ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ; ಸಕಾಲಕ್ಕೆ ಸಿಗದ ಸೇವೆ

ಹೊಸಪೇಟೆ ನಗರಸಭೆಯಲ್ಲಿ ದುರಾಡಳಿತ, ರಾಜಕೀಯ ಹಸ್ತಕ್ಷೇಪದ ಆರೋಪ
Last Updated 21 ಜೂನ್ 2022, 8:34 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ದುರಾಡಳಿತ ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿರುವ ಇಲ್ಲಿನ ನಗರಸಭೆಯಿಂದ ಸಾರ್ವಜನಿಕರಿಗೆ ಸಕಾಲಕ್ಕೆ ಸೇವೆಗಳು ಸಿಗುತ್ತಿಲ್ಲ.

‘ಹಣವಿದ್ದವರಿಗೆ ಕೆಲಸ’ ಎಂಬಂತಹ ಪರಿಸ್ಥಿತಿ ನಗರಸಭೆಯಲ್ಲಿ ನಿರ್ಮಾಣವಾಗಿದೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿ ಕೆಲ ವರ್ಷಗಳಿಂದ ನಗರಸಭೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳು. ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಇಲ್ಲಿನ ಮೂವರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಅಮಾನತುಗೊಳಿಸಿದ್ದಾರೆ. ಇನ್ನೂ ಮೂವರ ಅಮಾನತಿಗೆ ಪೌರಾಡಳಿತ ನಿರ್ದೇಶನಾಲಯಕ್ಕೆ ಶಿಫಾರಸು ಮಾಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಸಿರುವ ಆರೋಪ ಇವರ ಮೇಲಿದೆ. ಈ ಕುರಿತು ಠಾಣೆಗೂ ದೂರು ಸಲ್ಲಿಕೆಯಾಗಿದೆ.

ನಗರಸಭೆಯಿಂದ ಫಾರಂ ನಂಬರ್‌ 3 ಪಡೆಯಬೇಕೆಂದರೆ ದೊಡ್ಡ ಯುದ್ದ ಗೆದ್ದಂತೆ ಎನ್ನುತ್ತಾರೆ ಸಾರ್ವಜನಿಕರು. ಇದನ್ನು ಪುಷ್ಟೀಕರಿಸುವ ರೀತಿಯಲ್ಲಿ ಆಡಳಿತವೂ ನಡೆದುಕೊಂಡು ಬಂದಿದೆ. ಸಾರ್ವಜನಿಕರೇಕೆ ಸಾಮಾನ್ಯ ಸಭೆಗಳಲ್ಲಿ ಸ್ವತಃ ನಗರಸಭೆಯ ಸಿಬ್ಬಂದಿಯೇ ಸಕಾಲಕ್ಕೆ ಫಾರಂ ನಂಬರ್‌ 3 ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಹಕ್ಕೊತ್ತಾಯ ಮಾಡಿದ್ದಾರೆ. ಇತರೆ ಸೇವೆಗಳು ನಿಗದಿತ ಕಾಲಮಿತಿಯಲ್ಲಿ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದಿನ ನಗರಸಭೆಯ ಆಡಳಿತದ ಅವಧಿಯಿಂದ ಈಗಿನವರೆಗೆ ಸದಸ್ಯರು ಮೇಲಿಂದ ಮೇಲೆ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಇನ್ನೂ ಕಗ್ಗಂಟಾಗಿಯೇ ಉಳಿದಿದೆ.

ಆದರೆ, ಇತ್ತೀಚೆಗೆ ಜಿಲ್ಲಾಡಳಿತ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿದೆ. ಆದರೆ, ಕಾರ್ಯನಿರ್ವಹಣೆಯಲ್ಲೂ ಬದಲಾವಣೆ ಬಂದಾಗ ಮಾತ್ರ ಅದಕ್ಕೊಂದು ಅರ್ಥ. ಒಂದೆಡೆ ದುರಾಡಳಿತದಿಂದ ಇಲ್ಲಿನ ನಗರಸಭೆ ದಿಕ್ಕು ತಪ್ಪಿದರೆ, ಇನ್ನೊಂದೆಡೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ.

ನಗರಸಭೆಗೆ ಸರ್ಕಾರದಿಂದ ಒಟ್ಟು 540 ಹುದ್ದೆಗಳು ಮಂಜೂರಾಗಿವೆ. 180 ಹುದ್ದೆಗಳು ಭರ್ತಿಯಾಗಿವೆ. ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕಾರ್ಯಭಾರ ಹೆಚ್ಚಾಗಿದೆ. ಹೊಸಪೇಟೆ ಈಗ ಜಿಲ್ಲಾ ಕೇಂದ್ರ ಆಗಿರುವುದರಿಂದ ಕೆಲಸದ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಸಕಾಲಕ್ಕೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ನೇರ ಸಾರ್ವಜನಿಕರ ಮೇಲೆ ಬೀಳುತ್ತಿದೆ.

ಈಗಿರುವ ನಗರಸಭೆಯಲ್ಲಿ ಕೆಲಸ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. ಇಂತಹದ್ದರಲ್ಲಿ ಇದನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆ ಮಾಡಲು ಯೋಚಿಸಲಾಗುತ್ತಿದೆ. ಈಗಿರುವ ನಗರಸಭೆಯಾದರೂ ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಅನಂತರ ಮೇಲ್ದರ್ಜೆಗೇರಿಸುವುದರ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

‘ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಆದರೆ, ಹಣವಂತರ ಕೆಲಸಗಳು ಬೇಗ ಆಗುತ್ತವೆ. ಬಡವರು, ಮಧ್ಯಮ ವರ್ಗದವರ ಕೆಲಸಗಳಾಗಬೇಕೆಂದರೆ ಕೈಬಿಸಿ ಮಾಡಬೇಕು. ಇಲ್ಲವೆಂದರೆ ತಿಂಗಳುಗಟ್ಟಲೇ ಕಡತ ಮುಟ್ಟುವುದೇ ಇಲ್ಲ. ರಾಜ್ಯದಲ್ಲಿ ಎಲ್ಲೂ ಇಲ್ಲದ ಸಮಸ್ಯೆ ಹೊಸಪೇಟೆ ನಗರಸಭೆಯಲ್ಲಿ ಇದೆ. ಸಾಮಾನ್ಯ ಜನರು ಫಾರಂ ನಂಬರ್‌ 3 ಪಡೆಯುವುದು ಅಷ್ಟು ಸುಲಭವಾದುದಲ್ಲ’ ಎನ್ನುತ್ತಾರೆ ಚಿತ್ತವಾಡ್ಗಿ ನಿವಾಸಿ ಹುಲುಗಪ್ಪ, ಬಸವರಾಜ, ಜಾಕೀರ್‌ ಹುಸೇನ್‌.

/ಬಾಕ್ಸ್‌/

ಪದೇ ಪದೇ ಬದಲಾವಣೆ:

ಹೊಸಪೇಟೆ ನಗರಸಭೆಗೆ ಪೌರಾಯುಕ್ತರಾಗಿ ಬರುವವರು ಒಂದು ವರ್ಷ ಕೆಲಸ ಮಾಡಿದರೆ ಹೆಚ್ಚು ಎಂಬ ಪರಿಸ್ಥಿತಿ ಇದೆ. ಅತಿಯಾದ ರಾಜಕೀಯ ಹಸ್ತಕ್ಷೇಪ ಇರುವುದರಿಂದ ಯಾರೇ ಇಲ್ಲಿಗೆ ಬಂದರೂ ಕೆಲಸ ನಿರ್ವಹಿಸಲು ಇಷ್ಟಪಡುವುದಿಲ್ಲ ಎನ್ನುತ್ತವೆ ನಗರಸಭೆಯ ಮೂಲಗಳು.

ಪಿ. ಜಯಲಕ್ಷ್ಮಿ ಅವರು ಪೌರಾಯುಕ್ತರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಅವರನ್ನು ಏಕಾಏಕಿ ಎತ್ತಂಗಡಿ ಮಾಡಲಾಯಿತು. ಅದಾದ ನಂತರ ಮನ್ಸೂರ್‌ ಅಲಿ ಕೂಡ ಸುಧಾರಣೆ ತರಲು ಪ್ರಯತ್ನಿಸುತ್ತಿದ್ದರು. ಒಂದು ವರ್ಷದೊಳಗೆ ಅವರನ್ನು ವರ್ಗಾವಣೆಗೊಳಿಸಲಾಯಿತು. ಹಾಲಿ ಪೌರಾಯುಕ್ತ ಬಿ.ಎಸ್‌. ರಮೇಶ್‌ ಅವರು ಮೇ ತಿಂಗಳಲ್ಲಿ ಅಧಿಕಾರ ಸ್ವೀಕರಿಸಿದ್ದರು. ಒಂದು ತಿಂಗಳು ಕೂಡ ಪೂರೈಸಿರಲಿಲ್ಲ. ಅಷ್ಟರೊಳಗೆ ಅವರು ಅನಾರೋಗ್ಯದಿಂದ ಸುದೀರ್ಘ ರಜೆ ಮೇಲೆ ತೆರಳಿದ್ದಾರೆ. ಆದರೆ, ರಾಜಕೀಯ ಹಸ್ತಕ್ಷೇಪಕ್ಕೆ ಬೇಸತ್ತು ಅವರು ದೀರ್ಘ ರಜೆ ಮೇಲೆ ಹೋಗಿದ್ದಾರೆ ಎಂದು ಗೊತ್ತಾಗಿದೆ.

ನಗರಸಭೆಯಲ್ಲಿನ ದುರಾಡಳಿತ ತೊಲಗಿಸಬೇಕಾದರೆ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಬೇಕು. ಸಿಬ್ಬಂದಿ ಸ್ವತಂತ್ರ, ಪಾರದರ್ಶಕವಾಗಿ ಕೆಲಸ ನಿರ್ವಹಿಸುವ ವಾತಾವರಣ ಮೂಡಿಸಬೇಕಿದೆ. ಆ ಹೊಣೆಗಾರಿಕೆ ಜಿಲ್ಲಾಡಳಿತದ ಮೇಲಿದೆ.

ಅಂಕಿ ಅಂಶ

540 ಮಂಜೂರಾದ ಹುದ್ದೆಗಳು

180 ಭರ್ತಿಯಾದ ಹುದ್ದೆಗಳು

360 ಖಾಲಿಯಿರುವ ಹುದ್ದೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT