗ ಹುಯ್ಯೊ ಮಳೆರಾಯ‘ ಎಂಬ ಶೀರ್ಷಿಕೆಯಡಿಯಲ್ಲಿ ವಿಜಯನಗರ ಜಿಲ್ಲೆಯ ಕೃಷಿ ಚಿತ್ರಣ ಪ್ರಕಟವಾಗಿತ್ತು. 3–4 ದಿನದೊಳಗೆ ಮಳೆ ಬಾರದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಮಾಹಿತಿ ಅದರಲ್ಲಿತ್ತು. ಸುಮಾರು ಒಂದು ತಿಂಗಳಷ್ಟು ವಿಳಂಬವಾಗಿ ಜುಲೈ ಮೊದಲ ವಾರದಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿಕರು ಬಹುತೇಕ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.

ಜೂನ್‌ ತಿಂಗಳಲ್ಲಿ  ಹೊಸಪೇಟೆ ತಾಲ್ಲೂಕಿನಲ್ಲಿ ಶೇ ಮೈನಸ್ 71ರಷ್ಟು ಮಳೆ ಕೊರತೆಯಾಗಿತ್ತು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ ಮೈನಸ್‌ 49ರಷ್ಟು ಮಳೆ ಕೊರತೆ ಇತ್ತು. ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ 23ರಷ್ಟು ಹೆಚ್ಚುವರಿ ಮಳೆ ಸುರಿಯುವ ಮೂಲಕ ಕೃಷಿಕರು ಸಮಾಧಾನಪಡುವಂತೆ ಮಾಡಿದೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಕೃಷಿ ಭೂಮಿಯ ಪ್ರಮಾಣವೇ ಅಧಿಕ ಇರುವ ಕಾರಣ ಮಳೆ ಸುರಿದಂತೆ ರೈತರ ಹಿಗ್ಗುವಿಕೆಯೂ ಹೆಚ್ಚುತ್ತದೆ.

ಮಳೆ ಉತ್ತಮವಾಗಿ ಸುರಿದು ತಿಂಗಳ ಅಂತ್ಯದ ವೇಳೆಗೆ ಕುಂಠಿತವಾಯಿತು. ಹೀಗಾಗಿ ತ್ವರಿತವಾಗಿ ತುಂಬುತ್ತಿದ್ದ ತುಂಗಭದ್ರಾ ಜಲಾಶಯದ ತುಂಬುವಿಕೆ ಪ್ರಮಾಣ ನಿಧಾನವಾಯಿತು. ಹೀಗಿದ್ದರೂ ರಾಜ್ಯದ ಕೃಷಿ ಜಮೀನುಗಳಿಗೆ ಹಾಗೂ ಆಂಧ್ರದತ್ತ ಜಲಾಶಯದ ನೀರು ಕಾಲುವೆಗಳ ಮೂಲಕ ಹರಿಯತೊಡಗಿದೆ. ಮಳೆ ಮುನಿಸಿದ್ದ ಕಾರಣ ಇಂತಹ ಚಿತ್ರಣ ಈ ಬಾರಿ ಇರುವುದಿಲ್ಲವೋ ಏನೋ ಎಂಬ ಆತಂಕ ಕೊನೆಗೂ ದೂರವಾಗಿದೆ. ಆದರೂ ಮಲೆನಾಡು ಭಾಗದಲ್ಲಿ ಮಳೆ ಇನ್ನೂ ಒಂದೆರಡು ತಿಂಗಳು ಸುರಿಯಬೇಕಿದ್ದು, ಅದು ಈ ಭಾಗದ ಕೃಷಿಯ ಮೇಲೆ ಪ್ರಭಾವ ಬೀರಲಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ಶೆ 96.6ರಷ್ಟು ಗುರಿ ಸಾಧಿಸಲಾಗಿದ್ದು, ಮುಸುಕಿನ ಜೋಳ ಬಿತ್ತನೆಯಲ್ಲಿ ಗುರಿಮೀರಿದ ಸಾಧನೆ ಮಾಡಲಾಗಿದೆ. 1.76 ಲಕ್ಷ ಹೆಕ್ಟೇರ್‌ ಬದಲಾಗಿ 1.81 ಲಕ್ಷ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳದ ನಾಟಿ ನಡೆದಿದೆ. ಸಜ್ಜೆ ನಾಟಿಯಲ್ಲೂ ಶೇ 110ರಷ್ಟು ಪ್ರಗತಿ ಸಾಧಿಸಲಾಗಿದೆ. 4,630 ಹೆಕ್ಟೇರ್‌ ಬದಲಾಗಿ 5,097 ಹೆಕ್ಟೇರ್‌ನಲ್ಲಿ ಇದರ ಬಿತ್ತನೆ ನಡೆದಿದೆ.

ಮಳೆ ಬರಲಾರದು, ಬೆಳೆ ನಾಶವಾಯಿತು ಎಂದೇ ಬಹುತೇಕ ರೈತರು ಭಾವಿಸಿದ್ದರು. ಆದರೆ ಮಳೆರಾಯ ವರ ತೋರಿದ್ದಾನೆ. ಹೀಗಾಗಿ ಬಿತ್ತನೆ ನಡೆದಿದೆ. ಆದರೆ ಮತ್ತೆ ಮಳೆ ಕೈಕೊಟ್ಟಂತಹ ಸನ್ನಿವೇಶ ನಿರ್ಮಾಣವಾಗಿದೆ. ‘ಪ್ರಜಾವಾಣಿ‘ ಮಾತನಾಡಿಸಿದ ಹೆಚ್ಚಿನ ರೈತರು ಹೇಳಿದ್ದು ಒಂದೇ, ಅದೇನೆಂದರೆ ಹದವಾದ ಮಳೆ ಇನ್ನೂ ಸುರಿಯಬೇಕು. ಹಾಗೆಯೇ ಆಗಲಿ ಎಂಬುದು ಎಲ್ಲರ ಆಶಯ.

ವಿಜಯನಗರ ಜಿಲ್ಲೆ: ಕೃಷಿ ಚಟುವಟಿಕೆ ಪ್ರಗತಿ

======

ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆ ಗುರಿ/ಸಾಧನೆ (ಹೆಕ್ಟೇರ್‌ಗಳಲ್ಲಿ)

ಹೊಸಪೇಟೆ;ಕೂಡ್ಲಿಗಿ;ಹಗರಿಬೊಮ್ಮನಹಳ್ಳಿ;ಹಡಗಲಿ;ಹರಪನಹಳ್ಳಿ;ಜಿಲ್ಲೆಯ ಒಟ್ಟು;ಶೇ

19,187/14,584;59,410/54,210;32,343/29,406;41,823/40,224;50,994/47,663;89,696/83,745;2.93,453/2,69,832;92

ಏಕದಳ, ದ್ವಿದಳ ಸಹಿತ ಒಟ್ಟು ಆಹಾರಧಾನ್ಯ ಗುರಿ/ಸಾಧನೆ 

14,905/10,064;26,585/24,572;27,980/26,395;32,026/35,820;39,225/40,475;84,304/79,976;2,25,025/2,17,302;96

=====

ಬಿತ್ತನೆ ಪ್ರಗತಿ (ಹೆಕ್ಟೇರ್‌ಗಳಲ್ಲಿ)

ತಾಲ್ಲೂಕು;ಉದ್ದೇಶಿತ ಗುರಿ ನೀರಾವರಿ ಆಶ್ರಿತ/ಮಳೆಯಾಶ್ರಿತ/;ಒಟ್ಟು;ಬಿತ್ತನೆಯಾದ ಪ್ರದೇಶ ನೀರಾವರಿ ಆಶ್ರಿತ/ಮಳೆಯಾಶ್ರಿತ;ಒಟ್ಟು;ಶೇ

ಹೊಸಪೇಟೆ;11,852/7,335;19,187;8,927/5,657;14,584;76.01

ಕೂಡ್ಲಿಗಿ;3,196/52,214;59,410;2,535/51,675;54,210;91.25

ಕೊಟ್ಟೂರು;3,588/28,755;32,343;2,816/26,590;29,406;90.92

ಹಗರಿಬೊಮ್ಮನಹಳ್ಳಿ;15,030/26,793;41,823;13,648/26,576;40,224;96.18

ಹೂವಿನಹಡಗಲಿ;23,210/27,784;50,994;23,341/24,322;47,663;93.47

ಹರಪನಹಳ್ಳಿ;7,539/82,157;89,696;7,529/76,291;83,820;93.45

ಒಟ್ಟು;64,415/2,29,038;2,93,453;58,756/2,11,111;2,69,907;91.98

=========

ಬಿತ್ತನೆ ಬೀಜ ವಿತರಣೆ (ಕ್ವಿಂಟಲ್‌ಗಳಲ್ಲಿ)

ವಿವಿಧ ಬೀಜಗಳು;ದಾಸ್ತಾನು;ವಿತರಣೆ;ಲಭ್ಯ ದಾಸ್ತಾನು

13,381;12,618;11,132;1,485

ರಸಗೊಬ್ಬರ ಬೇಡಿಕೆ ಮತ್ತು ಸರಬರಾಜು (ಟನ್‌ಗಳಲ್ಲಿ)

ಒಟ್ಟು ಮುಂಗಾರು ಬೇಡಿಕೆ;ಆಗಸ್ಟ್‌ವರೆಗೆ ಬೇಡಿಕೆ;ಒಟ್ಟು ಸರಬರಾಜು;ವಿತರಣೆ;ಲಭ್ಯ ದಾಸ್ತಾನು

1,01,502;84,511;59,964;56,906;26,046

=====

ಜುಲೈ ತಿಂಗಳ ಮಳೆ ಪ್ರಮಾಣ (ಮಿ.ಮೀ.)

ತಾಲ್ಲೂಕು;ಸಾಮಾನ್ಯ ಮಳೆ;ವಾಸ್ತವ ಮಳೆ;ಶೇ   

ಹೊಸಪೇಟೆ;99;94;–5

ಹೂವಿನಹಡಗಲಿ;76;98;28

ಹಗರಿಬೊಮ್ಮನಹಳ್ಳಿ;85;83;–2

ಹರಪನಹಳ್ಳಿ;102;132;29

ಕೊಟ್ಟೂರು;57;145;154

ಕೂಡ್ಲಿಗಿ;75;95;26

ಒಟ್ಟು;88;108;23

ದ್ರಾಕ್ಷಾಯಿಣಿ
ದ್ರಾಕ್ಷಾಯಿಣಿ
ಕಂಪಾಲೆಪ್ಪ
ಕಂಪಾಲೆಪ್ಪ
ಚೂರಿ ನಿವೇದಿತಾ
ಚೂರಿ ನಿವೇದಿತಾ
ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳುಗಳ ಹತೋಟಿಗೆ ರೈತ ಮಹಿಳೆಯೊಬ್ಬರು ಬೆಳೆಯ ಸುಳಿಯಲ್ಲಿ ಕ್ರಿಮಿನಾಶಕ ಪುಡಿ ಬಿಡುತ್ತಿರುವ ದೃಶ್ಯ   –ಪ್ರಜಾವಾಣಿ ಚಿತ್ರ/ ಶ್ರೀಹರಪ್ರಸಾದ್‌
ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಬಳಿ ಮೆಕ್ಕೆಜೋಳ ಬೆಳೆಯಲ್ಲಿ ಸೈನಿಕ ಹುಳುಗಳ ಹತೋಟಿಗೆ ರೈತ ಮಹಿಳೆಯೊಬ್ಬರು ಬೆಳೆಯ ಸುಳಿಯಲ್ಲಿ ಕ್ರಿಮಿನಾಶಕ ಪುಡಿ ಬಿಡುತ್ತಿರುವ ದೃಶ್ಯ   –ಪ್ರಜಾವಾಣಿ ಚಿತ್ರ/ ಶ್ರೀಹರಪ್ರಸಾದ್‌

Quote - ಸಕಾಲಕ್ಕೆ ಮುಂಗಾರು ಆರಂಭವಾಗುವ ನಿರೀಕ್ಷೆಯಿತ್ತು ಸ್ವಲ್ಪ ತಡವಾಗಿ ಆರಂಭವಾದರೂ ಬಿತ್ತಿದ ಮೆಕ್ಕೆಜೋಳ ಬೆಳೆ ಸೋಂಪಾಗಿ ಬೆಳೆದಿದೆ. ಕೆ.ಬಸವೇಶ ರೈತ ತಿಪ್ಪನಾಯಕನಹಳ್ಳಿ.

Quote - ನಮ್ಮ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. ಶೇಂಗಾ ಬಿತ್ತನೆ ಕಾರ್ಯ ಮುಗಿದಿದ್ದು ಈಗ ಮಳೆ ಬೇಕಾಗಿದೆ. ದ್ರಾಕ್ಷಾಯಿಣಿ ರೈತ ಮಹಿಳೆ. ಗೆದ್ದಲಗಟ್ಟ ಕೂಡ್ಲಿಗಿ ತಾಲ್ಲೂಕು.

Quote - ಮಳೆ ತಡವಾಗಿ ಬಿದ್ದರು ನಂತರ ಉತ್ತಮವಾಗಿ ಸುರಿದಿದ್ದರಿಂದ ಮುಸುಕಿನಜೋಳ ಬಿತ್ತೇವಿ. ಈಗ ಸುಳಿ ತೆನೆ ಮೂಡುತ್ತಿದ್ದು ಮಳೆಯ ಅವಶ್ಯಕತೆ ಹೆಚ್ಚಿದೆ. ಕಂಪಾಲೆಪ್ಪ ಜಿ. ನಾಗಲಾಪುರ ಗ್ರಾಮದ ರೈತ

Quote - ಮುಂಗಾರು ತಡವಾದ್ದರಿಂದ ಬಿತ್ತನೆಯೂ ತಡವಾಗಿದೆ. ಆದರೆ ಬೆಳೆಗಳು ಚೆನ್ನಾಗಿದ್ದು ತಕ್ಷಣ ಮಳೆ ಬೇಕಾಗಿದೆ ಚೂರಿ ನಿವೇದಿತಾ ರೈತ ಮಹಿಳೆ ಹಾಗೂ ಅಧ್ಯಕ್ಷರು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ. ಪೋತಲಕಟ್ಟೆ ಗ್ರಾಮ

Cut-off box - ‘ಸೈನಿಕ ಹುಳು ವಿರುದ್ಧ ಸೈನಿಕರಾಗಿ’ ವಿಜಯನಗರ ಜಿಲ್ಲೆಯಲ್ಲಿ ಬಹುತೇಕ ಪ್ರದೇಶದಲ್ಲಿ ಬೆಳೆಯುವ ಬೆಳೆ ಮೆಕ್ಕೆಜೋಳ. ಮಳೆ ಸುರಿಯುತ್ತಿರುವಾಗ ಸೈನಿಕ ಹುಳುವಿನ (ಸ್ಪೊಡೋಪೈರಾ ಫೃತಿಪರ್ಡಾ) ಬಾಧೆಯೂ ಕಾಣಿಸಿಕೊಳ್ಳುತ್ತದೆ. ಮರಿಹುಳು ಹತೋಟಿಗೆ ಶೇ 5ರ ಅಜಾಡಿರಕ್ವಿನ್‌ 5 ಮಿ.ಲೀ.ಬೇವಿನ ಮೂಲದ  ಕೀಟನಾಶಕವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡುತ್ತಾರೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್‌. ಜೈವಿಕ ಕ್ರಮವಾಗಿ ನ್ಯುಮೇರಿಯಾ 0.4 ಶಿಲೀಂದ್ರ ಕೀಟನಾಶಕಗಳನ್ನು 2 ಗ್ರಾಂ ಲೀಟರ್‌ಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಕೀಟನಾಶಕಗಳಾದ ಎಮಾಮೆಕ್ಟಿನ್‌ ಬೆಂಜೋಯೇಟ್‌ 5 ಎಸ್‌.ಜಿ ಸ್ಪೈನೋಡ್ಯಾಡ್‌ 45 ಎಸ್‌.ಸಿ. ಕ್ಲೋರ್ಯಾಂಟ್ರಿ ನಿಲಿಪ್ರೋಲ್‌18.5 ಎಸ್‌.ಸಿ. ಅನ್ನೂ ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಜಿಲ್ಲೆಯ ಕೆಲವೆಡೆ ಕಬ್ಬಿಗೆ ಗೊಣ್ಣೆಹುಳು ಬಾಧೆಯೂ ಕಾಣಿಸಿದ್ದು ಮೆಟರೈಜಿಯಂ ಜೈವಿಕ ಕಿಮಿನಾಶಕದಿಂದ ಇದನ್ನು ಹತೋಟಿಗೆ ತರಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT