ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಬ್ಯಾಂಕ್‌ ಖಾತೆಗಳಿಂದ ಹಣ ಮಂಗಮಾಯ

ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಆರೋಪ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿ ಬಂದಿವೆ. ಕಾಲೇಜಿಗೆ ಸಂಬಂಧಿಸಿದ ಬ್ಯಾಂಕಿನ 16 ಉಳಿತಾಯ ಖಾತೆಗಳಿಂದ ಅಂದಾಜು ₹3 ಕೋಟಿ ಹಣವನ್ನು ಬಿಡಿಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

15 ಖಾತೆಗಳು ಎಸ್‌ಬಿಐ, ಒಂದು ಖಾತೆ ಸಿಂಡಿಕೇಟ್‌ ಬ್ಯಾಂಕಿನಲ್ಲಿದೆ. ಹೆಚ್ಚಿನ ಹಣ ಬಿಡಿಸಿಕೊಂಡಿರುವುದರಿಂದ ಕಾಲೇಜಿನ ದೈನಂದಿನ ಖರ್ಚು–ವೆಚ್ಚ, ಅರೆಕಾಲಿಕ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಗೊತ್ತಾಗಿದೆ. ಕಾಲೇಜು ಮೂಲಗಳು ಇದನ್ನು ‘ಪ್ರಜಾವಾಣಿ’ಗೆ ದೃಢಪಡಿಸಿವೆ.

ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಸಂಬಂಧಿಸಿದ ಖಾತೆಯಲ್ಲಿ ₹80 ಲಕ್ಷ, ಕಾಲೇಜು ಅಭಿವೃದ್ಧಿ ಹಣಕಾಸು ವಹಿವಾಟು ಸಮಿತಿಯ (ಸಿಡಿಎಫ್‌) ಬ್ಯಾಂಕ್‌ ಖಾತೆಯಲ್ಲಿ ₹40 ಲಕ್ಷ ಹಣ ಇತ್ತು. ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಾದರಿಯಲ್ಲಿ ಕೆಲಸ ನಿರ್ವಹಿಸುವ ರೇಂಜರ್ಸ್‌ ರೋವರ್ಸ್‌, ರೆಡ್‌ಕ್ರಾಸ್‌ ಘಟಕ, ಪರಂಪರೆ ಕೂಟ, ರೆಡ್‌ ರಿಬ್ಬನ್‌, ಎನ್‌ಎಸ್‌ಎಸ್‌ ಸ್ವ ಆರ್ಥಿಕ ಘಟಕ, ಕ್ರೀಡಾ ಘಟಕ, ಸಾಂಸ್ಕೃತಿಕ ವಿಭಾಗ, ಗ್ರಂಥಾಲಯ ಮತ್ತು ರೀಡಿಂಗ್‌ ರೂಂ ಸೇರಿದಂತೆ ಇತರೆ ವಿಭಾಗಗಳ ಖಾತೆಗಳಿಂದ ಹಣ ವಿತ್‌ಡ್ರಾ ಮಾಡಲಾಗಿದೆ.

ಪ್ರತಿಯೊಂದು ವಿಭಾಗಕ್ಕೆ ಒಬ್ಬ ಮುಖ್ಯಸ್ಥರು ಇರುತ್ತಾರೆ. ಯಾವುದಾದರೂ ಉದ್ದೇಶಕ್ಕೆ ಹಣ ಖರ್ಚು ಮಾಡಬೇಕಾದರೆ ಪ್ರಾಂಶುಪಾಲರೊಂದಿಗೆ ಚರ್ಚಿಸಿ, ಸಭೆಯಲ್ಲಿ ಮಂಡಿಸಿ, ಒಪ್ಪಿಗೆ ಪಡೆದ ನಂತರ ಮುಂದುವರೆಯಬೇಕು. ಆದರೆ, ಚೆಕ್‌ ಕೊಡುವ ಅಧಿಕಾರ ಪ್ರಾಂಶುಪಾಲರಿಗಷ್ಟೇ ಇದೆ. ಆಯಾ ವಿಭಾಗಗಳಿಂದ ಹಣ ಬಿಡಿಸಿಕೊಂಡಿದ್ದರೂ ಆ ವಿಭಾಗದ ಮುಖ್ಯಸ್ಥರಿಗೆ ಈ ವಿಷಯವೇ ಗೊತ್ತಿಲ್ಲ.

ಈ ಹಿಂದಿನ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಜಿ. ಕನಕೇಶಮೂರ್ತಿ ಅವರು ಏ.30ರಂದು ಕೆಲಸದಿಂದ ನಿವೃತ್ತರಾಗಿದ್ದಾರೆ. ಮೇ 1ರಂದು ಪ್ರೊ.ನಟರಾಜ ಪಾಟೀಲ ಎಂಬುವರು ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಅವರು ಹಿಂದಿನ ಪ್ರಾಂಶುಪಾಲರಿಂದ ಲೆಕ್ಕಪತ್ರದ ಮಾಹಿತಿಯನ್ನೇ ಪಡೆದುಕೊಂಡಿಲ್ಲ. ವಿಷಯ ತಡವಾಗಿ ಗೊತ್ತಾದ ನಂತರ ಅವರು ಪೇಚಿಗೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ. ಹಿಂದಿನ ಪ್ರಾಂಶುಪಾಲರಿಂದ ಈಗ ಮಾಹಿತಿ ಕೇಳಿದ್ದಾರೆ ಎಂದು ಗೊತ್ತಾಗಿದೆ.

‘ಯಾರೇ ನಿವೃತ್ತರಾಗುವುದಕ್ಕೂ ಮುನ್ನ ಆರು ತಿಂಗಳ ಮುಂಚೆಯೇ ಲೆಕ್ಕಪರಿಶೋಧನೆ ನಡೆಸಬೇಕು. ಮೂರು ತಿಂಗಳು ಇದ್ದಾಗ ಯಾವುದೇ ಹಣಕಾಸು ವಹಿವಾಟು ನಡೆಸುವಂತಿಲ್ಲ. ಆದರೆ, 16 ಖಾತೆಗಳಿಂದ ಹಣ ಬಿಡಿಸಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎನ್ನುವುದು ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳ ಒಕ್ಕೊರಲ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT