ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯ: ಖರ್ಚಿಲ್ಲದ ಪ್ರವಾಹ ಕಾಲುವೆ ಮುಗಿದ ಅಧ್ಯಾಯ?

Published 8 ಆಗಸ್ಟ್ 2024, 5:55 IST
Last Updated 8 ಆಗಸ್ಟ್ 2024, 5:55 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ಕಳೆದ 15 ದಿನಗಳಿಂದ 110  ಟಿಎಂಸಿ ಅಡಿಗೂ ಅಧಿಕ ನೀರು ನದಿಗೆ ಹರಿದು ಹೋಗಿದ್ದು, ನಾಲ್ಕು ದಶಕದ ಹಿಂದೆ ಬಂದಿದ್ದ ಪ್ರಸ್ತಾಪವನ್ನು ಒಪ್ಪಿಕೊಳ್ಳದೆ ಕರ್ನಾಟಕ ಈಗ ಪಶ್ಚಾತ್ತಾಪ ಪಡುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಕಳೆದ ವರ್ಷ ಮಳೆಗಾಲ ದುರ್ಬಲವಾಗಿದ್ದರಿಂದ ಜಲಾಶಯ ತುಂಬಿರಲಿಲ್ಲ. ಅದರ ಹಿಂದಿನ ವರ್ಷ ಭಾರಿ ಮಳೆ ಸುರಿದು 400 ಟಿಎಂಸಿ ಅಡಿಗೂ ಅಧಿಕ ನೀರು ನದಿಗೆ ಹರಿದುಹೋಗಿತ್ತು. ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಹರಿಯುವ ನೀರು ಯಾವ ಲೆಕ್ಕಕ್ಕೂ ಸೇರದೆ ನೇರವಾಗಿ ಆಂಧ್ರಪ್ರದೇಶ ತಲುಪಿ ಬಳಿಕ ಸಮುದ್ರದ ಪಾಲಾಗುತ್ತದೆ. ಇಂತಹ ನೀರಲ್ಲಿ ಸ್ವಲ್ಪಮಟ್ಟಿನ ನೀರನ್ನು ಜಾಣತನದಿಂದ ಬಳಸಿಕೊಳ್ಳುವ ಅವಕಾಶ ರಾಜ್ಯಕ್ಕೆ ಸಿಕ್ಕಿದ್ದರೂ ಅದು ಕೈಚೆಲ್ಲಿಕೊಂಡಿತ್ತು, ಇನ್ನು ಅಂತಹ ಅವಕಾಶ ಸಿಗಲಾರದೇನೋ ಎಂದು ತಜ್ಞರು ಹೇಳುತ್ತಿದ್ದಾರೆ.

‘1985ರಲ್ಲಿ ಆಂಧ್ರಪ್ರದೇಶದ ಸರ್ಕಾರ ರಾಜ್ಯಕ್ಕೆ ಪ್ರವಾಹ ಕಾಲುವೆಯ ಪ್ರಸ್ತಾವ ಸಲ್ಲಿಸಿತ್ತು. ಬಲದಂಡೆ ಮೇಲ್ಮಟ್ಟದ ಕಾಲುವೆಯ (ಎಚ್‌ಎಲ್‌ಸಿ) ಸಮೀಪದಲ್ಲೇ ಇನ್ನೊಂದು ಪ್ರವಾಹ ಕಾಲುವೆಯನ್ನು ತಾನೇ ಖರ್ಚು ಮಾಡಿ ನಿರ್ಮಿಸಿಕೊಳ್ಳುವುದಾಗಿ ಆಂಧ್ರ ಹೇಳಿತ್ತು. ಆಗ ರಾಜ್ಯ ಸರ್ಕಾರ ಒಪ್ಪಿಗೆ ಕೊಟ್ಟಿದ್ದರೆ ಯೋಜನೆ ಹತ್ತು ವರ್ಷದಲ್ಲಿ ಕೊನೆಗೊಂಡಿರುತ್ತಿತ್ತು. ಕಳೆದ 30 ವರ್ಷಗಳಿಂದ ಅದರ ಫಲವನ್ನು ಎರಡೂ ರಾಜ್ಯಗಳು ಉಣ್ಣಬಹುದಿತ್ತು’ ಎಂದು ನಿವೃತ್ತ ಅಧೀಕ್ಷಕ ಎಂಜಿನಿಯರ್ ಗೋವಿಂದಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರವಾಹ ಕಾಲುವೆ ನಿರ್ಮಾಣವಾಗುತ್ತಿದ್ದರೆ ಅದನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಆಂಧ್ರದ ಪೆನ್ನಾ ಜಲಾಶಯದಲ್ಲಿ ಅವಕಾಶ ಇತ್ತು. ಅಲ್ಲಿ 20 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಬಹುದಾಗಿತ್ತು. ಆಂಧ್ರ ಸರ್ಕಾರ ಪದೇ ಪದೇ ಪ್ರಸ್ತಾವ ಸಲ್ಲಿಸುತ್ತಲೇ ಇದ್ದರೂ ರಾಜ್ಯ ಅದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಹೀಗಾಗಿ ಆಂಧ್ರದವರು ಇದೀಗ ಜಲಾಶಯ ಭರ್ತಿಮಾಡುವುದಕ್ಕೆ ಬೇರೆ ದಾರಿ ಕಂಡುಕೊಂಡಿದ್ದಾರೆ. ನಾವೀಗ ಕಾಲುವೆ ನಿರ್ಮಿಸಿ ಎಂದರೂ ಅವರು ನಿರ್ಮಿಸಿ ನೀರು ಪಡೆಯುವ ಸಾಧ್ಯತೆ ಇದ್ದಂತಿಲ್ಲ’ ಎಂದು ಅವರು ಮಾಹಿತಿ ನೀಡಿದರು.

ಪೋಲಾದ ನೀರೇ ಅಧಿಕ: ‘ತುಂಗಭದ್ರಾ ಅಣೆಕಟ್ಟೆ ನಿರ್ಮಾಣವಾಗಿ 70 ವರ್ಷ ಕಳೆದಿದೆ. ಕಳೆದ ವರ್ಷವೂ ಸೇರಿ ಒಟ್ಟು ಒಂಭತ್ತು ವರ್ಷ ಬಿಟ್ಟರೆ 61 ವರ್ಷವೂ ವಾರ್ಷಿಕ ಸರಾಸರಿ 200ರಿಂದ 300 ಟಿಎಂಸಿ ಅಡಿಯಷ್ಟು ನೀರು ನದಿಗೆ ಹರಿದು ಹೋಗಿದೆ. ಹೀಗೆ ಲಭ್ಯವಾದ ‍‍ನೀರನ್ನೇ ಸದ್ಬಳಕೆ ಮಾಡಿಕೊಂಡಿರುವ ಆಂಧ್ರಪ್ರದೇಶ, ಪೋಲಾವರಂ ಯೋಜನೆ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಬದಲಿ ಯೋಜನೆ ರೂಪಿಸಿಕೊಂಡಿದೆ. ಇದೀಗ ಆಂಧ್ರಕ್ಕೆ ಕರ್ನಾಟಕದ ಅಗತ್ಯವೇ ಇಲ್ಲದೆ ನೀರಿನ ಮೂಲ ದೊರಕಿಬಿಟ್ಟಿದೆ. ಸಹಜವಾಗಿಯೇ ಅವರು ಪ್ರತೀಕಾರ ತೀರಿಸುವ ರೀತಿಯಲ್ಲಿ ನಮ್ಮ ನವಲಿ ಸಮತೋಲಿತ ಜಲಾಶಯ ಪ್ರಸ್ತಾಪವನ್ನು ವಿರೋಧಿಸಬಹುದು’ ಎಂದು ನೀರಾವರಿ ತಜ್ಞರೊಬ್ಬರು ಹೇಳಿದರು.

ವಿಳಂಬವಾದಷ್ಟೂ ವೆಚ್ಚ ಅಧಿಕ: ‘ನವಲಿ ಸಮತೋಲಿತ ಜಲಾಶಯ ನಿರ್ಮಾಣ ಕುರಿತಂತೆ ₹15,601 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್)ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ 7,500 ಹೆಕ್ಟೇರ್‌ನಷ್ಟು ಭೂಸ್ವಾಧೀನ ಮಾಡಬೇಕಿದೆ‘ ಎಂದು ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮ ಕೇಂದ್ರೀಯ ವಲಯದ ಮುಖ್ಯ ಎಂಜಿನಿಯರ್ ಎಲ್‌.ಬಸವರಾಜ್‌ ಈಚೆಗೆ ‘ಪ್ರಜಾವಾಣಿ’ಗೆ ತಿಳಿಸಿದ್ದರು. ‘ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬವಾದಷ್ಟೂ ಖರ್ಚು ಹೆಚ್ಚುತ್ತಿದೆ. ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳುವ ಅಗತ್ಯ ಇದೆ, ನೀರಾವರಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಚಾರದಲ್ಲಿ ಆಂಧ್ರದಿಂದ ನಾವು ಕಲಿಯುವ ಪಾಠ ಸಾಕಷ್ಟಿದೆ’’ ಎಂದು ಗೋವಿಂದಲು ಅಭಿಪ್ರಾಯಪಟ್ಟರು.

‘ಅತ್ಯಂತ ವೈಜ್ಞಾನಿಕ ಹಂಚಿಕೆ’

‘ಅಂತರರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ಬಚಾವತ್ ಆಯೋಗದ ತೀರ್ಪಿನಂತೆ ಅತ್ಯಂತ ವೈಜ್ಞಾನಿಕವಾಗಿ ಹಂಚಿಕೆಯಾಗಿರುವ ನೀರಾವರಿ ಯೋಜನೆ ತುಂಗಭದ್ರಾ ಜಲಾಶಯ ಯೋಜನೆ.  ಇಲ್ಲಿ ವಾರ್ಷಿಕವಾಗಿ ಲಭ್ಯವಿರುವ 212 ಟಿಎಂಸಿ ಅಡಿ ನೀರನ್ನು ಪೂರ್ತಿಯಾಗಿ ಬಳಸಿಕೊಂಡಿದ್ದೇ ಇಲ್ಲ.

ಒಪ್ಪಂದದಂತೆ ಕರ್ನಾಟಕಕ್ಕೆ ಶೇ 65ರಷ್ಟು ಹಾಗೂ ಆಂಧ್ರಕ್ಕೆ ಶೇ 35ರಷ್ಟು ನೀರಿನ ಪಾಲು ಇದೆ (ಆಂಧ್ರ ವಿಭಜನೆಗೊಂಡು ತೆಲಂಗಾಣ ನಿರ್ಮಾಣವಾಗಿದ್ದರೂ ನೀರಿನ ಪಾಲು ಅಷ್ಟೇ). ಪ್ರವಾಹ ನೀರನ್ನು ಬಳಸುವುದರಲ್ಲಿ ಜಾಣತನ ತೋರಿದರೆ ಮಾತ್ರ ನೀರಿನ ಸಮರ್ಥ ಬಳಕೆ ಸಾಧ್ಯವಾದೀತು. ಇಲ್ಲವಾದರೆ ರಾಜ್ಯಕ್ಕೆ ಮಾತ್ರ ಭಾರಿ ನಷ್ಟ ಉಂಟಾಗುತ್ತದೆ’ ಎಂದು ಗೋವಿಂದಲು ಅಭಿಪ್ರಾಯಪಟ್ಟರು.

28 ಟಿಎಂಸಿ ಅಡಿ ಹೂಳು

1953ರಲ್ಲಿ ತುಂಗಭದ್ರಾ ಅಣೆಕಟ್ಟೆ ನಿರ್ಮಾಣ ಕೊನೆಗೊಂಡಿತ್ತು. ಜಲಾಶಯದಲ್ಲಿ ವರ್ಷಕ್ಕೆ 0.45 ಟಿಎಂಸಿ ಅಡಿಯಷ್ಟು ಹೂಳು ತುಂಬುತ್ತದೆ. ಹೀಗಾಗಿ ಸದ್ಯ ಜಲಾಶಯದಲ್ಲಿ 28 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು ನೀರು ಸಂಗ್ರಹ ಸಾಮರ್ಥ್ಯ 133 ಟಿಎಂಸಿ ಅಡಿಯಿಂದ 105 ಟಿಎಂಸಿ ಅಡಿಗೆ ಕುಸಿದಿದೆ.

1 ಟಿಎಂಸಿ ಅಡಿ ಹೂಳು ಅಂದರೆ 50 ಲಕ್ಷ ಲಾರಿ ಲೋಡ್‌ನಷ್ಟಾಗುತ್ತದೆ. ಒಂದು ಲೋಡ್‌ ಹೂಳನ್ನು ಸಾಗಿಸಲು ಕನಿಷ್ಠ ₹1 ಸಾವಿರ ಖರ್ಚಿನ ಲೆಕ್ಕ ಇಟ್ಟುಕೊಂಡರೂ ₹500 ಕೋಟಿ ಹಾಗೂ 28 ಟಿಎಂಸಿ ಅಡಿ ಹೂಳೆತ್ತಲು ₹14000 ಕೋಟಿ ಹಣ ಬೇಕು ಎಂದು ಗೋವಿಂದಲು ಅವರು ನಿಖರ ಲೆಕ್ಕ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT