ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಗಾರು ಬೆಳೆಗೂ ಪರಿಹಾರ ಕೊಡಿ: ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ

ಕರ್ನಾಟಕ ರಾಜ್ಯ ರೈತರ ಸಂಘ ಒತ್ತಾಯ: ಬಾಳೆ ಹಾನಿ–ಹೆಕ್ಟೇರ್‌ಗೆ ₹80 ಸಾವಿರಕ್ಕೆ ಒತ್ತಾಯ
Published 16 ಮೇ 2024, 13:20 IST
Last Updated 16 ಮೇ 2024, 13:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ರೈತರು ತೀವ್ರ ಬರಗಾಲದಿಂದ ಕಂಗೆಟ್ಟಿದ್ದು, ಮುಂಗಾರು ಹಂಗಾಮಿನ ಕೆಲವು ಬೆಳೆಗಳಿಗೆ ಮಾತ್ರ ಇದೀಗ ಪರಿಹಾರ ನೀಡಲಾಗುತ್ತಿದೆ. ಹಿಂಗಾರು ಬೆಳೆಗೂ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರೈತರಿಗೆ ಸಂಪೂರ್ಣ ಉಚಿತವಾಗಿ ಬಿತ್ತನೆ ಬೀಜ ನೀಡಬೇಕು’ ಎಂದು ಆಗ್ರಹಿಸಿದರು.

‘ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಜೋಳ ಮತ್ತು ರಾಗಿಗೆ ಶೀಘ್ರ ಹಣ ಪಾವತಿ ಮಾಡಬೇಕು, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಭರವಸೆ ಮರೆತಿದೆ. ಎಂಎಸ್‌ಪಿ ಕಾನೂನುಬದ್ಧಗೊಳಿಸುವುದಾಗಿ ನೀಡಿದ ಭರವಸೆಯೂ ಈಡೇರಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ, ಪೆನ್‌ಡ್ರೈವ್‌ ವಿಚಾರವನ್ನಷ್ಟೇ ಎತ್ತಿಕೊಂಡು ಇತರ ಜ್ವಲಂತ ವಿಷಯಗಳನ್ನು ಬದಿಗೆ ಸರಿಸುವ ಸರ್ಕಾರದ ನಡೆ ಅಕ್ಷಮ್ಯ’ ಎಂದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್‌.ಕಾಳಿದಾಸ್ ಮಾತನಾಡಿ, ಈಚೆಗೆ ಭಾರೀ ಗಾಳಿ, ಮಳೆಯಿಂದ ಹೊಸಪೇಟೆ ಸುತ್ತಮುತ್ತಲಿನಲ್ಲಿ 2,800 ಹೆಕ್ಟೇರ್‌ನಷ್ಟು ಬಾಳೆ ತೋಟ ನಾಶವಾಗಿದೆ. ಆದರೆ ಜಿಲ್ಲಾಡಳಿತ 188 ಹೆಕ್ಟೇರ್ ಮಾತ್ರ ಹಾನಿ ಸಂಭವಿಸಿದೆ ಎಂದು ಹೇಳುತ್ತಿದೆ. ಬಾಳೆ ಕೃಷಿಗೆ ಎಕರೆಗೆ ₹1.50 ಲಕ್ಷಕ್ಕಿಂತ ಅಧಿಕ ವೆಚ್ಚ ಬೀಳುತ್ತಿದೆ. ಹೀಗಾಗಿ ಪರಿಹಾರ ರೂಪದಲ್ಲಿ ಹೆಕ್ಟೇರ್‌ಗೆ ನೀಡುವ ₹25 ಸಾವಿರ ಏನೇನೂ ಸಾಲದು, ಅದನ್ನು ಕನಿಷ್ಠ ₹80 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

‘ಸ್ಥಳೀಯ ಶಾಸಕರು ಸಕ್ಕರೆ  ಕಾರ್ಖಾನೆ ವಿಚಾರದಲ್ಲಿ ಕಣ್ಣೊರೆಸುವ ತಂತ್ರವನ್ನಷ್ಟೇ ಮಾಡುತ್ತಿದ್ದಾರೆ. ಕಾರ್ಖಾನೆ  ನಿರ್ಮಾಣದ ಸ್ಥಳದ ಸರ್ವೇ ಕಾರ್ಯ ಇನ್ನೂ ಆರಂಭವಾಗಿಲ್ಲ. ಜುಲೈ 15ರೊಳಗೆ ಈ ಪ್ರಕ್ರಿಯೆ ಆರಂಭವಾಗದಿದ್ದರೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

‘ಹೊಸಪೇಟೆ ಭಾಗದ ರೈತರಿಗೆ ಆಗಿರುವ ನಷ್ಟ, ಬೆಳೆ ಹಾನಿ ಸಮೀಕ್ಷೆಯಲ್ಲಿ ಇರುವ ಲೋಪ, ತಕ್ಷಣ ಪರಿಹಾರ ನೀಡಿಕೆಗೆ ಆಗ್ರಹಿಸಿ ಮೇ 20ರಂದು ನಗರದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹೇಮರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಜಿ.ಮಲ್ಲಿಕಾರ್ಜುನ, ಉಪಾಧ್ಯಕ್ಷ ಎಲ್‌.ಎಸ್.ರುದ್ರಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT