ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹500 ಕೋಟಿ ವೆಚ್ಚದಲ್ಲಿ ಹಂಪಿ ಸಮಗ್ರ ಅಭಿವೃದ್ಧಿ: ಸಚಿವ ಸಿ.ಪಿ. ಯೋಗೇಶ್ವರ

Last Updated 30 ಜೂನ್ 2021, 9:36 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): '₹500 ಕೋಟಿ ವೆಚ್ಚದಲ್ಲಿ ಹಂಪಿಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ತಿಳಿಸಿದರು.

ಹಂಪಿ ಜೂ ಬಳಿ ಸರ್ಕಾರಕ್ಕೆ ಸೇರಿದ 200 ಎಕರೆ ಜಾಗದಲ್ಲಿ ಸುಸಜ್ಜಿತ ತ್ರಿ ಸ್ಟಾರ್ ಹೋಟೆಲ್ ನಿರ್ಮಿಸಲಾಗುವುದು. ಅದಕ್ಕೆ ₹18ರಿಂದ 20 ಕೋಟಿ ವೆಚ್ಚವಾಗಲಿದೆ. ವಾರದೊಳಗೆ ಭೂಮಿ ಪೂಜೆ ನೆರವೇರಿಸಲಾಗುವುದು. ವಾಹನ ನಿಲುಗಡೆಗೆ ಪಾರ್ಕಿಂಗ್, ಹೆಲಿಪ್ಯಾಡ್, ಥೀಮ್ ಪಾರ್ಕ್ ಹಾಗೂ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಟ್ಟಡ ನಿರ್ಮಿಸಲಾಗುವುದು. ಅದಕ್ಕೆ ಬಹಳ ಕಡಿಮೆ ದರ ನಿಗದಿಪಡಿಸಲಾಗುವುದು. ಹಂಪಿಯ ಇತಿಹಾಸ ಯುವಜನಾಂಗಕ್ಕೆ ತಿಳಿಸುವುದು ಇದರ ಉದ್ದೇಶವಾಗಿದೆ' ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ ಮತ್ತೊಂದು ಹಂಪಿ ನಿರ್ಮಿಸಲು ಆಗುವುದಿಲ್ಲ. ಆದರೆ, ಅಲ್ಲಿ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಿ ಅಧಿಕ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ ಕೆಲಸ ಪ್ರಗತಿಯಲ್ಲಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು

ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆಗೊಂಡ ನಂತರ ಹೋಂ ಸ್ಟೇಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಹೋಂ ಸ್ಟೇಗಳಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರವಾಸಿಗರಿಗೂ ಉಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ವಿವರಿಸಿದರು.
ಹಂಪಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ನಡುವೆ ಹಂಚಿ ಹೋಗಿದೆ. ಈಗ ಒಂದೇ ಪ್ರಾಧಿಕಾರ ಇದೆ. ಎರಡೂ ಕಡೆ ಪ್ರತ್ಯೇಕವಾಗಿ ಪ್ರಾಧಿಕಾರ ರಚಿಸಿ, ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಬೇಡಿಕೆ ಇದ್ದು, ಅದರ ಬಗ್ಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದಲ್ಲಿ ರೋಪ್ ವೇ, ದ್ವಿಪಥ ರಸ್ತೆ, ಸುತ್ತಲೂ ಪರಿಕ್ರಮಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಬೆಟ್ಟ ಹತ್ತಲು ತೊಂದರೆಯಾಗುತ್ತದೆ. ರೋಪ್ ವೇ ನಿರ್ಮಿಸಿದರೆ ಅವರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಅಂಜನಾದ್ರಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲ. ಪೌರಾಣಿಕ ಹಿನ್ನೆಲೆ ಅಥವಾ ಧಾರ್ಮಿಕ‌ದೃಷ್ಟಿಯಲ್ಲೂ ಇದೇ ಹನುಮ ಹುಟ್ಟಿದ ಸ್ಥಳ ಎನ್ನುವುದು ಜನಜನಿತ. ಅಷ್ಟೇ ಅಲ್ಲ, ರಾಮಾಯಣ ಸರ್ಕ್ಯೂಟ್ ನಲ್ಲೂ ಇದರ ಪ್ರಸ್ತಾಪವಿದೆ.ಹೀಗಿರುವಾಗ ತಿರುಪತಿ ದೇವಸ್ಥಾನ ಮಂಡಳಿಯವರು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ರಾಜಕೀಯ ವಿಚಾರದ ಕುರಿತು ನಾನೇನೂ ಮಾತನಾಡಲಾರೆ ಎಂದು ಹೇಳಿ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT