ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತ ಭವನಕ್ಕೆ ಇನ್ನೂ ಬರದ ಯೋಗ;ತಾತ್ಕಾಲಿಕ ಜಿಲ್ಲಾಧಿಕಾರಿ ಕಚೇರಿಗೆ 2 ವರ್ಷ

ಉದ್ಘಾಟನೆಗೊಂಡು ಎರಡು ತಿಂಗಳಾದರೂ ಇಲ್ಲ ಕಚೇರಿಗಳ ಸ್ಥಳಾಂತರ, ಜನತೆಗೆ ತಪ್ಪದ ಅಲೆದಾಟ
Last Updated 14 ಮಾರ್ಚ್ 2023, 5:20 IST
ಅಕ್ಷರ ಗಾತ್ರ

ವಿಜಯನಗರ/ಬಳ್ಳಾರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿನ ಜಿಲ್ಲಾಡಳಿತ ಭವನ ಉದ್ಘಾಟಿಸಿ ಎರಡು ತಿಂಗಳುಗಳೇ ಕಳೆದರೂ ಅದಕ್ಕಿನ್ನೂ ಯೋಗ ಕೂಡಿ ಬಂದಿಲ್ಲ. ಸರ್ಕಾರದ ಸೇವೆಗಳು– ಸೌಲಭ್ಯಗಳು ಒಂದೆಡೆ ಸಿಗಬೇಕೆಂಬ ಸದಾಶಯದಿಂದ ಕಟ್ಟಿದ ಭವನವಿನ್ನೂ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ.

ಅನಂತಪುರ ರಸ್ತೆಯಲ್ಲಿ ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಿಲ್ಲಾಡಳಿತ ಭವನಕ್ಕೆ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡಿಲ್ಲ. 16 ಇಲಾಖೆಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿವೆ. ಈ ಭವನದ ಉದ್ಘಾಟನೆಗೆ ಮುಖ್ಯಮಂತ್ರಿ ಸಮಯ ನಿಗದಿಪಡಿಸಲು ಒಂದಷ್ಟು ಕಾಯಲಾಯಿತು. ಈಗ ಸ್ಥಳಾಂತರಕ್ಕೂ ಅದೇ ಗತಿ ಬಂದೊದಗಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟು 17.13 ಎಕರೆ ಪ್ರದೇಶದಲ್ಲಿ ಸುಂದರವಾದ ಜಿಲ್ಲಾಡಳಿತ ಭವನ ತಲೆಎತ್ತಿದೆ. ಕರ್ನಾಟಕ ಗೃಹ ಮಂಡಳಿ ₹25 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ಕಟ್ಟಿಕೊಟ್ಟಿದೆ. ಭವನದ ಆವರಣದೊಳಗಿನ ರಸ್ತೆಗಳಿಗೆ ₹5 ಕೋಟಿ ಖರ್ಚು ಮಾಡಲಾಗಿದೆ. ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳಿಗೆ ಪ್ರತ್ಯೇಕವಾಗಿ ಹಣ ವ್ಯಯಿಸಲಾಗಿದೆ ಎಂದು ಕಟ್ಟಡ ನಿರ್ಮಾಣದ ಹೊಣೆ ಹೊತ್ತಿದ್ದ ಕೆಎಚ್‌ಬಿ ಮೂಲಗಳು ತಿಳಿಸಿವೆ.

ಸರ್ಕಾರದ ಕೆಲಸಕ್ಕಾಗಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯುವುದು ತಪ್ಪಲಿ ಎಂಬ ಸದುದ್ದೇಶದಿಂದ ಜಿಲ್ಲಾಡಳಿತ ಭವನ ಕಟ್ಟಲಾಗಿದೆ. ಆದರೆ, ಕಟ್ಟಡ ಉದ್ಘಾಟನೆಯಾಗಿ ಎರಡು ತಿಂಗಳು ಕಳೆದರೂ ಕಚೇರಿಗಳು ಏಕೆ ಸ್ಥಳಾಂತರಗೊಂಡಿಲ್ಲ ಎಂಬುದು ಯಕ್ಷ ಪ್ರಶ್ನೆ.

‘ಜಿಲ್ಲಾಡಳಿತ ಭವನ ಕಟ್ಟಡದಲ್ಲಿ ಯಾವುದೇ ಕಾಮಗಾರಿ ಬಾಕಿ ಇಲ್ಲ. ಎಲ್ಲ ಕೆಲಸ ಪೂರ್ಣಗೊಳಿಸಿ, ಜನವರಿ 3ನೇ ತಾರೀಖಿನಂದೇ ಜಿಲ್ಲಾಡಳಿತ ಸು‍ಪರ್ದಿಗೆ ಕೊಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸದ್ಯ, ಸ್ಟೇಷನ್‌ ರಸ್ತೆಯಲ್ಲಿರುವ ಬ್ರಿಟೀಷ್‌ ಕಾಲದ ಕಲ್ಲಿನ ಕಟ್ಟಡದಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿ ಕೆಲಸ ಮಾಡುತ್ತಿವೆ. ಇದರ ಸುತ್ತಮುತ್ತ ಆಹಾರ ಮತ್ತು ನಾಗರಿಕ ಇಲಾಖೆ, ಡಿಡಿಎಲ್‌ಆರ್‌, ಎಡಿಎಲ್‌ಆರ್‌, ಖಜಾನೆ, ಕೆಜಿಐಡಿ, ವಾರ್ತಾ ಇಲಾಖೆ, ಸಣ್ಣ ಉಳಿತಾಯ ಇಲಾಖೆ ಒಳಗೊಂಡಂತೆ ಅನೇಕ ಕಚೇರಿಗಳಿವೆ.

ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಉಪವಿಭಾಗಾಧಿಕಾರಿ ಕಚೇರಿ ಕಟ್ಟಡಗಳನ್ನು ಬಿಟ್ಟು ಉಳಿದವು ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು , ಯಾವಾಗಲಾದರೂ ಬೀಳುವ ಸ್ಥಿತಿಯಲ್ಲಿವೆ. ಇತ್ತೀಚೆಗೆ ಸಣ್ಣ ಉಳಿತಾಯ ಇಲಾಖೆ ಮೇಲ್ಛಾವಣಿ ಕುಸಿಯಿತು. ತಕ್ಷಣ ಅಲ್ಲೇ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿರುವ ಗಾಂಧಿ ಭವನದ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಇದು ತಾತ್ಕಾಲಿಕ ವ್ಯವಸ್ಥೆ ಅಷ್ಟೇ.

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಸ್ಟೇಷನ್‌ ರಸ್ತೆಯ ಕಲ್ಲು ಕಟ್ಟಡದಲ್ಲೇ ಇರಲಿವೆ. ಮಿಕ್ಕ ಕಟ್ಟಡಗಳು ಸ್ಥಳಾಂತರಗೊಳ್ಳಲಿವೆ. ಕಂದಾಯ, ಖಜಾನೆ, ಕೌಶಲಾಭಿವೃದ್ಧಿ, ಉದ್ಯೋಗ ವಿನಿಮಯ ಕಚೇರಿ, ತೋಟಗಾರಿಕೆ, ಚುನಾವಣಾ ಸಿಬ್ಬಂದಿ ಕಚೇರಿ, ಅಬಕಾರಿ, ಡಿಡಿಪಿಯು ಮತ್ತಿತರ ಇಲಾಖೆಗಳು ಹೊಸ ಕಟ್ಟಡಗಳಿಗೆ ಹೋಗಲಿವೆ.

ವಿದ್ಯುತ್‌ ಹಾಗೂ ಅಂತರ್ಜಾಲದ ಕೊರತೆಯ ನೆಪ ಮಾಡಿ ಕೆಲವು ಅಧಿಕಾರಿಗಳು ಕಚೇರಿಗಳ ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆರ್ಥಿಕ ವರ್ಷ ಮಾರ್ಚ್ ತಿಂಗಳು ಮುಗಿದ ಬಳಿಕ ಏಪ್ರಿಲ್‌ನಲ್ಲಿ ಕಚೇರಿ ಸ್ಥಳಾಂತರಿಸಲು ಕೆಲವರು ನಿರ್ಧಾರ ಮಾಡಿದ್ದಾರೆ. ಈಗ ಜವಳಿ ಹಾಗೂ ಅಬಕಾರಿ ಇಲಾಖೆಗಳು ಮಾತ್ರ ಆ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ.

ಒಂದೇ ಸೂರಿನಡಿ ಜಿಲ್ಲಾ ಮಟ್ಟದ ಕಚೇರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಬರಬೇಕೆಂಬ ದೃಷ್ಟಿಯಿಂದ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಿದರೂ ಸಾರ್ವಜನಿಕರಿಗೆ ಅಲೆದಾಟ ಮಾತ್ರ ತಪ್ಪದಿರುವುದು ವಿಪರ್ಯಾಸವೇ ಸರಿ.

2 ವರ್ಷಗಳ ನಂತರ ತಾತ್ಕಾಲಿಕ ಡಿಸಿ ಕಚೇರಿ ಯೋಗ:

ಹೊಸಪೇಟೆ (ವಿಜಯನಗರ) ವರದಿ: ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳ ನಂತರ ನಗರದಲ್ಲಿ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿಗಳ ಕಚೇರಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ.

ನಗರದ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿಎಸ್‌ಪಿ) ಹಳೆಯ ಕಟ್ಟಡವನ್ನು ನವೀಕರಣಗೊಳಿಸಿ, ಜ. 27ರಂದು ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಉದ್ಘಾಟನೆ ನೆರವೇರಿಸಿದ್ದರು. ಇದಾದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಅಮರಾವತಿ ಅತಿಥಿ ಗೃಹದಿಂದ ತಾತ್ಕಾಲಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಥಳಾಂತರವಾಗಿದೆ.

ಇದರೊಂದಿಗೆ ಕೆಇಎಂಆರ್‌ಸಿ, ಡಿಡಿಎಲ್‌ಆರ್‌, ಡಿಎಂಎಫ್‌, ಕೆಕೆಆರ್‌ಡಿಬಿ ಕೋಶ, ಡಿಯುಡಿಸಿ ಕಚೇರಿಗಳು ಅದೇ ಕಟ್ಟಡದಲ್ಲಿ ಕೆಲಸ ಆರಂಭಿಸಿವೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಡಾ. ಬಾಬು ಜಗಜೀವನ್‌ರಾಂ ಭವನದಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ, ಜಿಲ್ಲಾ ಪಂಚಾಯಿತಿ ಕಚೇರಿಯು ಎಂ.ಪಿ. ಪ್ರಕಾಶ್ ನಗರದ ಗಣಿ ಮತ್ತು ಖನಿಜ ಇಲಾಖೆಯ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದೆ. ಕೃಷಿ ಸೇರಿದಂತೆ ಕೆಲ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳಾದರೂ ಶೇ 30ರಷ್ಟು ಹುದ್ದೆಗಳು ಇನ್ನೂ ಮಂಜೂರಾಗಿಲ್ಲ. ಹೆಚ್ಚಿನ ಇಲಾಖೆಗಳಿಗೆ ಸಿಬ್ಬಂದಿ ನೇಮಕಗೊಂಡಿಲ್ಲ. ಬಹುತೇಕ ಪ್ರಮುಖ ಇಲಾಖೆಗಳಿಗೆ ಈಗಲೂ ಬಳ್ಳಾರಿಯ ಅಧಿಕಾರಿಗಳಿಗೆ ಸರ್ಕಾರ ಪ್ರಭಾರ ವಹಿಸಿದೆ. ಅಖಂಡ ಜಿಲ್ಲೆಯ ಪಶ್ಚಿಮ ಭಾಗದ ತಾಲ್ಲೂಕುಗಳಾದ ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಜನರಿಗೆ ಈಗಲೂ ಬಳ್ಳಾರಿಯ ಕಚೇರಿಗಳಿಗೆ ಅಲೆದಾಡುವುದು ತಪ್ಪಿಲ್ಲ. ಆದರೆ, ಮೂರು ಪ್ರಮುಖ ಹುದ್ದೆಗಳಾದ ಡಿಸಿ, ಎಸ್ಪಿ, ಜಿಪಂ ಸಿಇಒಗಳು ಬಂದಿರುವುದರಿಂದ ಸಮಾಧಾನ ಪಡಬೇಕಿದೆ.

ಭೌಗೋಳಿಕವಾಗಿ ಹೊಸ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಆದರೆ, ಜಿಲ್ಲಾಡಳಿತ ಭವನ, ಜಿಪಂ ಸಿಇಒ ಸೇರಿದಂತೆ ಪ್ರಮುಖ ಇಲಾಖೆಗಳಿಗೆ ಅನುದಾನ ಮಂಜೂರಾಗಿ ಕಟ್ಟಡ ನಿರ್ಮಾಣವಾಗಬೇಕು. ಬಳಿಕ ಹುದ್ದೆ ಮಂಜೂರಾಗಿ ಸಿಬ್ಬಂದಿ ನೇಮಕಗೊಳ್ಳಲು ಇನ್ನೂ ಕೆಲವು ವರ್ಷಗಳೇ ಬೇಕಾಗಬಹುದು.

ಈಗ ಚುನಾವಣೆಯ ಸಮಯ. ಎಲ್ಲವೂ ಸರಿ ಇದೆ ಎಂದು ತೋರಿಸುವ ಅವಸರ ಜನಪ್ರತಿನಿಧಿಗಳಿಗೆ ಇರುತ್ತದೆ. ಅರೆಬರೆ ಇದ್ದರೂ ಪರವಾಗಿಲ್ಲ. ಉದ್ಘಾಟನೆ ಮಾಡಿದರಾಯ್ತು ಎಂಬ ಮನಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ವರ್ಷದ ಹಿಂದೆಯೇ ತಾತ್ಕಾಲಿಕ ಜಿಲ್ಲಾಧಿಕಾರಿ ಕಚೇರಿ ಆರಂಭಿಸಲು ತಯಾರಿ ನಡೆಸಲಾಗಿತ್ತು. ಮತ್ತೆ ಕೊನೆಯ ಕ್ಷಣದಲ್ಲಿ ಅದನ್ನು ಕೈಬಿಡಲಾಗಿತ್ತು. ಈಗ ₹65 ಕೋಟಿಯಲ್ಲಿ ಟಿಎಸ್‌ಪಿ ಕಟ್ಟಡ ನವೀಕರಣಗೊಂಡಿದೆ. ಆದರೆ, ಬೆರಳೆಣಿಕೆಯ ಇಲಾಖೆಯ ಅಧಿಕಾರಿಗಳು ಅಲ್ಲಿ ನಿಯೋಜನೆಗೊಂಡಿದ್ದಾರೆ. ಇತ್ತೀಚೆಗೆ ಹಗರಿಬೊಮ್ಮನಹಳ್ಳಿಯ ಮಿನಿ ವಿಧಾನಸೌಧ ಕೂಡ ಉದ್ಘಾಟಿಸಲಾಗಿದೆ. ಆದರೆ, ಅಲ್ಲಿ ಕೆಲಸ ನಿರ್ವಹಿಸಲು ಬೇಕಾದ ಕುರ್ಚಿ, ಮೇಜುಗಳೇ ಇಲ್ಲ. ಅದಕ್ಕಾಗಿ ಇನ್ನಷ್ಟೇ ಟೆಂಡರ್‌ ಆಗಬೇಕಿದೆ. ಆದರೆ, ಚುನಾವಣೆಗೆ ನೀತಿ ಸಂಹಿತೆ ಜಾರಿಯಾದರೆ ಉದ್ಘಾಟನೆಗೆ ಅಡ್ಡಿಯಾಗುತ್ತದೆ. ಸಾಧನೆ ಬಿಂಬಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ತರಾತುರಿಯಲ್ಲಿ ಉದ್ಘಾಟನೆ ಮಾಡಿ ಕೈತೊಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT