ಶುಕ್ರವಾರ, ಅಕ್ಟೋಬರ್ 7, 2022
24 °C

ತುಂಗಭದ್ರಾ ಜಲಾಶಯ ನೀರು ಹೊರಕ್ಕೆ: ವಿಜಯನಗರ ಜಿಲ್ಲೆಯ ಹಲವು ಸೇತುವೆ ಮುಳುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಜಿಲ್ಲೆಯ ಹಲವೆಡೆ ಸೇತುವೆಗಳು ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ.

ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು-ಗರ್ಭಗುಡಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ಎರಡೂ ಗ್ರಾಮಸ್ಥರು ಕಣವಿ ಗ್ರಾಮದ ಮೂಲಕ ಸುತ್ತು ಬಳಸಿ ಸಂಚರಿಸುತ್ತಿದ್ದಾರೆ. ಸೇತುವೆ ಮೂಲಕ ಜನ ಓಡಾಡದಂತೆ ತಡೆಯಲು ಹಲುವಾಗಲು ಗ್ರಾಮದಲ್ಲಿ ಬ್ಯಾರಿಕೇಡ್‌ ಹಾಕಿ, ಸಂಚಾರ ನಿರ್ಬಂಧಿಸಲಾಗಿದೆ.

ನಂದ್ಯಾಲ-ನಿಟ್ಟೂರು ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯೂ ಮುಳುಗುವ ಹಂತಕ್ಕೆ ಬಂದಿದೆ. ನಿಟ್ಟೂರು,  ಬಸಾಪುರ, ನಂದ್ಯಾಲ, ತಾವರಗುಂದಿ ವ್ಯಾಪ್ತಿಯ ನದಿ ದಡದಲ್ಲಿರುವ ಗದ್ದೆಗಳಲ್ಲಿ ನಾಟಿ ಮಾಡಿದ್ದ 50 ಎಕರೆ ಭತ್ತ ಜಲಾವೃತಗೊಂಡಿದೆ.  ಹಲುವಾಗಲು, ಗರ್ಭಗುಡಿ ಗ್ರಾಮದಲ್ಲಿ ಮೆಕ್ಕೆಜೋಳ ಹಾಳಾಗಿದೆ.

ಹೊಸಪೇಟೆ ಸಮೀಪದ ಕಂಪ್ಲಿ–ಗಂಗಾವತಿ ಸೇತುವೆ ಮಂಗಳವಾರ ಸಂಪೂರ್ಣ ಮುಳುಗಿದೆ. ಸೋಮವಾರ ಸೇತುವೆಗೆ ಸಮನಾಗಿ ನೀರು ಹರಿಯುತ್ತಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಮಧ್ಯಾಹ್ನವೇ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಎಲ್ಲ ವಾಹನಗಳು ಬುಕ್ಕಸಾಗರ–ಕಡೇಬಾಗಿಲು ಸೇತುವೆ ಮೂಲಕ ಸಂಚರಿಸುತ್ತಿವೆ. ಕಂಪ್ಲಿಯ ಬಾಳೆ, ಕಬ್ಬು, ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ಮೀನುಗಾರರ ಕಾಲೊನಿಗೆ ಅಪಾರ ನೀರು ನುಗ್ಗಿದೆ.

ಹೊರಹರಿವು ಭಾರಿ ಹೆಚ್ಚಳ
ತುಂಗಭದ್ರಾ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಳವಾಗಿರುವುದರಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1,632 ಅಡಿ ನೀರಿನ ಸಂಗ್ರಹವಿದೆ. ಪ್ರತಿ ಗಂಟೆಗೆ 1.36 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. 1.58 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. 10,465 ಕ್ಯುಸೆಕ್‌ ನೀರು ಕಾಲುವೆಗಳಿಗೆ ಬಿಡಲಾಗುತ್ತಿದೆ. 25 ಕ್ರಸ್ಟ್‌ಗೇಟ್‌ಗಳನ್ನು 3.5 ಅಡಿ, ಎಂಟು ಗೇಟ್‌ಗಳನ್ನು 1.5 ಅಡಿ ಮೇಲಕ್ಕೆತ್ತಿ ನೀರು ಹರಿಸಲಾಗುತ್ತಿದೆ.

ಸಂಪೂರ್ಣ ಮುಳುಗಿದ ಸ್ಮಾರಕಗಳು
ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಭಾಗಶಃ ಮುಳುಗಡೆಯಾಗಿದ್ದ ಹಂಪಿ ಸ್ನಾನಘಟ್ಟ, ಕರ್ಮಮಂಟಪ, ಪುರಂದರದಾಸರ ಮಂಟಪ, ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನ, ವಿಜಯನಗರ ಕಾಲದ ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಂಪಿ ಪರಿಸರದಿಂದ ಹರಿಯುವ ತುಂಗಭದ್ರಾ ನದಿ ತಟದಲ್ಲಿ ಪೊಲೀಸರು, ಗೃಹರಕ್ಷಕರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು