ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಜಿಲ್ಲಾಧಿಕಾರಿಗೆ ಬಸ್‌ನಿಲ್ದಾಣದ ಸುತ್ತಮುತ್ತ ಅವ್ಯವಸ್ಥೆ ದರ್ಶನ

ಜಿಲ್ಲಾಧಿಕಾರಿಯಿಂದ ಬೆಳಿಗ್ಗೆಯೇ ನಗರ ಪ್ರದಕ್ಷಿಣೆ– ಜನನಿಬಿಡ ಪ್ರದೇಶದಲ್ಲಿ ಸ್ವಚ್ಛತೆ ಮಾಯ–ನೋಟಿಸ್‌ ಜಾರಿ
Published 8 ಜೂನ್ 2024, 11:12 IST
Last Updated 8 ಜೂನ್ 2024, 11:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಶನಿವಾರ ಬೆಳಿಗ್ಗೆ ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಮಾಡಿದ್ದು, ನಿತ್ಯ ಜನರಿಂದ ತುಂಬಿ ತುಳುಕುವ ಬಸ್‌ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಆಘಾತಗೊಂಡರು.

ಎರಡನೇ ಶನಿವಾರ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ಕಾರಣ ಜಿಲ್ಲಾಧಿಕಾರಿ ಅವರು ಬೆಳಿಗ್ಗೆಯೇ ನಗರ ಪ್ರದಕ್ಷಿಣೆಗೆ ಹೊರಟಿದ್ದರು. ಮಳೆ ಆರಂಭವಾಗಿರುವುದರಿಂದ ರಾಜ ಕಾಲುವೆಗಳಲ್ಲಿ ಕಸ, ಪ್ಲಾಸ್ಟಿಕ್‌ ತೆರವುಗೊಳಿಸಲಾಗಿದೆ ಎಂದು ಅವರು ಎರಡು ದಿನದ ಹಿಂದೆಯಷ್ಟೇ ಹೇಳಿದ್ದರು, ಆದರೆ ಅವರ ಕಣ್ಣೆದುರಲ್ಲೇ ಈಗಲೂ ರಾಜಕಾಲುವೆಯಿಂದ ಕಸ, ಪ್ಲಾಸ್ಟಿಕ್‌ ತೆಗೆಯುತ್ತಿರುವುದು ಕಾಣಿಸಿತು.

ಕೆಕೆಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಸ್ವಚ್ಛತೆ ಎಂಬುದು ಮಾಯವಾಗಿತ್ತು. ಅಲ್ಲಿಂದ ಒಳಚರಂಡಿ ನೀರು ಬಸ್‌ನಿಲ್ದಾಣಕ್ಕೆ ಹರಿಯುತ್ತಿರುವುದನ್ನು ಕಂಡು ಆಘಾತಗೊಂಡರು. ಇಷ್ಟೊಂದು ಕೆಟ್ಟ ವಾಸನೆ ಇಲ್ಲಿ ಇದ್ದರೂ ಡಿಪೋ ಮ್ಯನೇಜರ್‌ ಯಾವುದೇ ಕ್ರಮ ವಹಿಸದೆ ಇರುವುದನ್ನು ಕಂಡು ಆಕ್ಷೇಪ  ವ್ಯಕ್ತಪಡಿಸಿದರು. ಮ್ಯಾನುಯೆಲ್ ಸ್ಕ್ಯಾವೆಂಜರ್ ಅಧಿನಿಯಮದಡಿ ನೋಟಿಸ್ ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಜತೆಗೇ ಇದ್ದ ನಗರಸಭೆ ಆಯುಕ್ತ ಚಂದ್ರಪ್ಪ ಅವರಿಗೆ ಸೂಚಿಸಿದರು.

ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನ ಹಣ ಪಡೆಯುವ ಬಗ್ಗೆ ಸಾರ್ವಜನಿಕರು ಡಿ.ಸಿ ಅವರಲ್ಲಿ ದೂರಿದರು. ಹೆಚ್ಚಿನ ಹಣ ಪಡೆಯದಂತೆ ಸ್ಥಳದಲ್ಲೇ ಅವರು ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿದರು.

ಟ್ರೇಡ್ ಲೈಸೆನ್ಸ್‌ ಇಲ್ಲ: ಬಸ್‌ ನಿಲ್ದಾಣ ಸಮೀಪದ ವಿಶ್ವ ಲಾಡ್ಜ್ ಮುಂದೆ ಡ್ರೈನೇಜ್ ಲೈನ್‌ನಲ್ಲಿ ನೀರು ನಿಂತು ಬಸ್ ಸ್ಟಾಂಡ್ ಮುಂಭಾಗ ಹರಿಯುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿ ಸಿಟ್ಟಾದರು. ಲಾಡ್ಜ್‌ನ ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಟ್ರೇಡ್ ಲೈಸೆನ್ಸ್ ಇಲ್ಲದೆ ಲಾಡ್ಜ್ ನಡೆಸುತ್ತಿರುವುದು ಕಂಡುಬಂತು. ಇದರ ಜತೆಗೆ ಇನ್ನೂ ಕೆಲವು ನಗರಸಭೆ ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂತು. ಕೂಡಲೇ ನೋಟಿಸ್ ನೀಡಿ ನಿಯಮಾನಸಾರ ಕ್ರಮವಹಿಸಲು ಆಯುಕ್ತರಿಗೆ ತಿಳಿಸಿದರು.

ರಸ್ತೆಗಳಲ್ಲಿ ಗುಂಡಿ: ನಗರದ ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವಾಕರ್‌ ಅವರು, ಸಾರ್ವಜನಿಕರಲ್ಲಿ ಕುಡಿಯುವ ನೀರಿನ ಸರಬರಾಜು ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆದರು. ಮುಖ್ಯ ರಸ್ತೆಗಳಿಗೆ ಹೆಚ್ಚಿನ ಸ್ವಚ್ಛತೆ ಆಗುವಂತೆ ಕೆಲಸಗಾರರ ಗುಂಪುಗಳನ್ನು ರಚಿಸಿ ಆರೋಗ್ಯ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲು ತಿಳಿಸಿದರು. ಅಲ್ಲಲ್ಲಿ ರಸ್ತೆಯಲ್ಲಿ ಗುಂಡಿಗಳು  ಬಿದ್ದಿರುವುದನ್ನು ಗಮನಿಸಿದ ಅವರು, ಕೂಡಲೇ ಅವುಗಳನ್ನು ಸರಿಪಡಿಸಲು ಅಧಿಕಾರಿಗಳಿಗೆ ತಿಳಿಸಿದರು.

ಪೌರಕಾರ್ಮಿಕರ ವಾಸಿಸುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ ಅವರ ಕುಟುಂಬಗಳ ಆವಾಲನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ಕೂಡಲೇ ರಸ್ತೆ ಕಾಮಗಾರಿಗಳನ್ನು ಮತ್ತು ಚರಂಡಿ ವ್ಯವಸ್ಥೆಯನ್ನು ಕೈಗೊಳ್ಳಲು ಆಯುಕ್ತರಿಗೆ ತಿಳಿಸಿದರು. ಒಟ್ಟಾರೆ ನಗರದ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಬೇಕಾಗುವ ಡಿಪಿಆರ್ ಅನ್ನು ತಯಾರಿಸಲು ಅಧಿಕಾರಿಗಳಿಗೆ ಸೂಚಿಸಿದರು.

===

8 ಗಂಟೆಯಾದರೂ ಶಾಲೆಗೆ ಬಾರದ ಶಿಕ್ಷಕರು!

ನಗರದ ಹೃದಯ ಭಾಗದಲ್ಲಿರುವ ವಿವೇಕಾನಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಭೇಟಿ ನೀಡಿದಾಗ 8 ಗಂಟೆಯಾದರೂ ಶಾಲೆಯಲ್ಲಿ ಯಾವೊಬ್ಬ ಶಿಕ್ಷಕರೂ ಇಲ್ಲದಿರುವುದನ್ನು ಕಂಡು ಅಚ್ಚರಿಗೊಂಡರು. ನಿಯಮಾನುಸಾರ ಬೆಳಿಗ್ಗೆ 7.30ಕ್ಕೇ ಪ್ರಾರ್ಥನೆ ಮುಗಿಸಿ ತರಗತಿ ಆರಂಭಿಸಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದ ಎಲ್ಲ ಶಿಕ್ಷಕರಿಗೆ ನೋಟಿಸ್‌ ನೀಡಿ, ನಿಯಮಾನುಸಾರ ಅವರಿಂದ ವಿವರಣೆ ಪಡೆದು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT