ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ: ನದಿ ರೀವಕ್ಕೆ ಸಜ್ಜಾಗಿದೆ ಕಲ್ಲು, ಮರಳಿನ ಹಾಸಿಗೆ

ಅಂಕಸಮುದ್ರ ಪಕ್ಷಿಧಾಮದ ನಡುಗಡ್ಡೆಯಲ್ಲಿ ಕೃತಕ ವ್ಯವಸ್ಥೆ ಸಿದ್ಧ, ಪಕ್ಷಿಗಳ ಬರುವಿಕೆಗೆ ಕಾತರ
Published 28 ಜೂನ್ 2024, 4:57 IST
Last Updated 28 ಜೂನ್ 2024, 4:57 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ನಿರ್ಜನ ಪ್ರದೇಶದಲ್ಲಷ್ಟೇ ಸಂತಾನೋತ್ಪತ್ತಿ ಮಾಡುವ ಅಪರೂಪದ ರಿವರ್‌ ಟರ್ನ್ (ನದಿ ರೀವ) ಹಕ್ಕಿ ಅಂಕಸಮುದ್ರ ಪಕ್ಷಿಧಾಮದಿಂದ ದೂರವೇ ಉಳಿದಿತ್ತು. ಅವುಗಳನ್ನು ಇಲ್ಲಿಗೆ ಆಕರ್ಷಿಸಿ, ಸೊಬಗು ಹೆಚ್ಚಿಸುವ ಸಲುವಾಗಿ ಕಲ್ಲು, ಮರಳಿನ ಹಾಸಿಗೆ ಸಜ್ಜುಗೊಳಿಸಲಾಗಿದೆ.

ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಸಣ್ಣಪುಟ್ಟ ಕಲ್ಲುಗಳಲ್ಲಿ ಆವಾಸ ಮಾಡಿಕೊಂಡಿದ್ದ ನದಿ ರೀವ,  ಅಂಕಸಮುದ್ರ ಪಕ್ಷಿಧಾಮಕ್ಕೆ ಬರದೆ ಇದ್ದುದಕ್ಕೆ ಕಾರಣ ಏನು ಎಂದು ತಲೆಕೆಡಿಸಿಕೊಂಡಾಗ ಕಾಣಿಸಿದ್ದೇ ಅವುಗಳಿಗೆ ನಿರ್ಜನ ಪ್ರದೇಶ ಇಲ್ಲ ಎಂಬ ಸತ್ಯ. ಅದಕ್ಕಾಗಿಯೇ ಇದೀಗ ಕೃತಕವಾಗಿ ಒಂದು ನಡುಗಡ್ಡೆಯನ್ನು ಸೃಷ್ಟಿಸಲಾಗಿದೆ.

ಈ ಪಕ್ಷಿ ನಿರ್ಜನ ಪ್ರದೇಶದ ನದಿಯ ಪಾತ್ರದ ಮರಳು ದಂಡೆಯಲ್ಲಿ ಮಾರ್ಚ್‍ನಿಂದ ಮೇ ತಿಂಗಳವರೆಗೂ ಮರಳು ಅಥವಾ ಬಂಡೆಗಳ ಮೇಲೆ ಸಂತಾನೋತ್ಪತ್ತಿಗೆ ಸಿದ್ಧವಾಗುತ್ತದೆ.

168 ಪ್ರಭೇದ ಪತ್ತೆ: ಅಂಕಸಮುದ್ರ ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಈಚೆಗೆ ನಡೆಸಿದ ಹಕ್ಕಿಗಳ ಗಣತಿಯಲ್ಲಿ ದೇಶ, ವಿದೇಶಗಳ 168 ಪ್ರಭೇದಗಳ 48,825 ಪಕ್ಷಿಗಳು ಪತ್ತೆಯಾಗಿದ್ದವು. ನದಿ ರೀವ ಮಾತ್ರ ಹತ್ತಾರು ಸಂಖ್ಯೆಯಲ್ಲಿ ಬಂದು ಇತ್ತ ಸುಳಿದವಾದರೂ ಕೆಳಗಡೆ ಇಳಿಯಲಿಲ್ಲ. ತನಗೆ ಆವಾಸಕ್ಕೆ ಅಗತ್ಯ ಸ್ಥಳಾವಕಾಶ  ಇಲ್ಲ ಎಂಬುದನ್ನು ಈ ಹಕ್ಕಿ ಆಗಸದಿಂದಲೇ ನೋಡಿತ್ತು. ಕೆರೆ ಪ್ರದೇಶಕ್ಕೆ ಬಂದ ಹಲವು ಹಕ್ಕಿಗಳು ಮೇಲಿಂದ ಕಣ್ಣಾಡಿಸಿ ಬಂದ ವೇಗದಲ್ಲೇ ವಾಪಸಾಗಿದ್ದವು.

ಈ ವಿಶೇಷ ಪಕ್ಷಿಗಳ ಚಲನವಲನಗಳನ್ನು ಸತತವಾಗಿ ಗಮನಿಸಿದ್ದ ಪಕ್ಷಿ ಪ್ರೇಮಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ನದಿ ರೀವ ಹಕ್ಕಿಗಳ ಆವಾಸಕ್ಕೆ ಗಡ್ಡೆಯೊಂದನ್ನು ನಿರ್ಮಿಸಲು ಸಜ್ಜಾದರು. ಪಕ್ಷಿ ಸಂರಕ್ಷಿತ ಮೀಸಲು ಪ್ರದೇಶದ ಒಂದು ತುದಿಯಲ್ಲಿ ಸಣ್ಣ, ಸಣ್ಣ ಕಲ್ಲುಗಳನ್ನು ಹಿನ್ನೀರು ಪ್ರದೇಶದಿಂದ ಟ್ರಾಕ್ಟರ್‌ನಲ್ಲಿ ತಂದು ನಡುಗಡ್ಡೆ ನಿರ್ಮಿಸಿ, ಅದರ ಮೇಲೆ ನದಿ ರೀವ ಹಕ್ಕಿಗಳಿಗೆ ಇಷ್ಟವಾಗುವ ರೀತಿಯಲ್ಲಿಯೇ ಮರಳು ಸಹಿತ ಕಲ್ಲುಗಳನ್ನು ಹರಡಿ ಸ್ವಾಗತಕ್ಕೆ ಸಿದ್ಧಗೊಳಿಸಲಾಗಿದೆ.

ಮೀನು ಈ ಪಕ್ಷಿಗೆ ಮೃಷ್ಟಾನ್ನ. ಸ್ಥಳೀಯ ನದಿ ತೀರದ ವಾಸಿ ಆಗಿರುವ ಇದು, ಇರಾನ್‌ನಿಂದ ಭಾರತೀಯ ಉಪಖಂಡ ಸೇರಿದಂತೆ ಮ್ಯಾನ್ಮಾರ್‌ವರೆಗೆ ಹಾಗೂ ಥಾಯ್ಲೆಂಡ್‌ವರೆಗೂ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ.

ತೀವ್ರ ಬರಗಾಲದಿಂದಾಗಿ ಅಂಕಸಮುದ್ರದಲ್ಲಿ ಈ ಬಾರಿ ನೀರು ಇಳಿದುಹೋಗಿ, ಹಲವು ಕೃತಕ ನಡುಗಡ್ಡೆಗಳನ್ನು ನಿರ್ಮಿಸುವುದು ಸಾಧ್ಯವಾಗಿದೆ. ಸಹಜವಾಗಿಯೇ ಅಲ್ಲಿ ಬೆಳೆಯುವ ಜಾಲಿ ಹಾಗೂ ಇತರ ಮುಳ್ಳಿನ ಗಿಡಗಳು ಹಕ್ಕಿಗಳಿಗೆ ಚೊಕ್ಕ ಮನೆಗಳಾಗಿ ಸಿಗಲಿದ್ದು, ಹಕ್ಕಿಗಳ ಸಂಖ್ಯೆ 50 ಸಾವಿರ ಮೀರಿ ಪಕ್ಷಿಪ್ರಿಯರನ್ನು ರಂಜಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

‘ನದಿ ರೀವ’ ಗಳಿಗೆ ವಿಶೇಷವಾದ ನಡುಗಡ್ಡೆಯೊಂದನ್ನು ನಿರ್ಮಿಸಲಾಗಿದೆ ಬಾನಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಹೆಚ್ಚುವರಿ ನಡುಗಡ್ಡೆ ನಿರ್ಮಿಸುವ ಚಿಂತನೆ ಇದೆ

-ರೇಣುಕಮ್ಮ ವಲಯ ಅರಣ್ಯಾಧಿಕಾರಿ

ಮಧ್ಯಮ ಗಾತ್ರದ ಹಕ್ಕಿ ನದಿ ರೀವ

ಮಧ್ಯಮ ಗಾತ್ರದ ಹಕ್ಕಿ. 38ರಿಂದ 43ಸೆಂ.ಮೀ ಉದ್ದ ಇದ್ದು ಮೇಲ್ಭಾಗ ಗಾಢ ಬೂದುಬಣ್ಣದಿಂದ ಕೂಡಿದೆ. ಬಿಳಿಯ ಕೆಳಭಾಗ ಬಳಕುವ ಸೀಳುಬಾಲ ಉದ್ದನೆಯ ಹಾರುರೆಕ್ಕೆಯ ತುದಿಗಳು ಚೂಪಾಗಿರುತ್ತವೆ. ವಿಶೇಷವೆಂದರೆ ಹಳದಿ ಕೊಕ್ಕು ಕೆಂಪು ಕಾಲು ಇರುತ್ತದೆ. ಸಂತಾನ ಸಮಯದಲ್ಲಿ ತಲೆ ಕಪ್ಪಾಗಿದ್ದು ಚಳಿಗಾಲದಲ್ಲಿ ತಲೆ ಬೂದುಬಿಳಿ ಚುಕ್ಕೆ ಗೆರೆಗಳಿಂದ ಆವೃತವಾಗಿರುತ್ತದೆ. ಗಂಡು ಮತ್ತು ಹೆಣ್ಣು ನದಿ ರೀವಗಳನ್ನು ಕೇವಲ ನೋಟದಿಂದ ಗುರುತಿಸಲು ಸಾಧ್ಯವಾಗದು ಎರಡೂ ಒಂದೇ ರೀತಿಯಾಗಿರುವುದು ಜೀವವೈವಿಧ್ಯದ ಕೌತುಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT