ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ‘ಬಿಜೆಪಿ ಸೋಲಿಗೆ ನಾಯಕರೇ ಕಾರಣ’

ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ: ಲೋಕಸಭಾ, ಜಿ.ಪಂ, ತಾ.ಪಂ ಚುನಾವಣೆಗೆ ತಯಾರಿ
Published 7 ಜೂನ್ 2023, 15:55 IST
Last Updated 7 ಜೂನ್ 2023, 15:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆ ಸಹಿತ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರ್ಯಕರ್ತರು ಕಾರಣ ಅಲ್ಲ, ನಾಯಕರೇ ಕಾರಣ. ಅವರ ವರ್ತನೆ ಇನ್ನಾದರೂ ಬದಲಾದರೆ ಮಾತ್ರ ಪಕ್ಷಕ್ಕೆ ಭವಿಷ್ಯ ಇದೆ ಎಂಬ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.

ಬುಧವಾರ ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಹಡಗಲಿ ಶಾಸಕ ಕೃಷ್ಣ ನಾಯ್ಕ್‌ ಸಹಿತ ಹಲವು ನಾಯಕರು ಈ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ತೆಗೆದರು ಎಂಬುದಕ್ಕೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಲಕ್ಷ್ನಣ ಸವದಿ, ಜಗದೀಶ ಶೆಟ್ಟರ್‌ ಅವರನ್ನು ಪಕ್ಷದಿಂದ ದೂರ ಇಡುವಲ್ಲಿ ಸಹ ಕೆಲವು ನಾಯಕರ ವರ್ತನೆ ಆಕ್ಷೇಪಾರ್ಹವಾಗಿತ್ತು. ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ಕಿತ್ತುಕೊಳ್ಳುವ ಅಗತ್ಯವೇ ಇರಲಿಲ್ಲ. ಕೇಂದ್ರ ಮತ್ತು ರಾಜ್ಯದ ಕೆಲವು ನಾಯಕರ ಧೋರಣೆಗಳು, ಏಕಪಕ್ಷೀಯ ನಿರ್ಧಾರಗಳಿಂದಾಗಿಯೇ ಪಕ್ಷಕ್ಕೆ ಸೋಲು ಉಂಟಾಗಿದೆ. ಇಲ್ಲಿ ಕಾರ್ಯಕರ್ತರು ಯಾವತ್ತೂ ತಮ್ಮ ನಿಷ್ಠೆಯನ್ನು ಬಿಟ್ಟುಕೊಟ್ಟಿಲ್ಲ‘ ಎಂದು ಸಭೆಯಲ್ಲಿ ಹಲವು ಮಂದಿ ಹೇಳಿದರು.

‘ಹಡಗಲಿ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಅಂತರದ ಗೆಲುವು ಸಿಗಲೇಬೇಕಿತ್ತು. ಆದರೆ ಗೆಲುವಿನ ಅಂತರ ಬಹಳಕಡಿಮೆಯಾಗಲು ನಮ್ಮ ನಾಯಕರ ವರ್ತನೆಯೇ ಕಾರಣ. ಜಿಲ್ಲೆಯ ಇತರೆಡೆ ಸಹ ನಾವು ಗೆಲ್ಲಬಹುದಾಗಿತ್ತಾದರೂ ಆ ಅವಕಾಶ ಕೈಚೆಲ್ಲಲು ನಮ್ಮ ನಾಯಕರೇ ಕಾರಣ. ಪ್ರಧಾನಿ ಅವರ ವರ್ಚಸ್ಸು ಸಹ ಇಲ್ಲಿ ಕೆಲಸ ಮಾಡಲಿಲ್ಲ. ಶೇ 40 ಕಮಿಷನ್‌ ಆರೋಪವನ್ನು ಸಹ ಅಲ್ಲಗಳೆಯುವ ಪ್ರಯತ್ನ ನಡೆಯಲಿಲ್ಲ. ಇದರಿಂದಾಗಿ ಪಕ್ಷಕ್ಕೆ ಬಹಳ ದೊಡ್ಡ ಹೊಡೆತ ಬಿತ್ತು‘ ಎಂದು ಸಭೆಯಲ್ಲಿ  ಮಾತನಾಡಿದ ಹಲವರು ಹೇಳಿದರು.

ಶ್ರೀರಾಮುಲು ಹಿಂಬಾಗಿಲ ಪ್ರವೇಶ ಯತ್ನ?: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ದೇವೇಂದ್ರಪ್ಪ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಸೋತಿರುವ ಬಿ.ಶ್ರೀರಾಮುಲು ಅವರಿಗೆ ಸಹ ಟಿಕೆಟ್ ಸಿಗಲಾರದು. ಆದರೆ ಶ್ರೀರಾಮುಲು ಅವರು ತಮ್ಮ ಆಪ್ತ ವ್ಯಕ್ತಿಯೊಬ್ಬರಿಗೆ ಟಿಕೆಟ್‌ ದೊರಕಿಸಿಕೊಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು. ಅಭ್ಯರ್ಥಿಗಳನ್ನು ಮೊದಲಾಗಿಯೇ ಪ್ರಕಟಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು  ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು  ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯೂ ಪಾರದರ್ಶಕವಾಗಿರಬೇಕು. ಯಾರನ್ನೋ ತಂದು ಹೇರುವ ಪ್ರಯತ್ನವನ್ನು ಇನ್ನಾದರೂ ಬಿಡಬೇಕು ಎಂದು ಒತ್ತಾಯಿಸಲಾಯಿತು ಎಂದು ಹೇಳಲಾಗಿದೆ.

ಸಭೆಯಲ್ಲಿ ಹಡಗಲಿ ಶಾಸಕ ಕೃಷ್ಣ ನಾಯ್ಕ್, ಮಾಜಿ ಶಾಸಕ ಚಂದ್ರ ನಾಯ್ಕ್, ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ರಾಘವೇಂದ್ರ, ಜಿಲ್ಲಾ ವಕ್ತಾರ ಅಶೋಕ ಜೀರೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಜಿಲ್ಲಾ ಹಾಗೂ ಮಂಡಲಗಳ ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಎಸ್ಸಿ ಮೋರ್ಚಾಗಳ ಅಧ್ಯಕ್ಷರು, ಮಂಡಲಗಳ ಅಧ್ಯಕ್ಷರು, ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಸೇರಿ ಹಲವರು ಹಾಜರಿದ್ದರು.

ಸೋತ ಅಭ್ಯರ್ಥಿಗಳು ಮತ್ತು ಕೆಲವು ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.

Highlights - ಸೋಲಿನ ಪರಾಮರ್ಶೆಯ ವೇಳೆ ನಾಯಕರತ್ತ ವಾಗ್ಬಾಣ ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಉದ್ವಿಗ್ನ ಹೊಸಪೇಟೆಯಲ್ಲೇ ಇದ್ದರೂ ಸಭೆಗೆ ಬಾರದ ಸ್ಥಳೀಯ ನಾಯಕರು

Cut-off box - ‘ಸೋಲಿಗೆ ಯಾರೂ ದಿಕ್ಕೇ ಇಲ್ಲ’ ‘ಗೆಲುವಿಗೆ ಎಲ್ಲರೂ ತಂದೆಯಾಗುತ್ತಾರೆ ಆದರೆ ಸೋಲಿಗೆ ಯಾರೂ ದಿಕ್ಕೇ‌ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೆಲುವು ಸೋಲು ಸಾಮಾನ್ಯ. ಕಾರಣಗಳು ಹತ್ತು ಹಲವು ಇರುತ್ತವೆ. ಗೆಲುವಿಗೆ ಒಂದೇ ಕಾರಣ ಗೆಲುವು ಅಷ್ಟೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು. ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ‘ಪಕ್ಷಕ್ಕೆ ಕಾರ್ಯಕರ್ತರೆ ಆಸ್ತಿ. ಇಡೀ ರಾಜ್ಯದ ಕಾರ್ಯಕರ್ತರ ಮಾತುಗಳನ್ನು ಪಕ್ಷ ಕೇಳಿಸಿಕೊಂಡಿದೆ. ನಿಮ್ಮ ಅಭಿಪ್ರಾಯಗಳನ್ನು ಪರಿಗಣಿಸಿ ಬರುವ ದಿನಗಳಲ್ಲಿ ಸರಿಪಡಿಸಲಾಗುವುದು’ ಎಂದರು. ‘ಎಲ್ಲಿ ಎಡವಿದ್ದೇವೆ ಎಂದು ಪದಾಧಿಕಾರಿಗಳು ಕಾರ್ಯಕರ್ತರು ಹೇಳಿದ್ದೀರಿ. ನಿಮ್ಮ ಭಾವನೆಗಳಿಗೆ ಬೆಲೆ ನೀಡಲಾಗುವುದು. ನಾವು ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಹುಡುಕುವ ಕೆಲಸ ಮಾಡಬೇಕಿದೆ. ಈಗ ಸೋತಿದ್ದೇವೆ. ಮುಂದೆ ಗೆದ್ದೇ ಗೆಲ್ಲುತ್ತೇವೆ. ಈ ಸೋಲು ಕ್ಷಣಿಕ ರಾಜಕಾರಣದಲ್ಲಿ ಇದೆಲ್ಲವೂ ಮಾಮೂಲಿ. ಯಾರೂ ಸಹ ಸಂಯಮ ಕಳೆದುಕೊಳ್ಳದೇ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗೋಣ’ ಎಂದು ಮನವಿ ಮಾಡಿದರು. ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿ ‘ವಿಧಾನಸಭಾ ಚುನಾವಣೆಯಲ್ಲಿ ನಾವು ಸೋಲಲು ಯಾವ ಕಾರಣಗಳು ಮುಖ್ಯವಾದವು ಎಂದು ನಮಗೆ ತಿಳಿದಿದೆ. ಎಲ್ಲಿ ಎಡವಿದ್ದೇವೆ ಯಾಕೆ ಬಿದ್ದಿದ್ದೇವೆ ಎನ್ನುವುದು ಅರಿವಾಗಿದೆ’ ಎಂದರು. ‘ಬರುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರಕ್ಕೆ ಯಾರಿಗಾದರೂ ಟಿಕೆಟ್ ನೀಡಿದರೂ ನಾವೆಲ್ಲ ಸೇರಿ ಗೆಲ್ಲಿಸೋಣ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಒಂದುವೇಳೆ ಪಕ್ಷ ಬೇರೆಯವರಿಗೆ ಅವಕಾಶ ನೀಡಬೇಕೆಂದು ನಿರ್ಣಯ ಮಾಡಿದರೆ ಅದಕ್ಕೆ ನನ್ನ ಬೆಂಬಲವಿದೆ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಬರಲಿರುವ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಚುನಾವಣಾ ನಿಮಿತ್ತ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಿ ಜಿ.ಪಂ ತಾ.ಪಂ ನಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕಿದೆ ಎಂದು ತಿಳಿಸಿದರು.

Cut-off box - ‘ಕಾಂಗ್ರೆಸ್‌ ಕಾರಣ ಅಲ್ಲ’ ‘ನಮ್ಮ‌ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಲು ಕಾಂಗ್ರೆಸ್ ಕಾರಣವಲ್ಲ. ನಮ್ಮದೇ ಕಾರ್ಯಕರ್ತರು ಇದಕ್ಕೆ ಕಾರಣ. ಅನೇಕರು ನಮ್ಮ ಪಕ್ಷದಲ್ಲೇ ಇದ್ದು ಬೇರೆ ಪಕ್ಷಕ್ಕೆ ಬೆಂಬಲ ನೀಡಿಲ್ಲ ಎಂಬುದನ್ನು ಆತ್ಮಸಾಕ್ಷಿಯಿಂದ ಹೇಳಲಿ ನೋಡೋಣ. ಅನೇಕರು ನೀಡಿದ ಒಳಹೊಡೆತದಿಂದಾಗಿ ಪಕ್ಷ ಇವತ್ತು ರಾಜ್ಯದಲ್ಲಿ ಸೋಲು ಕಾಣಬೇಕಾಯಿತು’ ಎಂದು ಶಾಸಕ ಕೃಷ್ಣ ನಾಯ್ಕ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT