ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ಹೊಸಪೇಟೆಯಲ್ಲಿ ಭಾರಿ ಮಳೆ ಸುರಿಯದಿದ್ದರೂ ಮನೆಗಳಿಗೆ ನೀರು ನುಗ್ಗಿದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಬುಧವಾರ ಬೆಳಿಗ್ಗೆಯೇ ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
ರಾಮಕೃಷ್ಣ ಲಾಡ್ಜ್ ಸಮೀಪದ ಬಸವಣ್ಣ ಕಾಲುವೆ ಬಳಿ ನಾಲ್ಕು ಮನೆಗಳಿಗೆ ನೀರು ನುಗ್ಗಿದ ಕುರಿತ ಹಾಗೂ ಪಕ್ಕದ 60 ಹಾಸಿಗೆಗಳ ಆಸ್ಪತ್ತೆಯ ಸುತ್ತ ನೀರು ನಿಂತುಕೊಂಡಿರುವ ಕುರಿತು ‘ಪ್ರಜಾವಾಣಿ’ ಬುಧವಾರ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಅವರು 10 ಗಂಟೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿ ಸ್ಥಳ ಪರಿಶೀಲನೆ ಧಾವಿಸಿದರು. ಅಲ್ಲಿನ ಪರಿಸ್ಥಿತಿ ಕಂಡು ದಂಗಾದರು ಹಾಗೂ ನಗರಸಭೆ ಇನ್ನೂ ಸಮಸ್ಯೆ ಬಗೆಹರಿಸದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
‘ಇಲ್ಲಿ ಬಹಳ ವೈಜ್ಞಾನಿಕ ರೀತಿಯಲ್ಲಿ ಮೋರಿ ನಿರ್ಮಿಸಲಾಗಿದೆ. ಹೂಳು ಕಟ್ಟಿಕೊಂಡ ಕಾರಣ ನೀರು ಹರಿಯದೆ ಸಮಸ್ಯೆ ಎದುರಾಗಿದೆ. ತಕ್ಷಣ ಹೂಳು ತೆಗೆಸಬೇಕು’ ಎಂದು ಸ್ಥಳದಲ್ಲಿದ್ದ ಪೌರಾಯುಕ್ತ ಮನೋಹರ್ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಇದೇ ಮೋರಿಯ ಕಾರಣದಿಂದಲೇ ಆಸ್ಪತ್ರೆ, ಪಕ್ಕದ ಕ್ವಾರ್ಟರ್ಸ್ ಸುತ್ತ ನೀರು ನಿಂತು ಭಾರಿ ಸಮಸ್ಯೆ ಎದುರಾಗಿತ್ತು. ಡಿ.ಸಿ ಅವರು ಆಸ್ಪತ್ರೆ ಆವರಣಕ್ಕೂ ತೆರಳಿ ಪರಿಶೀಲಿಸಿದರು. ಪಾದ ಮುಚ್ಚುವಂತೆ ಇದ್ದ ಕೆಸರು ಆಸ್ಪತ್ರೆಯ ಮುಂಭಾಗ ಇದ್ದು, ಪರಿಸ್ಥಿತಿಯನ್ನು ತೋರಿಸಿಕೊಟ್ಟಿತು. ಆಸ್ಪತ್ರೆಯಲ್ಲಿ ಸಿಬ್ಬಂದಿಯ ಹಾಜರಾತಿ ಪರಿಶೀಲಿಸಿ ಪ್ರತಿಯೊಬ್ಬರೂ ಐಡಿ ಕಾರ್ಡ್ ಧರಿಸಲು ಸೂಚಿಸಿದರು. ರೋಗಿಗಳ ಜೊತೆ ಮಾತುಕತೆ ನಡೆಸಿ ಅಗತ್ಯ ಸೌಲಭ್ಯಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮನೆಯಲ್ಲಿ ಬಳಸುವಂತಹ ಸಣ್ಣ ಆರ್‌ಒ ನೀರಿನ ಘಟಕ ಇರುವ ಬಗ್ಗೆ ರೋಗಿಗಳು ದೂರು ನೀಡಿದರು.
ಎಚ್ಚರಿಕೆ: ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಪ್ರವಾಹದ ಭೀತಿಯೂ ಇದೆ. ಹೀಗಾಗಿ ಜಿಲ್ಲೆಯ 22 ಗ್ರಾಮಗಳ ಜನರು ಎಚ್ಚರದಿಂದ ಇರಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಬಳಿಕ ಮಾಧ್ಯಮದವರಿಗೆ ತಿಳಿಸಿದರು.
ಕಳೆದ ಒಂದು ವಾರದ ಮಳೆಯಿಂದ ಜಿಲ್ಲೆಯಲ್ಲಿ 76 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಬಗ್ಗೆ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಒಟ್ಟು ಮೂವರು ಮಳೆ ಸಂಬಂಧಿತ ಅನಾಹುತಗಳಿಂದ ಗಾಯಗೊಂಡಿದ್ದಾರೆ. ಅವರಿಗೆ ಪರಿಹಾರ ನೀಡಲಾಗಿದೆ. ಗೋಡೆ ಕುಸಿದು ಎಮ್ಮೆ, ಆಡಿನ ಮರಿಗಳು ಸತ್ತಿದ್ದು, ಅದಕ್ಕೂ ಪರಿಹಾರ ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ವಾಂತಿಭೇದಿ ಪ್ರಕರಣ ನಿಯಂತ್ರಿಸಲು ಜಲಮೂಲ, ಪೂರೈಕೆ ವ್ಯವಸ್ಥೆ ಮತ್ತು ಸಂಗ್ರಹ ವ್ಯವಸ್ಥೆಯನ್ನು ಸಮರ್ಪಕವಾಗಿ ಇರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ವಾಂತಿಭೇದಿ ಪ್ರಕರಣ ನಿಯಂತ್ರಿಸಲು ಜಲಮೂಲ ಪೂರೈಕೆ ವ್ಯವಸ್ಥೆ ಮತ್ತು ಸಂಗ್ರಹ ವ್ಯವಸ್ಥೆಯನ್ನು ಸಮರ್ಪಕವಾಗಿ ಇರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.– ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.