ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು ಮಠದ ಪೀಠಾಧಿಪತಿಯಾಗಿ ಪೀಠ ಅಲಂಕರಿಸಿದ ಬಸವಲಿಂಗ ಸ್ವಾಮೀಜಿ

Last Updated 24 ಮಾರ್ಚ್ 2022, 11:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿವಿಧ ಮಠಗಳ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಅಪಾರ ಭಕ್ತಸ್ತೋಮದ ನಡುವೆ ಗುರುವಾರ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ನೂತನ ಪೀಠಾಧಿಪತಿಯಾಗಿ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಅವರು ಪೀಠ ಅಲಂಕರಿಸಿದರು.

ಒಳ ಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ‘ಒಂದು ಕಾಲದಲ್ಲಿ ಕೊಟ್ಟೂರು ಮಠದಲ್ಲಿ ಗೌಳೇರರು ವಾಸವಾಗಿದ್ದರು. ದನ, ಕರುಗಳನ್ನು ಕಟ್ಟುತ್ತಿದ್ದರು. ಅಂತಹ ಮಠಕ್ಕೆ ಹೊಸ ರೂಪ ಕೊಟ್ಟು ಎತ್ತರಕ್ಕೆ ಬೆಳೆಸಿದ ಕೀರ್ತಿ ಸಂಗನಬಸವ ಸ್ವಾಮೀಜಿ ಅವರಿಗೆ ಸಲ್ಲುತ್ತದೆ. ಗಡಿನಾಡಿನಲ್ಲಿ ಶಾಲೆ ಆರಂಭಿಸಿದ್ದರು. ಅವರ ಉತ್ತರಾಧಿಕಾರಿಯಾಗಿ ಪೀಠ ಅಲಂಕರಿಸಿರುವ ಬಸವಲಿಂಗ ಸ್ವಾಮೀಜಿ ಅವರು ಅದೇ ಮಾರ್ಗದಲ್ಲಿ ಮುನ್ನಡೆಯುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.

‘ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಮಠ ಬೆಳೆದಿದೆ. 80 ಮಠಗಳು ಬೇರೆಯವರ ಸ್ವಾಧೀನಕ್ಕೆ ಹೋಗಿದ್ದವು. ಅವುಗಳಲ್ಲಿ ಬಹುತೇಕ ಮರಳಿ ಪಡೆದಿದ್ದಾರೆ. 700ರಿಂದ 800 ಎಕರೆ ಆಸ್ತಿ ಮಠದ ಹೆಸರಿನಲ್ಲಿದೆ. ಅದನ್ನು ಸುವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗಬೇಕಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ಸಂಗನಬಸವ ಸ್ವಾಮೀಜಿ ವಿಜಯನಗರ ಜಿಲ್ಲೆಯ ನಡೆದಾಡುವ ದೇವರಾಗಿದ್ದರು. ಸಾಮರಸ್ಯಕ್ಕೆ ಹೆಸರಾಗಿದ್ದರು. ಎಲ್ಲ ವರ್ಗದವರು ಮಠದ ಭಕ್ತರಾಗಿದ್ದಾರೆ. ಮಠವನ್ನು ಸ್ನೇಹ, ಪ್ರೀತಿಯಿಂದ ಮುನ್ನಡೆಸಿದ್ದರು. ದ್ವೇಷದ ಆಲೋಚನೆಯೇ ಅವರಲ್ಲಿ ಇರಲಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಕೊಟ್ಟೂರು ಮಠ ಎಂದೂ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷ ಎನ್‌. ತಿಪ್ಪಣ್ಣ ಮಾತನಾಡಿ, ವೀರಶೈವರು ಬೇರೆ, ಲಿಂಗಾಯತರು ಬೇರೆ ಎಂಬ ಗೊಂದಲ ಏರ್ಪಟ್ಟಿದ್ದಾಗ ಸಂಗನಬಸವ ಸ್ವಾಮೀಜಿ ಅವರು ಅನೇಕ ಜನ ಸ್ವಾಮೀಜಿಗಳನ್ನು ಭೇಟಿಯಾಗಿ ಅವರ ಮನವೊಲಿಸಿ ಗೊಂದಲ ಬಗೆಹರಿಸಿದ್ದರು. ಲಿಂಗಾಯತರಲ್ಲಿ 104 ಒಳಪಂಗಡಗಳಿವೆ. ಆದರೆ, ಅದನ್ನೇ ಉದ್ಯೋಗ ಮಾಡಿಕೊಳ್ಳಬಾರದು. ಲಿಂಗಾಯತರೆಲ್ಲರೂ ಒಂದೇ ಎಂದು ತಿಳಿಸಿದರು.

ಹಂಪಿ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಸದಸ್ಯತ್ವ

‘ಹಂಪಿ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸ್ವಾಮೀಜಿ ಶಾಶ್ವತ ಸದಸ್ಯರಾಗಿರುತ್ತಾರೆ. ಎಂದೇ ಉತ್ಸವ ನಡೆಯಲಿ. ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು. ನಗರದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಬೇಕೆನ್ನುವುದು ಸಂಗನಬಸವ ಸ್ವಾಮೀಜಿಯವರ ಅಭಿಲಾಷೆಯಾಗಿತ್ತು ಎಂದು ಲಿಂಗಾಯತ ಸಮಾಜದ ಮುಖಂಡರು ಅವರ ಗಮನಕ್ಕೆ ತಂದರು. ಆದರೆ, ಅದಕ್ಕವರು ಪ್ರತಿಕ್ರಿಯಿಸಲಿಲ್ಲ.

ಗುರುಗಳ ನೆನೆದು ಕಣ್ಣೀರು ಹಾಕಿದರು

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ನೂತನ ಪೀಠಾಧಿಪತಿಯಾಗಿ ಪೀಠ ಅಲಂಕರಿಸಿ ಮಾತನಾಡುವಾಗ ಬಸವಲಿಂಗ ಸ್ವಾಮೀಜಿ ಅವರು ಗುರುಗಳಾದ ಸಂಗನಬಸವ ಸ್ವಾಮೀಜಿ ಅವರನ್ನು ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದರು. ಒಂದು ಕ್ಷಣ ಭಕ್ತಸಮೂಹದಲ್ಲಿ ಮೌನ ಆವರಿಸಿತ್ತು. ಅದರ ನಂತರ ಮಾತು ಮುಂದುವರೆಸಿ ಗುರುಗಳನ್ನು ನೆನೆಯುತ್ತ ಭಾವುಕರಾಗಿ ಕಣ್ಣೀರು ಹಾಕಿದರು.
‘ಕೊಟ್ಟೂರು ಮಠಕ್ಕೆ 500 ವರ್ಷಗಳ ಇತಿಹಾಸವಿದೆ. ವಿಜಯನಗರದ ಪ್ರೌಢದೇವರಾಯನ ಕಾಲದಲ್ಲಿ ಮಠಕ್ಕೆ 67,000 ಎಕರೆ ಜಮೀನು ದಾನದ ರೂಪದಲ್ಲಿ ನೀಡಲಾಗಿತ್ತು. ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಮಠದ ಕೊಡುಗೆ ಬಹಳ ದೊಡ್ಡದಿದೆ. 2005ರಲ್ಲಿ ನಾನು ಶಿವಯೋಗ ಮಂದಿರಕ್ಕೆ ಸೇರಿದೆ. ಆದರೆ, ಬಹಳ ಕಡಿಮೆ ಅವಧಿಯಲ್ಲಿ ನನ್ನನ್ನು ಗುರುತಿಸಿ ಈ ಪೀಠದ ಜವಾಬ್ದಾರಿಯನ್ನು ನನ್ನ ಗುರುಗಳು ವಹಿಸಿದ್ದಾರೆ. ಗುರುಗಳು ಹಾಗೂ ಭಕ್ತರ ನಿರೀಕ್ಷೆಯಂತೆ ಮಠ ಮುನ್ನಡೆಸುವೆ’ ಎಂದು ವಾಗ್ದಾನ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ, ಶಾಸಕ ಜೆ.ಎನ್‌. ಗಣೇಶ್‌, ಮುಖಂಡರಾದ ಎಚ್‌.ಆರ್‌. ಗವಿಯಪ್ಪ, ಜಿ.ಎಸ್‌. ಪಾಟೀಲ, ಫಿರೋಜಾಬಾದ್‌ನ ಗುರುಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ನೆರಡಗುಂಬದ ಪಂಚಮ ಸಿದ್ಧಲಿಂಗ ಸ್ವಾಮೀಜಿ, ಖೇಳಗಿಯ ಶಿವಲಿಂಗ ಸ್ವಾಮೀಜಿ, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮೀಜಿ, ಗುಳೇದಗುಡ್ಡದ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT